Advertisement

ಭ್ರಷ್ಟರಿದ್ದರೆ ಬಲೆಗೆ ಬೀಳಿಸಿ

03:32 PM Oct 28, 2018 | Team Udayavani |

ಬೆಳಗಾವಿ: ಸರಕಾರಿ ಕಚೇರಿಗಳಲ್ಲಿ ಲಂಚ ಕೊಟ್ಟು ಸುಸ್ತಾಗಿದ್ದರೆ, ಲಂಚಕ್ಕಾಗಿ ನಿಮ್ಮನ್ನು ಯಾರಾದರೂ ಪೀಡಿಸುತ್ತಿದ್ದರೆ, ನಿಮ್ಮ ಆಸುಪಾಸು ಯಾರಾದರೂ ಭ್ರಷ್ಟರಿದ್ದರೂ ಅವರ ವಿರುದ್ಧ ದೂರು ನೀಡಲು ಆಗದಿದ್ದರೆ ಇನ್ನು ಮುಂದೆ ಭಯ ಪಡುವ ಅಗತ್ಯವಿಲ್ಲ. ಗೌಪ್ಯವಾಗಿಯೋ ಅಥವಾ ನೇರವಾಗಿ ಭ್ರಷ್ಟರನ್ನು ಬಲೆಗೆ ಬೀಳಿಸಲು ಅಖಾಡಕ್ಕೆ ಇಳಿಯಬಹುದಾಗಿದೆ. ರಾಷ್ಟ್ರೀಯ ಜಾಗೃತಿ ಆಯೋಗವು ಭ್ರಷ್ಟಾಚಾರ ನಿರ್ಮೂಲನೆ ಮಾಡಿ-ನವಭಾರತ ನಿರ್ಮಿಸಿ ಎಂಬ ಘೋಷ 
 ಕ್ಯದೊಂದಿಗೆ ದೇಶಾದ್ಯಂತ ಸಪ್ತಾಹ ನಡೆಸಲು ಮುಂದಾಗಿದೆ. ಮುಕ್ತವಾಗಿ ಯಾರಿಗೂ ಹೆದರದೇ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೂಗೆಯಲು ಎಲ್ಲರೂ ಕೈ ಜೋಡಿಸಬೇಕಾಗಿದೆ. ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಸಪ್ತಾಹದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬಹುದಾಗಿದೆ. ದೇಶದಿಂದ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಲು ಎಲ್ಲರೂ ಕೈಜೋಡಿಸಬೇಕಾಗಿದೆ.

Advertisement

ಅ. 29ರಿಂದ ನವೆಂಬರ್‌ 3ರವರೆಗೆ ದೇಶಾದ್ಯಂತ ಭ್ರಷ್ಟಾಚಾರ ತಡೆ ಜಾಗೃತಿ ಸಪ್ತಾಹ ನಡೆಸಲು ಉದ್ದೇಶಿಸಲಾಗಿದೆ. ಸಪ್ತಾಹದ ನಿಮಿತ್ತ ಬೆಳಗಾವಿ ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಭ್ರಷ್ಟಾಚಾರ ವಿರುದ್ಧ ತೊಡೆ ತಟ್ಟಿರುವ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪ್ರಮುಖ ಸಂಸ್ಥೆಯಾಗಿದ್ದು, ಈ ನಿಟ್ಟಿನಲ್ಲಿ ಐದೂ ಜಿಲ್ಲೆಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಈಗಾಗಲೇ ಎಸಿಬಿ ಎಲ್ಲ ಸಿದ್ಧತೆ ಪೂರ್ಣಗೊಳಿಸಿದ್ದು, ಸಪ್ತಾಹ ನಿಮಿತ್ತ ಯಾವ ದಿನ, ಯಾವ ಕಾರ್ಯಕ್ರಮ ಎಂಬ ಬಗ್ಗೆ ಪಟ್ಟಿಯನ್ನೂ ಸಿದ್ಧಗೊಳಿಸಿದೆ. 

ಭ್ರಷ್ಟರನ್ನು ಹೆಡೆಮುರಿ ಕಟ್ಟಿ: ನಿಮ್ಮ ಸುತ್ತಲಿನ ಸರಕಾರಿ ನೌಕರರು ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಗಳಿಸಿದ್ದು ಕಂಡು ಬಂದರೆ ಕೂಡಲೇ ಎಸಿಬಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಕೆಲವೇ ವರ್ಷಗಳಲ್ಲಿ ದೊಡ್ಡ ದೊಡ್ಡ ಬಂಗಲೆ ನಿರ್ಮಿಸಿ, ಐಷಾರಾಮಿ ಕಾರು ಹೊಂದಿರುವವರ ಬಗ್ಗೆ ಜನ ಕಣ್ಣಿಟ್ಟಿರಬೇಕು. ತಮ್ಮ ಆದಾಯದಲ್ಲಿಯೇ ಇಷ್ಟೊಂದು ಆಸ್ತಿ ಮಾಡಿದವರು ಭಯ ಪಡಬೇಕಾದ ಅಗತ್ಯವಿಲ್ಲ. ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡು, ಜನರಿಂದ ಲಂಚ ಪಡೆದು ಅಕ್ರಮ ಆಸ್ತಿ ಗಳಿಸಿರುವ ಭ್ರಷ್ಟರನ್ನು ಹೆಡೆಮುರಿ ಕಟ್ಟಲು ಎಸಿಬಿ ಸನ್ನದ್ಧವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರೂ ಎಚ್ಚೆತ್ತುಕೊಂಡು ತಮ್ಮ ಆಸುಪಾಸು ಇರುವ ಭ್ರಷ್ಟರ ಬಗ್ಗೆ ಮಾಹಿತಿ ಕೊಟ್ಟು ಭ್ರಷ್ಟಾಚಾರ ನಿರ್ಮೂಲನೆಗೆ ಸಿದ್ಧರಾಗಬೇಕಿದೆ. ಬೆಳಗಾವಿ ಉತ್ತರ ವಲಯದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್‌, ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ವಿವಿಧ ಉಪನ್ಯಾಸ ಕಾರ್ಯಕ್ರಮ, ಜಾಗೃತಿ ರ್ಯಾಲಿ ಸೇರಿದಂತೆ ಏಳು ದಿನಗಳ ಸಾರ್ವಜನಿಕರನ್ನು ಎಚ್ಚರಿಸುವ ಕಾರ್ಯ ನಡೆಯಲಿದೆ. 

ಭ್ರಷ್ಟಾಚಾರ ಯಾವುದು?
ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಕ್ಕೆ ಅಧಿಕಾರಿಗಳಾಗಲೀ ಅಥವಾ ಸಿಬ್ಬಂದಿ ಅನವಶ್ಯಕವಾಗಿ ವಿಳಂಬ ಮಾಡುತ್ತಿದ್ದರೆ, ಬೇನಾಮಿ ಆಸ್ತಿ ಹೊಂದಿದ್ದರೆ, ಅಕ್ರಮ ಆಸ್ತಿ ಗಳಿಸಿರುವ ಸರ್ಕಾರಿ ನೌಕರರು, ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿದ್ದರೆ, ಕಚೇರಿಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸದೇ ಇನ್ನೊಬ್ಬರ ಹೆಸರಿಗೆ ಅದನ್ನು ಕೊಟ್ಟಿದ್ದರೆ, ಸರಕಾರಿ ಕೆಲಸಕ್ಕಾಗಿ ಲಂಚದ ಬೇಡಿಕೆ ಇಟ್ಟಿದ್ದರೆ, ಲಂಚದ ರೂಪದಲ್ಲಿ ಬೇರೆ ಪ್ರತಿಫಲ ಪಡೆಯುವುದು, ಸಾರ್ವಜನಿಕ ಹುದ್ದೆ ಬಳಸಿಕೊಂಡು ಅವ್ಯವಹಾರ ನಡೆಸಿದ್ದರೆ, ಅನವಶ್ಯಕವಾಗಿ ಕಿರುಕುಳ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದರೆ, ಸರ್ಕಾರದಿಂದ ಬಂದ ಅನುದಾನ ದುರುಪಯೋಗ ಪಡಿಸಿಕೊಂಡಿದ್ದರೆ, ನಿಗದಿತ ಅವಧಿಗಿಂತ ಹೆಚ್ಚು ದಿನವಾದರು ಕಡತ ವಿಲೇವಾರಿ ಮಾಡದಿರುವುದು ಕಂಡು ಬಂದರೆ ಸಾರ್ವಜನಿಕರು ದೂರು ನೀಡಬಹುದಾಗಿದೆ.

ನಮ್ಮೊಂದಿಗೆ ಕೈಜೋಡಿಸಿ
ಭ್ರಷ್ಟಾಚಾರ ತಡೆಗೆ ಎಷ್ಟೇ ಕಾನೂನು ಬಂದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಂಡು ಯಾರಿಗೂ ಭಯ ಪಡದೇ ಭ್ರಷ್ಟರ ಬಗೆಗಿನ ನಿಖರ ಮಾಹಿತಿಯನ್ನು ನೇರವಾಗಿಯೋ ಅಥವಾ ಗೌಪ್ಯವಾಗಿ ತಿಳಿಸಬಹುದಾಗಿದೆ. ದೂರು ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಡೆಯಲಿರುವ ಭ್ರಷ್ಟಾಚಾರ ತಡೆ ಸಪ್ತಾಹಕ್ಕೆ ಎಲ್ಲರೂ ಕೈ ಜೋಡಿಸಬೇಕು.
ಅಮರನಾಥ ರೆಡ್ಡಿ, ಎಸ್‌ಪಿ, ಬೆಳಗಾವಿ ಎಸಿಬಿ

Advertisement

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next