ಬೆಂಗಳೂರು: ಕಾಂಗ್ರೆಸ್ ಸರಕಾರದಲ್ಲಿ 1972ರ ಬಳಿಕ ಇದೇ ಮೊದಲ ಬಾರಿಗೆ ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ. ಜತೆಗೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೂಡ ನೀಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸಮುದಾಯದ ಮತ ಕೇಳಲು ಹೋದರೆ ಕಲ್ಲಲ್ಲಿ ಹೊಡೆಯುತ್ತಾರೆ ಎಂದು ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ 2ನೇ ಹಂತದಲ್ಲಿ ನಡೆಯುವ ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲೇ ಬಂಜಾರ ಸಮುದಾಯದ ಮುಖಂಡರು ಅಸಮಾಧಾನ ಹೊರ ಹಾಕಿದರು.
ಚುನಾವಣೆಯಲ್ಲಿ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯಾವುದೇ ಸಮುದಾಯವನ್ನು ನಿರ್ಲಕ್ಷಿಸಬೇಡಿ. ಸಣ್ಣಪುಟ್ಟ ಜಾತಿ, ಜನಾಂಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕೆಂದು ಸಿಎಂ ಸಭೆಯಲ್ಲಿ ಹೇಳುತ್ತಿದ್ದಂತೆ ಎದ್ದುನಿಂತ ವಿಧಾನ ಪರಿಷತ್ತಿನ ಸದಸ್ಯ ಹಾಗೂ ಬಂಜಾರ ಸಮುದಾಯದ ಮುಖಂಡ ಪ್ರಕಾಶ್ ರಾಥೋಡ್, ನಮ್ಮ ಸಮಾಜ ಬಹಳ ನೊಂದಿದೆ. 5 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಸರಕಾರದಲ್ಲಿ ಸಚಿವ ಸ್ಥಾನ ನೀಡಿಲ್ಲ. ಲೋಕಸಭೆಗೆ ಟಿಕೆಟ್ ಕೂಡ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ ಮತ ಕೇಳಲು ಹೋದರೆ ಕಲ್ಲಲ್ಲಿ ಹೊಡೆಯುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೆ ತತ್‌ಕ್ಷಣವೇ ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಈ ರೀತಿ ಮಾತನಾಡಬಾರದು ಎಂದು ಹೇಳಿದ ಬಳಿಕವೂ ತಮ್ಮ ಮಾತು ಮುಂದುವರಿಸಿದ ರಾಥೋಡ್ ಅವರು ನಾವೇನು ಮಾಧ್ಯಮಗಳ ಮುಂದೆ ಹೋಗಿಲ್ಲ, ಪಕ್ಷದ ವೇದಿಕೆಯಲ್ಲೇ ಮಾತನಾಡುತ್ತಿದ್ದೇನೆ. ನಮ್ಮ ಸಮಾಜದ ನೋವನ್ನು ಸಿಎಂ ಸಿದ್ದರಾಮಯ್ಯ, ಡಾ| ಜಿ.ಪರಮೇಶ್ವರ್, ಶಿವರಾಜ್ ತಂಗಡಗಿ ಮಾತ್ರವಲ್ಲದೆ ನಿಮಗೂ ಹೇಳಿಕೊಂಡಿದ್ದೇವೆ. ಸಮಾಜದ ಮುಖಂಡರ ಸಭೆ ಕರೆಯಿರಿ ಎಂದು ಹಲವು ಸಲ ಹೇಳಿದ್ದರೂ ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಇದಕ್ಕೆ ಪೂರಕವಾಗಿ ಪ್ರಕಾಶ್ ರಾಥೋಡ್ ಅವರನ್ನು ಬೆಂಬಲಿಸಿ ಮಾತನಾಡಿದ ಮಾಜಿ ಸಚಿವ ಬಿ.ಟಿ.ಪರಮೇಶ್ವರ್ ನಾಯಕ್, ಸಮಾಜಕ್ಕೆ ಮಂತ್ರಿ ಸ್ಥಾನ, ಲೋಕಸಭೆ ಟಿಕೆಟ್ ಕೊಟ್ಟಿಲ್ಲ, ಈಗ ಪದಾಧಿಕಾರಿಗಳ ನೇಮಕದಲ್ಲೂ ನಿರ್ಲಕ್ಷಿಸಲಾಗಿದೆ. ಇದನ್ನು ಇಲ್ಲಿ ಹೇಳಿಕೊಳ್ಳದೆ ಯಾರ ಮುಂದೆ ಹೇಳಿಕೊಳ್ಳಬೇಕಿತ್ತು. ನೀವು ಕೂಡ ನಮಗೆ ಸಮಯ ಕೊಡುತ್ತಿಲ್ಲ. ಪಕ್ಷಕ್ಕಾಗಿಯೇ ದುಡಿಯುತ್ತಿದ್ದರೂ ಆಗಿರುವ ಲೋಪಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿಲ್ಲ ಎಂದು ನೇರವಾಗಿಯೇ ಹೇಳಿದರೆಂದು ಗೊತ್ತಾಗಿದೆ. ಬಳಿಕ ಮನೋಹರ ಐನಾಪುರ, ರೇವೂನಾಯಕ್ ಬೆಳಮಗಿ ಮತ್ತಿತರರು ಮಾತನಾಡಲು ಪ್ರಯತ್ನಿಸಿದರೂ ಅವಕಾಶ ಕೊಡಲಿಲ್ಲ.
ಉಪ ಸಭಾದ್ಯಕ್ಷ,
ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಟ್ಟಿಲ್ವಾ?
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಿಎಂ, ಈ ವೇದಿಕೆಯಲ್ಲಿ ಮಾತನಾಡುವುದು ಸರಿಯಲ್ಲ. ಆ ಮೇಲೆ ಬನ್ನಿ ಮಾತನಾಡೋಣ ಎಂದು ಹೇಳಿದ್ದಾರೆ. ಜತೆಗೆ ಡಿಸಿಎಂ ಕೂಡ ಮಾತನಾಡಿ, ಭೀಮಾ ನಾಯಕ್‌ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಿಲ್ಲವಾ?, ರುದ್ರಪ್ಪ ಲಮಾಣಿಗೆ ಡೆಪ್ಯುಟಿ ಸ್ಪೀಕರ್ ಹುದ್ದೆ ಕೊಟ್ಟಿಲ್ಲವೇ ಎಂದು ಪ್ರಶ್ನಿಸಿ ಅತೃಪ್ತರನ್ನು ಸಮಾಧಾನಿಸಿದರು ಎನ್ನಲಾಗಿದೆ.