ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾದ ನಡುವಿನ ಬಿಕ್ಕಟ್ಟಿನಿಂದಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದ್ದು, ಏತನ್ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಒಂದು ವೇಳೆ ಬಿಜೆಪಿ ಪಿಡಿಪಿ ಜತೆ ಕೈಜೋಡಿಸುತ್ತದೆ ಎಂದಾದರೆ ನಾವು(ಶಿವಸೇನಾ) ಯಾಕೆ ಎನ್ ಸಿಪಿ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಸೋಮವಾರ ಪ್ರಶ್ನಿಸಿದ್ದಾರೆ.
ಶಿವಸೇನಾ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ನೇತೃತ್ವದಲ್ಲಿ ಶಾಸಕರ ಜತೆ ಸಭೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆಯುತ್ತಿರುವ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್, ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಮೈತ್ರಿ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಎನ್ ಸಿಪಿಯ ಶರದ್ ಪವಾರ್ ತಿಳಿಸಿದ್ದಾರೆ.