ಬೆಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದು ಪಂಚರತ್ನ ಯೋಜನೆ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಹೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆಲವರ ವಿವೇಕರಹಿತ ಹೇಳಿಕೆಗಳಿಗೆ ಉತ್ತರಿಸುವುದು ಬೇಡ ಎಂದು ಭಾವಿಸಿದ್ದೆ. ನಾನು ಸೋತ ನೋವಿನಲ್ಲಿದ್ದೇನೆ. ಕಾಂಗ್ರೆಸ್ ನವರು ಗೆದ್ದ ಅಹಂನಲ್ಲಿದ್ದಾರೆ. ಅಹಂ ಅಳಿಯುತ್ತದೆ ಅನ್ನುವ ಕನಿಷ್ಠ ಅರಿವು ಅವರಿಗೆ ಇದ್ದಂತೆ ಇಲ್ಲ. ಆ ಅರಿವು ಬರುವ ಕಾಲವೂ ದೂರವಿಲ್ಲ. ಕಾಯುವ ತಾಳ್ಮೆ ನನಗಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಯಾವಾಗ ವಿಸರ್ಜನೆ ಮಾಡುತ್ತಾರೆ. ಪಕ್ಷಕ್ಕೆ ಯಾವಾಗ ಅಂತಿಮ ಸಂಸ್ಕಾರ ಮಾಡುತ್ತಾರೆ ಎಂದು ಕೆಲ ಅರೆಬೆಂದ ಸಚಿವರು, ಶಾಸಕರು ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅವರೆಲ್ಲರ ಅಜ್ಞಾನಕ್ಕೆ ನನ್ನ ಪ್ರಗಾಢ ಸಾಂತ್ವನವಿದೆ. ಅವರ ಕನ್ನಡ ಭಾಷಾಜ್ಞಾನದ ಬಗ್ಗೆ ಕಾಳಜಿ ಇದೆ. ಆ ಮಹಾಶಯರು ನನ್ನ ಹೇಳಿಕೆಗಳನ್ನೊಮ್ಮೆ ತಿಳಿಯಲಿ ಎಂದ ತಿರುಗೇಟು ನೀಡಿದ್ದಾರೆ.
ನನಗೆ 123 ಕ್ಷೇತ್ರಗಳನ್ನು ಕೊಟ್ಟರೆ, ನಾನು ಭರವಸೆ ಕೊಟ್ಟಂತೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ, ಆಮೇಲೆ ಎಂದೂ ವೋಟು ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ ಎಂದು ಜನರಿಗೆ ಹೇಳಿದ್ದು ಹೌದು. ಚುನಾವಣೆ ಫಲಿತಾಂಶ ಬಂದಿದೆ. ನನಗೆ ಜನರು 123 ಕ್ಷೇತ್ರ ಕೊಡಲಿಲ್ಲ. ಈಗ ಪಂಚರತ್ನ ಜಾರಿ ಹಾಗೂ ಪಕ್ಷ ವಿಸರ್ಜನೆ ಪ್ರಶ್ನೆ ಎಲ್ಲಿ? ಸಾಮಾನ್ಯಜ್ಞಾನವೇ ಇಲ್ಲದ ಸಚಿವರಿಗೆ ಈ ಪರಿ ಅಜ್ಞಾನವಿದೆ ಎಂದು ನಾನಂತೂ ಎಣಿಸಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.