Advertisement

ಹೊಸ ವರ್ಷಾಚರಣೆ ವೇಳೆ ಲೈಂಗಿಕ ದೌರ್ಜನ್ಯ

11:30 AM Jan 03, 2017 | Team Udayavani |

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ನಗರದ ಬ್ರಿಗೇಡ್‌ ರಸ್ತೆಗೆ ಬಂದಿದ್ದ ಕೆಲ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

Advertisement

ಡಿ. 31ರ ರಾತ್ರಿ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ ಸಂಭ್ರಮಾಚರಣೆಗೆ ಬಂದಿದ್ದ 20ಕ್ಕೂ ಹೆಚ್ಚು ಯುವತಿಯರೊಂದಿಗೆ ಕೆಲ ಯುವಕರ ಗುಂಪು ಅಸಭ್ಯವಾಗಿ ವರ್ತಿಸಿದೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ದೂರು ಕೇಳಿಬಂದಿದೆ. ಆದರೆ, ಈ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಸುದ್ದಿ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗಿದೆಯೇ ಹೊರತು ಯಾರೊಬ್ಬರೂ ದೂರು ದಾಖಲಿಸಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಅಂದು ತಡರಾತ್ರಿ 1 ಗಂಟೆ ಸುಮಾರಿಗೆ ಜನರು ಹೆಚ್ಚಾಗಿ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿತ್ತು. ನಿಲ್ಲಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಯುವಕರ ಗುಂಪು ಚದುರಿಸಲು ಲಘುಲಾಠಿ ಪ್ರಹಾರ ನಡೆಸಬೇಕಾಯಿತು ಎಂದು ಪೊಲೀಸ್‌ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ, ಗುಂಪಿನಲ್ಲಿದ್ದ ಕೆಲ ಯುವಕರು, ಯುವತಿಯರನ್ನು ಮುಟ್ಟಿ, ಅವರ ಬಟ್ಟೆ ಎಳೆಯಲು ಮುಂದಾದರು ಎಂಬ ಫೋಟೋಗಳು ಸುದ್ದಿವಾಹಿನಿಯಲ್ಲಿ ಬಿತ್ತರಗೊಂಡಿವೆ.

ಆ ಫೋಟೋಗಳನ್ನು ಪಡೆದು ಪರಿಶೀಲಿಸಲಾಗುವುದು. ಅಲ್ಲದೆ, ಎಂ.ಜಿ.ರಸ್ತೆಯ ಸುತ್ತ 60ಕ್ಕೂ ಹೆಚ್ಚು ಸಿಸಿಟೀವಿಗಳನ್ನು ಅಳವಡಿಸಲಾಗಿದ್ದು, ಸಿಸಿಟೀವಿಗಳ ದೃಶ್ಯಾವಳಿ ಪರಿಶೀಲನೆ ಮಾಡಲಾಗುವುದು. ಲೈಂಗಿಕ ದೌರ್ಜನ್ಯ ನಡೆಸಿರುವುದು ಸಿಸಿಟೀವಿಯಲ್ಲಿ ಸೆರೆಯಾಗಿದ್ದರೆ, ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಕ್ರಮಕ್ಕೆ ಆಯೋಗದ ಪತ್ರ
ಘಟನೆ ಸಂಬಂಧ ನಗರ ಪೊಲೀಸ್‌ ಆಯುಕ್ತರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಪತ್ರ ಬರೆದಿದ್ದಾರೆ. ಡಿ. 31ರಂದು ರಾತ್ರಿ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬಂದಿದ್ದ ಯುವತಿಯರಿಗೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸಿದೆ. ಇಂತಹ ಘಟನೆ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಕೃತ್ಯವೆಸಗಿರುವವರ ಮೇಲೆ ಕ್ರಮ ಕೈಗೊಂಡು, ವರದಿ ನೀಡಬೇಕೆಂದು ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

Advertisement

ರಾಜೀನಾಮೆಗೆ ಆಗ್ರಹ
ನವದೆಹಲಿ:
ಹೊಸ ವರ್ಷದ ಆಚರಣೆಯ ವೇಳೆ ಮಹಿಳೆಯರ ಮೇಲೆ ನಡೆದ ಲೈಂಗಿಕ ಕಿರುಕುಳಕ್ಕೆ ಇಂದಿನ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಪಾಲಿಸುತ್ತಿರುವುದು ಕಾರಣ. ಇಂಥ ಘಟನೆಗಳು ಸಾಮಾನ್ಯ ಎಂದು ಹೇಳಿಕೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್‌ ಅವರು ರಾಜೀನಾಮೆಗೆ ರಾಷ್ಟ್ರೀಯ ಮಹಿಳಾ ಆಯೋದ ಮುಖ್ಯಸ್ಥೆ ಲಲಿತಾ ಕುಮಾರ ಮಂಗಳಂ ಆಗ್ರಹಿಸಿದ್ದಾರೆ. ಪರಮೇಶ್ವರ್‌ ಅವರ ಹೇಳಿಕೆ ಸ್ವೀಕಾರಯೋಗ್ಯವಲ್ಲ  ಎಂದು ಅವರು ಹೇಳಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯುವತಿಯರಿಗೆ ಕೆಲವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಬಗ್ಗೆ ಯಾರೊಬ್ಬರು ಠಾಣೆಯಲ್ಲಿ ದೂರು ದಾಖಲಿಸಿಲ್ಲ. ದೌರ್ಜನ್ಯಕ್ಕೊಳಗಾದವರು ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು. ಪೊಲೀಸರು ಕೈಕಟ್ಟಿ ಕುಳಿತಿಲ್ಲ.
-ಪ್ರವೀಣ್‌ ಸೂದ್‌, ಪೊಲೀಸ್‌ ಆಯುಕ್ತ 

ಎಂ.ಜಿ. ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿಟೀ ವಿಗಳನ್ನು ಪರಿಶೀಲನೆ ನಡೆಸಲಾಗಿದೆ. ಇನ್ನು ಕೆಲ ಸಿಸಿಟಿವಿಗಳ ಪರಿಶೀಲನೆ ನಡೆಬೇಕಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಸಿಸಿಟೀವಿಯಲ್ಲಿ ಸೆರೆಯಾಗಿದ್ದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು. ದೌರ್ಜನ್ಯಕ್ಕೊಳಗಾದವರು ಧೈರ್ಯವಾಗಿ ಬಂದು ದೂರು ನೀಡಬಹುದು. 
-ಮಾಲಿನಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್‌ ಆಯುಕ್ತೆ, ಪಶ್ಚಿಮ 

ನೂತನ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದುವರೆಗೂ ಯಾರೂ ದೂರು ಕೊಟ್ಟಿಲ್ಲ. ಆದರೆ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ನೂತನ ವರ್ಷಾಚರಣೆ ಪ್ರಯುಕ್ತ 25 ಸಿಸಿಟೀವಿ, 1,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆದರೂ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ನಾವೆಲ್ಲರೂ ತಲೆತಗ್ಗಿಸಬೇಕಾದ ವಿಚಾರ. ಸಿಸಿಟೀವಿ ದೃಶ್ಯಾವಳಿ ಪರಿಶೀಲಿಸಲಾಗುತ್ತಿದ್ದು, ಆದಷ್ಟು ಬೇಗ ಆರೋಪಿಗಳ ಪತ್ತೆ ಮಾಡಲಾಗುವುದು.
-ಡಾ.ಜಿ. ಪರಮೇಶ್ವರ, ಗೃಹ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next