ಹುಬ್ಬಳ್ಳಿ: ಮೂರು ದಶಕಗಳ ಕಾಲ ಬಿಜೆಪಿಯಲ್ಲಿದ್ದು, ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಸಿಗದೆ ಕಾಂಗ್ರೆಸ್ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್; ಬಿಜೆಪಿ ವರಿಷ್ಠರು ಒಪ್ಪಿಗೆ ಸೂಚಿಸಿದರೆ ಘರ್ ವಾಪ್ಸಿಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿಯ ಹಲವು ನಾಯಕರು ಪಕ್ಷಕ್ಕೆ ಮರಳುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರ ಪ್ರತಿ ಕ್ರಿಯೆ ಗಮನಿಸಿ ಸೂಕ್ತ ನಿರ್ಧಾರ ತಳೆಯುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಕೆಲವು ಬಿಜೆಪಿ ನಾಯಕರು ಈಗಾಗಲೇ ಶೆಟ್ಟರ್ ಅವರನ್ನು ಭೇಟಿಯಾಗಿದ್ದಾರೆ. ಇನ್ನು ಕೆಲವು ಬಿಜೆಪಿಯ ಶಾಸಕರು, ಸಂಸ ದರು, ನಾಯಕರು ಪಕ್ಷಕ್ಕೆ ಮರಳು ವಂತೆ ಒತ್ತಡ ತರುತ್ತಿರುವುದು ನಿಜ ಎಂದು ಹೇಳಿವೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಶೆಟ್ಟರ್ ಬಿಜೆಪಿಗೆ ಮರಳು ತ್ತಾರೆ ಎಂಬ ಸುದ್ದಿಗಳು ದಿನಕಳೆ ದಂತೆ ಬಲಗೊಳ್ಳುತ್ತಿದೆ. ಇದರ ಮಧ್ಯೆ ತವರು ಧಾರವಾಡ
ಜಿಲ್ಲೆಯ ಶಾಸಕರು- ಮುಖಂಡರು ಮಾತ್ರ ಅವರು ಬರುವುದಿಲ್ಲ ಎನ್ನುತ್ತಿದ್ದಾರೆ.
ಹಾಗೆಂದು ಶೆಟ್ಟರ್ ಮರು ಸೇರ್ಪಡೆಗೆ ವಿರೋಧ ತೋರುವ ಸಾಧ್ಯತೆ ಇಲ್ಲದಿಲ್ಲ ಎಂದೂ ಹೇಳಲಾಗುತ್ತಿದೆ.
ಸುಮಾರು ಮೂವತ್ತು ವರ್ಷಗಳ ಕಾಲ ದುಡಿದ ಪಕ್ಷವೇ ಟಿಕೆಟ್ ನಿರಾಕರಣೆ ಮಾಡಿ, ಕನಸಿನಲ್ಲಿಯೂ ಯೋಚಿಸದ ರೀತಿ ಪಕ್ಷದಿಂದ ಹೊರಹೋಗುವಂತೆ ಮಾಡಿತು. ಇನ್ನು ಇತ್ತೀಚೆಗಷ್ಟೇ ಹೋಗಿರುವ ಕಾಂಗ್ರೆಸ್ ಪಕ್ಷದಿಂದ ಏನೇನೋ ನಿರೀಕ್ಷೆ ಮಾಡುವುದಾದರೂ ಹೇಗೆ? ಪಕ್ಷ ನನ್ನನ್ನು ಗೌರವದಿಂದ ನಡೆಸಿಕೊಂಡಿದೆ. ವಿಧಾನಪರಿಷತ್ ಸ್ಥಾನ ನೀಡಿದೆ. ಸದ್ಯ ವಹಿಸಿದ ಹೊಣೆ ನಿರ್ವಹಿಸುತ್ತಾ ಮುಂದೆ ಸಾಗಿದ್ದೇನೆ. ಮುಂದೆ ಏನಾಗುತ್ತದೆಯೋ ನೋಡೋಣ ಎಂದು ಆಪ್ತರ ಮುಂದೆ ಶೆಟ್ಟರ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷ ತೊರೆದ ಬಳಿಕ ಶೆಟ್ಟರ್ ಬಿಜೆಪಿಯ ಕೆಲ ನಾಯಕರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದರಾದರೂ, ಪ್ರಧಾನಿ ನರೇಂದ್ರ ಮೋದಿ ಅಥವಾ ಸಂಘದ ವಿರುದ್ಧವಾಗಲಿ ಮಾತನಾಡಿಲ್ಲ. ಸಂಘ ದೊಂದಿಗೆ ಈಗಲೂ ಉತ್ತಮ ಸಂಬಂಧ ಹೊಂದಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಂಡಿದ್ದರೂ ಕೆಲವು ವಿದ್ಯಮಾನಗಳು ಅವರನ್ನು ಕಡೆಗಣಿಸುವಂತೆ ಮಾಡತೊಡಗಿವೆ ಎನ್ನಲಾಗುತ್ತಿದೆ.
ಧಾರವಾಡದಲ್ಲಿ ಈಚೆಗೆ ನಡೆದ ಸಚಿವ ಎಚ್.ಕೆ.ಪಾಟೀಲರ ಕುರಿತ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ವಿಧಾನ ಮಂಡಲದ ಹಾಲಿ-ಮಾಜಿ ಸಭಾಧ್ಯಕ್ಷರು, ಸಭಾಪತಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಮಾಜಿ ಸ್ಪೀಕರ್ ಆಗಿರುವ ಶೆಟ್ಟರ್ ಅವರನ್ನು ಆಹ್ವಾನಿಸದಿರುವುದು ಅವರ ಬೆಂಬಲಿಗರಲ್ಲಿ ಬೇಸರ ತರಿಸಿದೆ ಎನ್ನಲಾಗಿದೆ.