Advertisement

ತೀವ್ರ ಉಸಿರಾಟದ ತೊಂದರೆ ಇದ್ದರೆ ಮಾಹಿತಿ ನೀಡಿ: ಡಿಸಿ

10:26 AM Apr 19, 2020 | sudhir |

ಉಡುಪಿ: ಜಿಲ್ಲೆಯ ಯಾವುದೇ ಖಾಸಗಿ ಕ್ಲಿನಿಕ್‌ ಮತ್ತು ಆಸ್ಪತ್ರೆಗಳಿಗೆ ತೀವ್ರ ಉಸಿರಾಟದ ತೊಂದರೆ, ಜ್ವರ, ಶೀತ, ಕೆಮ್ಮು ಇರುವ ರೋಗಿಗಳು ಬಂದಲ್ಲಿ ತತ್‌ಕ್ಷಣ ಅವರ ವಿವರಗಳನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ
ಮತ್ತು ಕ್ಲಿನಿಕ್‌ಗಳ ವೈದ್ಯರಿಗೆ ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ -19 ನಿಯಂತ್ರಣ ಕುರಿತಂತೆ ರಚಿಸಲಾಗಿರುವ ಜಿಲ್ಲಾ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೂವರು ಕೊರೊನಾ ರೋಗಿಗಳು ಗುಣಮುಖರಾಗಿ ತೆರಳಿದ್ದಾರೆ. ಜಿಲ್ಲೆಯ ಒಳಗೆ ಇನ್ನು ಕೊರೊನಾ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಆದ್ದರಿಂದ ಜಿಲ್ಲೆಯ ಗಡಿಗಳನ್ನು ಈಗಾಗಲೇ ಸೀಲ್‌ ಮಾಡಲಾಗಿದೆ ಎಂದರು.

ತುರ್ತು ಚಿಕಿತ್ಸೆಗೆ ಮಾತ್ರ ಅನುಮತಿ
ಜಿಲ್ಲೆಗೆ ಆಗಮಿಸುವ ಹೊರ ಜಿಲ್ಲೆಗಳ ರೋಗಿಗಳಿಗೆ ಅನಿವಾರ್ಯವಾಗಿ ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಉಡುಪಿ ಜಿಲ್ಲೆಯ ಸಂಬಂಧಪಟ್ಟ ಆಸ್ಪತ್ರೆಯ ವೈದ್ಯರು ಚಿಕಿತ್ಸೆಗೆ ಆಗಮಿಸಲು ಸೂಚನೆ ನೀಡುವಂತೆ ಹಾಗೂ ತೀವ್ರವಲ್ಲದ ಚಿಕಿತ್ಸೆಗೆ ಜಿಲ್ಲೆಗೆ ಆಗಮಿಸಲು ಅನುಮತಿ ನೀಡದಂತೆ ತಜ್ಞರ ಸಮಿತಿ ತೀರ್ಮಾನಿಸಿತು. ಮಣಿಪಾಲದಲ್ಲಿ ಲಾಕ್‌ಡೌನ್‌ ಆದಾಗಿನಿಂದ 1,000 ಮಂದಿ ಹೊರ ಜಿಲ್ಲೆಯ ರೋಗಿಗಳಿಗೆ ಮಾತ್ರ ಚಿಕಿತ್ಸೆಗೆ ಬರಲು ಅನುಮತಿ ನೀಡಿದ್ದು, ಇತರ ಸಮಯದಲ್ಲಿ ಮಣಿಪಾಲಕ್ಕೆ ಆಗಮಿಸುವ ರೋಗಿಗಳ ಸಂಖ್ಯೆ ಸುಮಾರು 15ರಿಂದ 20 ಸಾವಿರ ಇರುತ್ತಿತ್ತು ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಮಾಹಿತಿ ನೀಡಿದರು.

ಜಿ.ಪಂ. ಸಿಇಒ ಪ್ರೀತಿ ಗೆಹೊÉàಟ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ| ಸುಧೀರ್‌ ಚಂದ್ರ ಸೂಡ, ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ವಾಸುದೇವ ಉಪಾಧ್ಯಾಯ, ಜಿಲ್ಲಾ ಕೋವಿಡ್‌ ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌, ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ| ಚಂದ್ರಶೇಖರ್‌ ಉಪಸ್ಥಿತರಿದ್ದರು.

Advertisement

ದೃಢಪತ್ರ ಅಗತ್ಯ
ಜಿಲ್ಲೆಯಲ್ಲಿ ಒಂದು ವೇಳೆ ಪಾಸಿಟಿವ್‌ ಪ್ರಕರಣ ಕಂಡುಬಂದಲ್ಲಿ ರೋಗಿಯನ್ನು ಸಾವಿನಿಂದ ಪಾರು ಮಾಡುವುದು ತಜ್ಞರ ಸಮಿತಿಯ ಪ್ರಮುಖ ಕರ್ತವ್ಯ. ಈ ನಿಟ್ಟಿನಲ್ಲಿ ಪಾಸಿಟಿವ್‌ ಪ್ರಕರಣ ಕಂಡು ಬಂದ ತತ್‌ಕ್ಷಣದಿಂದ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು. ಜಿಲ್ಲೆಯೊಳಗೆ ವೈದ್ಯಕೀಯ ಪ್ರವೇಶ ತುರ್ತು ಚಿಕಿತ್ಸೆಗಾಗಿ ಬರುವ ಹೊರ ಜಿಲ್ಲೆಯ ರೋಗಿಗಳು ತಮಗೆ ಕೋವಿಡ್‌-19 ರ‌ ಲಕ್ಷಣಗಳು ಇಲ್ಲ ಎಂಬ ಬಗ್ಗೆ ಡಿಎಚ್‌ಒ ಅಥವಾ ಟಿಎಚ್‌ಒ ಮೂಲಕ ದೃಢಪತ್ರ ಪಡೆದುಕೊಂಡು ಬರುವ ಕುರಿತು ತಜ್ಞರ ಸಮಿತಿ ತೀರ್ಮಾನಿಸಿತು. ಈ ಕುರಿತಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next