Advertisement

ಇಡ್ಲಿ, ಮಸಾಲ ದೋಸೆಗೆ ಫೇಮಸ್ಸು ಗೀತಾ ಭವನ

06:00 AM Sep 24, 2018 | |

ಮಲೆಮಹದೇಶ್ವರ, ಸಿದ್ದಪ್ಪಾಜಿಯಂತಹ ಪವಾಡ ಪುರುಷರ ಬೀಡು ಎಂದೇ ಖ್ಯಾತಿ ಪಡೆದ ಕೊಳ್ಳೇಗಾಲ ತಾಲೂಕು, ಭರಚುಕ್ಕಿ ಜಲಪಾತ, ಶಿವನಸಮುದ್ರ ಸಮೂಹ ದೇವಾಲಯ, ಕಾವೇರಿ ಸಂಗಮವನ್ನು ಹೊಂದಿರುವ ಪ್ರಮುಖ ಪ್ರವಾಸಿ ತಾಣ. ಎಲ್ಲದಕ್ಕೂ ಸಂಪರ್ಕ ಕೊಂಡಿಯಾಗಿರುವ ಕೊಳ್ಳೇಗಾಲ ನಗರ, ಜಿಲ್ಲೆಯಲ್ಲೇ ಪ್ರಮುಖವಾದದ್ದು.

Advertisement

ಇಂತಹ ನಗರದಲ್ಲಿ ಗುರುತಿಸಬಹುದಾದ ಹೋಟೆಲ್‌ ಕೂಡ ಒಂದಿದೆ. ಅದುವೇ ಗೀತಾ ಭವನ್‌. ಇಡ್ಲಿ ಸಾಂಬಾರ್‌, ದೋಸೆಗೆ ಫೇಮಸ್ಸಾದ ಈ ಹೋಟೆಲ್‌ಗೆ 63 ವರ್ಷಗಳ ಇತಿಹಾಸ ಇದೆ. ಕೊಳ್ಳೇಗಾಲದ ಕೃಷ್ಣ ಟಾಕೀಸ್‌ನ ಕ್ಯಾಂಟೀನ್‌ನಲ್ಲಿ ಸಪ್ಲೆ„ಯರ್‌ ಆಗಿದ್ದ ಉಡುಪಿ ಮೂಲದ ರಾಮಚಂದ್ರರಾವ್‌ ಹಾಗೂ ಶ್ರೀನಿವಾಸ್‌ರಾವ್‌, 1955ರಲ್ಲಿ ನಗರದಲ್ಲೇ ಇದ್ದ ಮಾತಾಜೀ ಕೆಫೆಯನ್ನು ಭೋಗ್ಯಕ್ಕೆ ಪಡೆದಿದ್ದರು.

ಈ ವೇಳೆ ಶ್ರೀನಿವಾಸ್‌ರಾವ್‌ ಅವರ ಅಣ್ಣ ರಾಮಚಂದ್ರರಾವ್‌ ಉಡುಪಿಗೆ ವಾಪಸ್ಸಾಗಿದ್ದಾರೆ. ನಂತರ ನಂಜನಗೂಡಿನ ಸುನಂದಾ ಅವರನ್ನು ಮದುವೆಯಾದ ಶ್ರೀನಿವಾಸ್‌ರಾವ್‌ ಅವರು 1955ರಲ್ಲಿ ಮಾತಾಜೀ ಕೆಫೆಯನ್ನು ಸ್ವಂತಕ್ಕೆ ಖರೀದಿ ಮಾಡಿದರಂತೆ.

ಆ ಸಮಯದಲ್ಲಿ ಮಗಳು ಗೀತಾ (“ಕಾಫೀ ತೋಟ’ ಚಿತ್ರದ ನಾಯಕಿ ರಾಧಿಕಾ ಚೇತನ್‌ ಅವರ ತಾಯಿ) ಹುಟ್ಟಿದ್ದರಿಂದ ಮಾತಾಜೀ ಕೆಫೆ ಎಂದಿದ್ದ ಹೆಸರನ್ನು ಬದಲಾಯಿಸಿ “ಗೀತಾ ಭವನ’ ಎಂದು ಹೆಸರಿಟ್ಟಿದ್ದಾರೆ. ಹೆಂಚಿನ ಮನೆಯಲ್ಲಿದ್ದ ಹೋಟೆಲ್‌ ಅನ್ನು ಕೆಡವಿ, ಬೋರ್ಡಿಂಗ್‌, ಲಾಡ್ಜಿಂಗ್‌ ಒಳಗೊಂಡ ಹೊಸ ಕಟ್ಟಡ ನಿರ್ಮಿಸಿ ಗ್ರಾಹಕರಿಗೆ ಶುಚಿ ರುಚಿಯಾದ ಊಟ, ಉಪಾಹಾರ ಒದಗಿಸುತ್ತಿದ್ದಾರೆ. 

ಅಡ್ವಾಣಿ, ವಾಜಪೇಯಿ ಭೇಟಿ: ಗೀತಾ ಭವನದ ಮಾಲೀಕರಾದ ಶ್ರೀನಿವಾಸ್‌ರಾವ್‌, ಸಮಾಜ ಸೇವೆಯ ಜೊತೆ ಬಿಜೆಪಿಯ ಮುಖಂಡರೂ ಆಗಿದ್ದರು. ಕೊಳ್ಳೇಗಾಲದ ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ಧರ್ಮದರ್ಶಿಯಾಗಿ, ಬ್ರಾಹ್ಮಣ ಸಂಘದ ಅಧ್ಯಕ್ಷರೂ ಆಗಿದ್ದರು.  

Advertisement

60, 70ರ ದಶಕದಲ್ಲಿ ವಾಜಪೇಯಿ, ಅಡ್ವಾಣಿ ಅವರು ಚುನಾವಣೆ ಪ್ರಚಾರಕ್ಕೆ ನಗರಕ್ಕೆ ಬಂದಿದ್ದಾಗ ಶ್ರೀನಿವಾಸ್‌ರಾವ್‌ ಅವರನ್ನು  ಭೇಟಿ ಮಾಡಿದ್ದರು. 4  ವರ್ಷಗಳ ಹಿಂದೆ ಶ್ರೀನಿವಾಸ್‌ರಾವ್‌ ನಿಧನರಾದ ನಂತರ ಅವರ ಮಕ್ಕಳಾದ ರಾಘವೇಂದ್ರರಾವ್‌, ರವಿಶಂಕರ್‌ರಾವ್‌ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.

ಹೋಟೆಲ್‌ನ ಸ್ಪೆಷಲ್‌: ಗೀತಾ ಭವನದಲ್ಲಿ ದಕ್ಷಿಣ ಕರ್ನಾಟಕದ ತಿಂಡಿ ಅಷ್ಟೇ ಅಲ್ಲ, ಕರಾವಳಿ, ಮಲೆನಾಡು ಭಾಗದ ತಿಂಡಿಯೂ ಸಿಗುತ್ತದೆ. ಇಡ್ಲಿ ಸಾಂಬರ್‌, ಮಸಾಲೆ ದೋಸೆ, ರೋಸ್ಟ್‌ ದೋಸೆ ನೆಚ್ಚಿನ ತಿಂಡಿ. ರೈಸ್‌ ಬಾತ್‌, ವೆಜಿಟೇಬಲ್‌ ಪಲಾವ್‌, ಮಂಗಳೂರು ಬೊಂಡಾ, ಗೋಳಿ ಬಜೆ, ಬನ್ಸ್‌. ದೋಸೆಗಳಲ್ಲಿ ರಾಗಿ, ಸೆಟ್‌, ಮಸಾಲೆ ಸೇರಿದಂತೆ ನಾಲ್ಕೈದು ಬಗೆಯ ದೋಸೆ ಸಿಗುತ್ತದೆ.

ಹೋಟೆಲ್‌ ವಿಳಾಸ: ಕೊಳ್ಳೇಗಾಲ ನಗರದ ಬಸ್‌ ನಿಲ್ದಾಣ ಸಮೀಪದ ಅಂಬೇಡ್ಕರ್‌ ರಸ್ತೆಗೆ ಬಂದು ಗೀತಾ ಭವನ್‌ ಎಲ್ಲಿ ಎಂದು ಯಾರನ್ನಾದ್ರೂ ಕೇಳಿದರೂ ಹೇಳುತ್ತಾರೆ.

ಹೋಟೆಲ್‌ ಸಮಯ: ಗೀತಾ ಭವನ್‌ ಬೆಳಗ್ಗೆ 6 ಗಂಟೆಗೆ ಆರಂಭವಾದ್ರೆ ರಾತ್ರಿ 7.30ರವರೆಗೂ ತೆರೆದಿರುತ್ತದೆ. ಬುಧವಾರ ರಜೆ ದಿನ. ಆದರೆ, ಲಾಡ್ಜ್ ಸದಾ ತೆರೆದಿರುತ್ತದೆ.

ನಟರು, ರಾಜಕಾರಣಿಗಳು ಸಾಹಿತಿಗಳು ಭೇಟಿ: ಗೀತಾ ಭವನ್‌ಗೆ ಸಾಹಿತಿ ಶಿವರಾಮ ಕಾರಂತ್‌, ಬಿಕೆಎಸ್‌ ಐಯ್ಯಂಗಾರ್‌ ಭೇಟಿ ನೀಡಿದ್ದರು. ಮಾಜಿ ಕೇಂದ್ರ ಸಚಿವ ಶತುಘ್ನ ಸಿನ್ಹಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ವಿ.ಎಸ್‌.ಆಚಾರ್ಯ, ಮಾಜಿ ಶಾಸಕ ನಂಜುಂಡಸ್ವಾಮಿ, ಶಾಸಕ ರಾಮದಾಸ್‌, ಸಂಸದ ಧ್ರುವನಾರಾಯಣ ಗೀತಾ ಭವನ್‌ನ ತಿಂಡಿ ತಿಂದಿದ್ದಾರೆ.

ಪ್ರಣಯದ ಪಕ್ಷಿಗಳು ಇದ್ದ ಜಾಗ: ನಟ ರಮೇಶ್‌ ಅರವಿಂದ್‌ ಅಭಿನಯದ, ಎಸ್‌.ಮಹೇಂದರ್‌ ನಿರ್ದೇಶನದ “ಪ್ರಣಯದ ಪಕ್ಷಿಗಳು’ ಸಿನಿಮಾ ಶೂಟಿಂಗ್‌ ಕೊಳ್ಳೇಗಾಲ ತಾಲೂಕಿನ ಸುತ್ತಮುತ್ತ ನಡೆಯುತ್ತಿದ್ದಾಗ ಚಿತ್ರ ತಂಡ ಗೀತಾ ಭವನದ ಲಾಡ್ಜ್ನಲ್ಲಿ ಉಳಿದುಕೊಂಡಿತ್ತು. ನಟ ರಮೇಶ್‌, ನಂತರ ಕೊಳ್ಳೇಗಾಲಕ್ಕೆ ಬಂದಾಗ ಗೀತಾ ಭವನ್‌ಗೆ ಬಂದು ಹೋಗುವುದನ್ನು ಮರೆತಿಲ್ಲ ಎಂದು ಹೋಟೆಲ್‌ ಮಾಲೀಕರು ಹೆಮ್ಮೆ ಹಾಗೂ ಅಭಿಮಾನದಿಂದ ಹೇಳುತ್ತಾರೆ.

* ಭೋಗೇಶ ಎಂ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next