Advertisement

ತಾಕತ್ತಿದ್ದರೆ ಬಂಧಿಸಿ : ಶೋಭಾ ಕರಂದ್ಲಾಜೆ ಸವಾಲು

07:30 AM Dec 24, 2017 | Team Udayavani |

ಬೆಂಗಳೂರು : ಟ್ವೀಟ್‌ ಆಧರಿಸಿ ಹೊನ್ನಾವರ ಠಾಣೆಯಲ್ಲಿ ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ  ಸವಾಲು ಹಾಕಿದ್ದಾರೆ.

Advertisement

ಶನಿವಾರ ಬಿಜೆಪಿ ಕಚೇರಿಯಲ್ಲಿ  ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಟ್ವೀಟ್‌ ಮಾಡಿದ್ದೇನೆ ಎಂದು ಆರೋಪಿಸಿ ಹೊನ್ನಾವರ ಠಾಣೆಯಲ್ಲಿ ನನ್ನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಲಂ 153, 153(ಎ) ಹಾಗೂ 505(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಎಫ್ಐಆರ್‌ ಸಲ್ಲಿಸಿದ್ದಾರೆ. ಯಾವುದೇ ಧರ್ಮದ ನಿಂದ‌ನೆ ಮಾಡಿಲ್ಲ ಹಾಗೂ ಕೋಮು ಪ್ರಚೋದನೆ ನೀಡುವ ರೀತಿಯಲ್ಲೂ ಟ್ವೀಟ್‌ ಮಾಡಿಲ್ಲ. ಹೀಗಾಗಿ ಜಾಮೀನಿಗೆ ಅರ್ಜಿ ಸಲ್ಲಿಸುವ ಪ್ರಮೇಯವೇ ಇಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಲವ್‌ಜಿಹಾದ್‌, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಹಿಂದು ಯುವಕರ ಕೊಲೆ ವ್ಯಾಪಕವಾಗಿ ನಡೆಯುತ್ತಿದೆ. ಭಯೋತ್ಪಾದನೆ ತರಬೇತಿ ಪಡೆದಿರುವ ಪಿಎಫ್ಐ, ಕೆಎಫ್ಡಿ ಹಾಗೂ ಎಸ್‌ಡಿಪಿಐ ಮೊದಲಾದ ಸಂಘಟನೆಗಳ ಕಾರ್ಯಕರ್ತರೇ ಇದನ್ನು ಮಾಡುತ್ತಿದ್ದಾರೆ. ಬಿ.ಸಿ.ರೋಡ್‌ನ‌ ಶರತ್‌ ಮಡಿವಾಳ  ಕೊಲೆ ಪ್ರಕರಣದಲ್ಲಿ ಇದು ಸಾಬೀತಾಗಿದೆ. ಹೊನ್ನಾವರ ಸಮೀಪ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ಹೇಳಿಕೆ ಆಧಾರದಲ್ಲಿ ಜಿಹಾದಿಗಳ ವಿರುದ್ಧ ಟ್ವೀಟ್‌ ಮಾಡಿದ್ದೇನೆ.

ರಾಜ್ಯ ಸರ್ಕಾರ ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಪಿಎಫ್ಐ, ಕೆಎಫ್ಡಿ ಮತ್ತು ಎಸ್‌ಡಿಪಿಐ ಸಂಘಟನೆ ಹೆಸರಿನಲ್ಲಿ ಸಮಾಜ ದ್ರೋಹಿ ಚಟುವಟಿಕೆ ನಡೆಯುತ್ತಿದೆ. ಲವ್‌ ಜಿಹಾದ್‌, ಹಿಂದು ಯುವತಿಯರ ಅಪಹರಣ ಮತ್ತು ಹಿಂದು ಯುವಕರ ಟಾರ್ಗೆಟ್‌ ಮಾಡುತ್ತಿದ್ದಾರೆ. ಇಂತಹ ಸಂಘಟನೆಗೆ ಸರ್ಕಾರ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ. 144 ಸೆಕ್ಷನ್‌ ಜಾರಿ ಮಾಡಿ, ಹಿಂದು ಯುವಕರನ್ನು ಮನೆಯಿಂದ ಹೊರಗೆ ಬಾರದಂತೆ ಮಾಡುತ್ತಿದ್ದಾರೆ. ಹಿಂದೂ ಯುವಕರ ಕೊಲೆಗೆ 144 ಸೆಕ್ಷನ್‌ ಸಹಕಾರಿಯಾಗುತ್ತಿದೆಯೇ ಎಂಬ ಅನುಮಾನ ದಟ್ಟವಾಗಿದೆ ಎಂದರು.

ಕೊಲೆ, ಅತ್ಯಾಚಾರ ಮಾಡುವವರಿಗೆ ಯಾವುದೇ ಧರ್ಮ, ಪಕ್ಷ ಇರುವುದಿಲ್ಲ. ಅಂಥವರನ್ನು ಬಂಧಿಸಿ, ಗಲ್ಲಿಗೆ ಏರಿಸಬೇಕು. ಅಪರಾಧಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಮತ್ತು ಅವರ ಬೆಂಬಲಕ್ಕೂ ಯಾರು ನಿಲ್ಲುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next