Advertisement

ಅಸ್ಥಿರಕ್ಕೆ ಯತ್ನ: ಅವಕಾಶ ಸಿಕ್ಕರೆ ಸರ್ಕಾರ

12:45 AM Jan 19, 2019 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೆ ತೆರೆಮರೆಯಲ್ಲೇ ಕಸರತ್ತು ನಡೆಸಿದ್ದ ಬಿಜೆಪಿಯು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೊದಲಿಗೆ ಸರ್ಕಾರವನ್ನು ಅಸ್ಥಿರಗೊಳಿಸುವ, ಅವಕಾಶ ಸಿಕ್ಕರೆ ಸರ್ಕಾರ ರಚಿಸುವ ಗುರಿಯೊಂದಿಗೆ ಕಾರ್ಯಾಚರಣೆ ಮುಂದುವರಿಸಿದೆ.

Advertisement

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ಶಾಸಕರನ್ನು ಹರಿಯಾಣದ ಗುರುಗ್ರಾಮದ ರೆಸಾರ್ಟ್‌ಗೆ ಸ್ಥಳಾಂತರಿಸಿ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡರು. ಇನ್ನೊಂದೆಡೆ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿ ಆರಂಭಿಕ ಯಶಸ್ಸನ್ನು ಕಂಡಿದ್ದರು. ಅತೃಪ್ತರೆನ್ನಲಾಗಿದ್ದ ಹಲವು ಶಾಸಕರು ಪ್ರತ್ಯಕ್ಷವಾಗಿದ್ದರಿಂದ ಬಿಜೆಪಿಗೆ ಹಿನ್ನಡೆಯಾಯಿತು ಎಂಬ ಮಾತುಗಳು ಕೇಳಿಬಂದಿತ್ತು. ಇಷ್ಟಾದರೂ ಬಿಜೆಪಿ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ.

ಈ ನಡುವೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದ ಕೈ ನಾಯಕರು ಸಭೆಗೆ ಹಾಜರಾಗದಿದ್ದರೆ ಅಮಾನತುಪಡಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಹಾಗಿದ್ದರೂ 4 ಶಾಸಕರು ಸಭೆಯಿಂದ ದೂರ ಉಳಿದಿದ್ದು, ಬಿಜೆಪಿ ನಾಯಕರ ಭರವಸೆ ಯನ್ನು ಹೆಚ್ಚಿಸಿದೆ. ಅಲ್ಲದೇ ಕಾಂಗ್ರೆಸ್‌ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸುವ ವಿಚಾರ ಇಳಿಯುತ್ತಿದ್ದಂತೆ ತನ್ನ ಕಾರ್ಯಸೂಚಿ ಅನುಷ್ಠಾನಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂಬ ಸಂತಸ ನಾಯಕರಲ್ಲಿ ಮೂಡಿದೆ ಎನ್ನಲಾಗಿದೆ.

ಅಸ್ಥಿರಕ್ಕೆ ಯತ್ನ: ನಾಲ್ಕು ಮಂದಿ ಕಾಂಗ್ರೆಸ್‌ ಶಾಸಕರು ಸಭೆಯಿಂದ ದೂರ ಉಳಿದಿರುವುದರಿಂದ ಆ ಶಾಸಕ ಬಲ ಕಾಂಗ್ರೆಸ್‌ನಿಂದ ಕೈತಪ್ಪಿದಂತೆ ಎಂಬುದು ಬಿಜೆಪಿ ನಾಯಕರ ವಾದ. ಅತೃಪ್ತ ಶಾಸಕರ ಪೈಕಿ ಕೆಲವರು ಶನಿವಾರ ಇಲ್ಲವೇ ಭಾನುವಾರ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಸರ್ಕಾರದ ಸಂಖ್ಯಾಬಲ ಇನ್ನಷ್ಟು ಕುಸಿಯಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿದರೆ ಸಂಖ್ಯಾಬಲದಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಾಗುವುದಿಲ್ಲ. ಒಂದೊಮ್ಮೆ ಕಾಂಗ್ರೆಸ್‌ ಪಕ್ಷವು ಅತೃಪ್ತ ಶಾಸಕರನ್ನು ಅಮಾನತುಪಡಿಸಿದರೆ ಆಗ ಕಾನೂನಾತ್ಮಕ ಹೋರಾಟ ನಡೆಸುವ ಸಾಧ್ಯತೆ ಇರುತ್ತದೆ. ಇದನ್ನು ಇನ್ನಷ್ಟು ರಾಜಕೀಯ ಗೊಂದಲಗಳಿಗೆ ಕಾರಣವಾಗಿ ಅಸ್ಥಿರ ವಾತಾವರಣ ನಿರ್ಮಾಣದರೆ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತವೆ ಮೂಲಗಳು. ಆಡಳಿತ ಪಕ್ಷಗಳ ಕೆಲ ಶಾಸಕರು ರಾಜೀನಾಮೆ ನೀಡುತ್ತಿದ್ದಂತೆ ವಿವಿಧ ಕಾರಣಕ್ಕೆ ಅಸಮಾಧಾನವನ್ನು ಸಹಿಸಿಕೊಂಡು ಮುಂದುವರಿದಿರುವ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಬಿಜೆಪಿ ಅಗತ್ಯ ಸಂಖ್ಯಾಬಲ ಪಡೆದು ಅವಕಾಶ ಸಿಕ್ಕರೆ ಸರ್ಕಾರವನ್ನೂ ರಚಿಸಲು ಪ್ರಯತ್ನಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ಶಾಸಕರು ರೆಸಾರ್ಟ್‌ನಲ್ಲಿರುವುದಕ್ಕೆ ಕಾಂಗ್ರೆಸ್‌, ಜೆಡಿಎಸ್‌ನವರು ಟೀಕೆ ಮಾಡುತ್ತಿದ್ದರು. ಇದೀಗ ಕಾಂಗ್ರೆಸ್‌ ಶಾಸಕರೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಬೆಳವಣಿಗೆ ವರದಾನದಂತಿದ್ದು, ನಮ್ಮ ಪ್ರಯತ್ನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲಾಗುವುದು. ಯಾವ ಹಂತದಲ್ಲೂ ಬಿಜೆಪಿ ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next