ದೇವನಹಳ್ಳಿ: ಈಗಾಗಲೇ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ತಿಳಿಸಿರುವಂತೆ, ಪ್ರತಿ ಮನೆಯ ಯಜಮಾನಿಗೆ 2000ರೂ. ಹಾಗೂ 200 ಯೂನಿಟ್ ಉಚಿತ ವಿದ್ಯುತ್ ಮತ್ತು 10 ಕೆ.ಜಿ. ಅಕ್ಕಿ ನೀಡುವ ಭರವಸೆಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ.100 ಈಡೇರಿಸಲಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಡು ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಬೆಂಬಲಿಸಿ: ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಜನರ ಮನೆ ಬಾಗಿಲಿಗೆ ಬಂದಿದ್ದು, ಅದರ ಸದುಪಯೋಗ ವನ್ನೂ ಪಡೆದುಕೊಂಡಿ ರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕಾಂಗ್ರೆಸ್ ರಾಜ್ಯ ಮತ್ತು ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ, ಉತ್ತಮ ಆಡಳಿತ ಮತ್ತು ಸುಭದ್ರತೆ ಸರ್ಕಾರ ನಡೆಯುತ್ತದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಕ್ಷೇತ್ರದ ಜನತೆಗೆ ಮನವಿ ಮಾಡಿದರು.
ದಂಧೆಯಲ್ಲಿ ಮುಳುಗಿದ್ದಾರೆ: ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ದುರಾಡಳಿತ ಸರ್ಕಾರ ಜನಸಾಮಾನ್ಯರ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬರೆ ಎಳೆದಿದ್ದು, ಗಾಯ ಹಾರುವ ಮುನ್ನವೇ ಮತ್ತೂಂದು ವಸ್ತು ಬೆಲೆ ಏರಿಕೆ ಮಾಡುತ್ತಿರುತ್ತದೆ. ಏನೇ ಪ್ರತಿಭಟನೆಗಳು ಬಿಜೆಪಿ ಸರ್ಕಾರದ ವಿರುದ್ಧ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಬಿಜೆಪಿ ಒಂದು ಭ್ರಷ್ಟ ಸರ್ಕಾರವಾಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಹಾಲಿ ಶಾಸಕರು ರಿಯಲ್ ಎಸ್ಟೇಟ್ ದಂಧೆಯಲ್ಲಿ ಮುಳುಗಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಕಾಂಗ್ರೆಸ್‌ಗೆ ಒಮ್ಮೆ ಅಧಿಕಾರ ಕೊಟ್ಟರೆ, ಕ್ಷೇತ್ರವನ್ನು ಮಾದರಿಯನ್ನಾಗಿಸುವಲ್ಲಿ ಸಂದೇಹವೇ ಬೇಡ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಹಿಂ.ವ.ಉಪಾಧ್ಯಕ್ಷ ಸಿ.ಜಗನ್ನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಹೋಬಳಿ ಅಧ್ಯಕ್ಷರಾದ ರಂಗಪ್ಪ, ರಾಮಚಂದ್ರಪ್ಪ, ಕೋದಂಡರಾಮು, ಮಹಿಳಾಧ್ಯಕ್ಷೆ ಕೆ.ರಾಧಾರೆಡ್ಡಿ, ಶಶಿಕಲಾ, ಮಾಧವಿ, ಪುರಸಭಾ ಸದಸ್ಯರಾದ ವೇಣುಗೋಪಾಲ್, ಮುನಿಕೃಷ್ಣ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.