Advertisement

ಬಾಲ ಕಾರ್ಮಿಕರು ಕಂಡರೆ ಫೋಟೋ ತೆಗೆದು ಕಳುಹಿಸಿ

07:02 AM Jun 30, 2019 | Lakshmi GovindaRaj |

ಮೈಸೂರು: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾರ್ಮಿಕ ಇಲಾಖೆ ಜೊತೆಗೆ ಇತರೆ ಇಲಾಖೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ.ಒಂಟಿಗೋಡಿ ಹೇಳಿದರು.

Advertisement

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

14 ವರ್ಷದೊಳಗಿನ ಮಕ್ಕಳು ನಾಗರಿಕರಾಗಿ ಬಾಳಲು, ಒಳ್ಳೆಯ ಶಿಕ್ಷಣ ಪಡೆಯಲು ಅವರಿಗೆ ತಮ್ಮದೇ ಹಕ್ಕುಗಳಿರುತ್ತವೆ. ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೇ ಹೊರತು ಕಾರ್ಮಿಕರಾಗಿ ದುಡಿಸಿಕೊಳ್ಳಬಾರದು. ಕೈಲಾಸ್‌ ಸತ್ಯಾರ್ಥಿ ಅವರು ಬಾಲ ಕಾರ್ಮಿಕರ ರಕ್ಷಣೆಗೆ ಸಾಕಷ್ಟು ದುಡಿದ ಪರಿಣಾಮ, ಅವರಿಗೆ ನೋಬೆಲ್‌ ಪ್ರಶಸ್ತಿ ಲಭಿಸಿತು.

ಸಾಕಷ್ಟು ಜಾಗೃತಿ ಮತ್ತು ಕಾನೂನು ಕ್ರಮ ಕೈಗೊಂಡಿದ್ದರು ಈ ಅನಿಷ್ಠ ಪದ್ಧತಿ ಇನ್ನೂ ನಿವಾರಣೆಯಾಗಿಲ್ಲ. ಆದ್ದರಿಂದ ಸಾರ್ವಜನಿಕರು, ಅಧಿಕಾರಿಗಳು ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ನಮಗೆ ಮಾಹಿತಿ ನೀಡಬೇಕು. ಸಾಧ್ಯವಾದರೆ ಫೋಟೋ ತೆಗೆದು ನಮಗೆ ಕಳುಹಿಸಿ ಎಂದರು.

ಸಹಾಯ: ತಮಗೆ ವ್ಯಾಜ್ಯ ಹೂಡಿ ನ್ಯಾಯಯುತ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ, ನ್ಯಾಯ ದೊರಕಿಸಿಕೊಡಲು ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

Advertisement

ಕಾರ್ಖಾನೆ, ಉದ್ದಿಮೆ, ಹೋಟೆಲ್‌ಗ‌ಳು, ಗ್ಯಾರೇಜ್‌ ಮುಂತಾದ ಕಡೆಯಲ್ಲಿ ಮಕ್ಕಳನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತದೆ. ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿ ಅವರ ಬಾಲ್ಯಾವಸ್ಥೆಯನ್ನು ನಾಶಪಡಿಸುವ ಹಾಗೂ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಾರ್ಹ ಅಪರಾಧ: ಬಾಲಕಾರ್ಮಿಕರನ್ನು ದುಡಿಸಿ ಕೊಳ್ಳುವುದು ತಪ್ಪು ಮತ್ತು ಅಮಾನವೀಯ ಕೆಲಸ. ಈ ಅನಿಷ್ಠ ಪದ್ಧತಿ ಎಲ್ಲೆಡೆ ಕಂಡುಬಂದ ಪರಿಣಾಮ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಎಲ್ಲೆಡೆ ಆಯೋಜಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಬಡತನದ ಕಾರಣಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸದೆ ದುಡಿಸಿಕೊಳ್ಳಲಾಗುತ್ತಿರುವುದು ಅಪರಾಧ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ದುಡಿಸಿಕೊಳ್ಳಬಾರದು. ಹಾಗೆ ದುಡಿಸಿಕೊಂಡರೆ ಅದು ಶಿಕ್ಷಾರ್ಹ ಅಪರಾಧ ಎಂದು ಅವರು ಹೇಳಿದರು.

ಜಾಗೃತಿ: ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಿಗಬೇಕು. ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂಬುದು ಪೋಷಕರ ಇಚ್ಛೆಯಾಗಿರಬೇಕು. ಜೀತ ಪದ್ಧತಿಯ ವಿರುದ್ಧ ಅನೇಕ ದೂರುಗಳು ಬರುತ್ತಿತ್ತು. ಆದರೆ ಬಾಲ ಕಾರ್ಮಿಕರ ಕುರಿತು ಯಾವುದೇ ದೂರು ಬರುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು. ನಮ್ಮ ಕಣ್ಣ ಮುಂದೆ ಅನೇಕ ಪ್ರಕರಣಗಳು ಕಾಣುತ್ತಿರುತ್ತವೆ. ಆದರೆ, ಕಂಡೂ ಕಾಣದಂತೆ ಇರಬಾರದು. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಂಡುಬಂದರೆ ತಕ್ಷಣ ಮಾಹಿತಿ ನೀಡಿದರೆ, ಆ ಮಕ್ಕಳನ್ನು ರಕ್ಷಣೆ ಮಾಡಬಹುದು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ, ಹಿರಿಯ ವಕೀಲ ಸುಂದರ್‌ರಾಜ್‌, ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ.ತಮ್ಮಣ್ಣ, ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next