Advertisement

ಕಾಂಗ್ರೆಸ್‌ ಗೆದ್ದರೆ ಕರ್ನಾಟಕವೇ ಎಟಿಎಂ: ಜೆ.ಪಿ.ನಡ್ಡಾ

06:34 PM Apr 19, 2023 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ನವರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ, ರಾಜ್ಯವನ್ನು ಎಟಿಎಂ ಮಾಡಿಕೊಂಡು ಲೂಟಿ ಮಾಡಲು ಹವಣಿಸುತ್ತಿದ್ದಾರೆ. ಹೀಗಾಗಿ ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷೆ ಜೆ.ಪಿ. ನಡ್ಡಾ ಕರೆಕೊಟ್ಟರು.

Advertisement

ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕರ್ನಾಟಕ ಶಕ್ತಿ ಕೇಂದ್ರ ಪದಾಧಿಕಾರಿಗಳ ವಿಭಾಗ ಮಟ್ಟದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಒಂದೆಡೆ ಪ್ರಧಾನಿ ಮೋದಿ ನಿರಂತರವಾಗಿ ದೇಶದ ಸಲುವಾಗಿ ಹೋರಾಡುತ್ತಿದ್ದಾರೆ. ಅವರ ಎದುರಿಗೆ ನಿಂತವರು 70 ವರ್ಷಗಳ ಕಾಲ ಒಡೆದು ಆಳಿದವರು. ಅವರೆಲ್ಲ ತಮ್ಮ ಪರಿವಾರದ ಸಲುವಾಗಿ ಕೆಲಸ ಮಾಡಿದವರು. ಇಂದಿಗೂ ಕಾಂಗ್ರೆಸ್‌ ಅದನ್ನೇ ಮಾಡುತ್ತಿದೆ. ನಮ್ಮದು ರಾಷ್ಟ್ರವಾದದ ಚಿಂತನೆಯ ಪಕ್ಷ. ಮತ್ತೂಂದೆಡೆ ಅವರದ್ದು ಪರಿವಾರ ವಾದದ ಚಿಂತನೆಯ ಪಕ್ಷ. ಕರ್ನಾಟಕವನ್ನು ಹೇಗೆ ಲೂಟಿ ಮಾಡಬೇಕೆಂದು ಅವರು ಯೋಚಿಸುತ್ತಿದ್ದಾರೆ. ನಾವು ಯಾರ ಎದುರು ಸ್ಪರ್ಧಿಸುತ್ತಿದ್ದೇವೆ, ಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ ಎಂಬುದು ಮುಖ್ಯ ಎಂದರು.

ಸಿದ್ದರಾಮಯ್ಯ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಚಟುವಟಿಕೆಗಳಲ್ಲಿದ್ದ ಪಿಎಫ್‌ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್‌
ಪಡೆದರು. ಅವರ ಕೆಲಸವೇ ಅದು. ಅವರನ್ನು ಸೋಲಿಸಬೇಕೆಂದರೆ ಕಮಲ ಅರಳಿಸಲೇಬೇಕು. ನಮ್ಮದು ತಳಮಟ್ಟದ ಪಕ್ಷ. ನಮ್ಮ ಪಕ್ಷ ದೇಶದಲ್ಲಿ ಒಂದೇ ಕಾನೂನು ಇರಬೇಕು ಎಂದಿತ್ತು. ಇದೇ ಕಾರಣಕ್ಕೆ ಆರ್ಟಿಕಲ್‌ 370 ಕಿತ್ತೂಗೆದೆವು. ಇದೀಗ ರಾಮಮಂದಿರ ನಿರ್ಮಾಣ ಆಗುತ್ತಿದೆ. ನಮ್ಮದೇನಿದ್ದರೂ ಅಭಿವೃದ್ಧಿ ರಾಜಕೀಯ. ನಮ್ಮ ಇತಿಹಾಸ ಗೌರವಶಾಲಿಯಾಗಿದೆ. ದೇಶಾದ್ಯಂತ 1300 ಶಾಸಕರಿದ್ದಾರೆ. ಅತಿ ಹೆಚ್ಚು ಸಂಸದರು ಪಕ್ಷದವರಾಗಿದ್ದಾರೆ ಎಂದು ಹೇಳಿದರು.

ಮೊಬೈಲ್‌, ಔಷಧಗಳ ಉತ್ಪಾದನೆ ಸೇರಿದಂತೆ ಹಲವು ದೇಶದಲ್ಲಿಯೇ ತಯಾರಾಗುತ್ತಿದೆ. ನಮ್ಮದೀಗ ಆತ್ಮ ನಿರ್ಭರ ಭಾರತವಾಗಿದೆ. ಕೈ ಒಡ್ಡುವ ದೇಶವಲ್ಲ, ನೀಡುವ ದೇಶವಾಗಿದೆ. ವಿಶ್ವದಲ್ಲೇ ಐದನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ. ಆದರೆ ಕಾಂಗ್ರೆಸ್‌ನವರು ಆರ್ಥಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಏಕೆಂದರೆ ಅವರು ಹೆಚ್ಚಿಗೆ ಓದಿದವರಲ್ಲ. ಹೀಗಾಗಿ ಅವರಿಗೆ ಅರ್ಥ
ಆಗುವುದಿಲ್ಲ. ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಅಭಿವೃದ್ಧಿಯಾಗಿದೆ. ಮೊದಲು ಮುಂಬಯಿ ಸೇರಿದಂತೆ ಎಲ್ಲೆಲ್ಲೋ ಐಐಟಿ ಇದ್ದವು.

Advertisement

ಇಂದು ಧಾರವಾಡದಲ್ಲೂ ಐಐಟಿ ಆಗಿದೆ. ಇದಕ್ಕೆಲ್ಲ ಕಾರಣ ಜನರು ಬಿಜೆಪಿಗೆ ಮತ ಹಾಕಿದ್ದು. ಇದನ್ನು ನೀವು ಜನರಿಗೆ ತಿಳಿಸಬೇಕು ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌, ಮುಖಂಡರಾದ ಅರವಿಂದ ಬೆಲ್ಲದ, ಅಶೋಕ ಕಾಟವೆ, ಎಸ್‌.ವಿ. ಸಂಕನೂರ,
ಮಹಾಂತೇಶ ಕವಟಗಿಮಠ, ಲಿಂಗರಾಜ ಪಾಟೀಲ, ಸಂಜಯ ಕಪಟಕರ, ಪಕ್ಷದ ಅಭ್ಯರ್ಥಿಗಳಾದ ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ನಾಗರಾಜ ಛಬ್ಬಿ, ಡಾ| ಕ್ರಾಂತಿಕಿರಣ ಇದ್ದರು. ಬಸವರಾಜ ಕುಂದಗೋಳಮಠ ಸ್ವಾಗತಿಸಿದರು. ದತ್ತಮೂರ್ತಿ ಕುಲಕರ್ಣಿ ನಿರೂಪಿಸಿದರು. ರಾಯಚೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ನಾಯಕ ಮತ್ತು ಸದಾಶಿವ ಶೆಟ್ಟರ ಅವರ ಮೊಮ್ಮಗ ಶಶಾಂಕ ಶೆಟ್ಟರ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಎಲ್ಲಾ ಚುನಾವಣೆಗಳು ಮಹತ್ವದ್ದಾಗಿರುತ್ತೆ. ಈ ಚುನಾವಣೆಯೂ ಮಹತ್ವದ್ದು. ಅಭ್ಯರ್ಥಿಗಳು ನಾಳೆ ಶಾಸಕರಾಗುತ್ತಾರೆ. ಆದರೆ ಕುರ್ಚಿ, ಹುದ್ದೆಗಾಗಿ ಅಲ್ಲ. ಜನರ ಕೆಲಸ ಮಾಡಲು. ಆದ್ದರಿಂದ ಎಲ್ಲರೂ ಕಮಲ ಅರಳಿಸಬೇಕು. ಚುನಾವಣೆಯಲ್ಲಿ ಗೆಲ್ಲಲು ಎಲ್ಲ ರೀತಿಯ ಶಕ್ತಿ ಧಾರೆ ಎರೆಯಬೇಕು. ಒಂದು ದೇಶದಲ್ಲಿ ಎರಡು ವಿಚಾರಧಾರೆ ನಡೆಯೋಲ್ಲ. ಒಂದೇ ವಿಚಾರದಲ್ಲಿ ಮುನ್ನಡೆಯಲು ಇದೊಂದೇ ಮಾರ್ಗ.
*ಜೆ.ಪಿ. ನಡ್ಡಾ, ಜಿಬೆಪಿ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next