ದಾವಣಗೆರೆ: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2016ರ ಮಾರ್ಚ್ 18ರಂದು ಮಂಡಿಸಿದ ಕಳೆದ ಸಾಲಿನ ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಘೋಷಿಸಿದ್ದ ನಾಲ್ಕು ಯೋಜನೆಯಲ್ಲಿ ಕೆಲವು ಮುಗಿಯುವ ಹಂತಕ್ಕೆ ಬಂದಿದ್ದರೆ, ಇನ್ನು ಕೆಲವು ಅರೆಬರೆ ಸ್ಥಿತಿಯಲ್ಲಿವೆ. ಕೆಲವಕ್ಕಂತೂ ಇನ್ನೂ ಚಾಲನೆಯೇ ದೊರೆತಿಲ್ಲ.
ಕಳೆದ ಬಜೆಟ್‌ನಲ್ಲಿ ದಾವಣಗೆರೆಯಲ್ಲಿ 30 ಕೋಟಿ ಅನುದಾನದಲ್ಲಿ 50 ಹಾಸಿಗೆ ಸಾಮರ್ಥ್ಯದ ಸಂಯುಕ್ತ ಆಯುಷ್ ಆಸ್ಪತ್ರೆ (ಆಯುಷ್ ಇಂಟಗ್ರೇಟೆಡ್ ಆಸ್ಪತ್ರೆ), ಐಟಿ ಪಾರ್ಕ್ ಸ್ಥಾಪನೆ, ತ್ಯಾಜ್ಯ ನೀರು ಸಂಸ್ಕರಣ ಘಟಕ, ಹರಪನಹಳ್ಳಿ ಹಾಗೂ ಹೊನ್ನಾಳಿಯಲ್ಲಿ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಕುಡಿಯುವ ನೀರು ಸರಬರಾಜು, ಒಳ ಚರಂಡಿ ಸೌಲಭ್ಯ, ಕೆಆರ್‌ಡಿಸಿಎಲ್‌ನಿಂದ 130 ಕೋಟಿ ಅನುದಾನದ ಹೊನ್ನಾಳಿ- ಸವಳಂಗ ರಸ್ತೆ ಅಭಿವೃದ್ಧಿ ಯೋಜನೆ ಘೋಷಿಸಲಾಗಿತ್ತು.
ಆಯುಷ್ ಇಂಟಗ್ರೇಟೆಡ್ ಆಸ್ಪತ್ರೆ (ಸಂಯುಕ್ತ ಆಯುಷ್ ಆಸ್ಪತ್ರೆ)ಗೆ ದಾವಣಗೆರೆ ಹೊರ ವಲಯದ ನಾಗನೂರು ಗ್ರಾಮದ ಸರ್ವೇ ನಂಬರ್ 117ರಲ್ಲಿ ಒಟ್ಟಾರೆ 1 ಎಕರೆ 38 ಗುಂಟೆ ಜಮೀನು ಮಂಜೂರಾಗಿದೆ. ಕೆಎಸ್‌ಎಸ್‌ಆರ್‌ಡಿಪಿ ನೀಲನಕ್ಷೆ ಸಿದ್ಧಪಡಿಸುತ್ತಿದೆ. ನೀಲನಕ್ಷೆ ಆಯುಷ್ ಇಲಾಖೆ ನಿರ್ದೇಶಕರ ಕಚೇರಿಗೆ ಸಲ್ಲಿಸಿದ ನಂತರ ಆಸ್ಪತ್ರೆ ನಿರ್ಮಾಣದ ಪ್ರಕ್ರಿಯೆ ಪ್ರಾರಂಭವಾಗಲಿದೆ ಎನ್ನುತ್ತವೆ ಜಿಲ್ಲಾ ಆಯುಷ್ ಇಲಾಖೆ ಮೂಲಗಳು.
ಆ್ಯಕ್ಸ್‌ಫರ್ಡ್ ಸಿಟಿ ಎಂದೇ ಗುರುತಿಸಲ್ಪಡುತ್ತಿರುವ ದಾವಣಗೆರೆಯಲ್ಲಿ ಒಂದು ಸರ್ಕಾರಿ ಒಳಗೊಂಡಂತೆ ಒಟ್ಟಾರೆ 4 ಇಂಜಿನಿಯರಿಂಗ್, ಎರಡು ವೈದ್ಯಕೀಯ ಹಾಗೂ ಎರಡು ದಂತ ವೈದ್ಯಕೀಯ ಕಾಲೇಜುಗಳಿವೆ. ದಾವಣಗೆರೆ ಕರ್ನಾಟಕದ ಮಧ್ಯದಲ್ಲಿರುವುದರಿಂದ ಇತರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಮುಖ ಸಂಪರ್ಕ ಕೇಂದ್ರವೂ ಹೌದು.
ಕಳೆದ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದಾಗ ಸಹಜವಾಗಿಯೇ ಎಲ್ಲರಲ್ಲೂ ಭಾರೀ ನಿರೀಕ್ಷೆ ಇತ್ತು. ಆದರೆ, ಈವರೆಗೆ ಐಟಿ ಪಾರ್ಕ್ ಪ್ರಾರಂಭದ ಲಕ್ಷಣವೇ ಕಾಣುತ್ತಿಲ್ಲ. ಬಜೆಟ್‌ನಲ್ಲಿ ಘೋಷಣೆಯಾಗಿ ಒಂದು ವರ್ಷ ಕಳೆದರೂ ಐಟಿ ಪಾರ್ಕ್ ಬಗ್ಗೆ ಸಂಬಂಧಿತ ಎಸ್‌ಟಿಪಿ ಸಂಸ್ಥೆಯ ಜೊತೆಗೆ ಇನ್ನೂ ಮಾತುಕತೆ ನಡೆಯುತ್ತಿದೆ.
ದಾವಣಗೆರೆಯ ಶಿವನಗರದ ಬಳಿ 32 ಕೋಟಿ ವೆಚ್ಚದ ತ್ಯಾಜ್ಯ ನೀರು ಸಂಸ್ಕರಣ ಘಟಕದ ಕಾರ್ಯ ಪ್ರಗತಿಯಲ್ಲಿದೆ. ತ್ಯಾಜ್ಯ ನೀರು ಸಂಸ್ಕರಣ ಘಟಕ ಮುಂದುವರೆದ ಕಾಮಗಾರಿ ರೂಪದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಅಂತಿಮ ಹಂತದಲ್ಲಿದೆ.
ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಹರಪನಹಳ್ಳಿ ಹಾಗೂ ಹೊನ್ನಾಳಿಯಲ್ಲಿ ಪ್ರಾರಂಭಿಸಿರುವ ಒಳ ಚರಂಡಿ ಕಾಮಗಾರಿ ಅರೆಬರೆಯಾಗಿದೆ. ಹೊನ್ನಾಳಿ ಪಟ್ಟಣದಲ್ಲಿ ಪ್ರಾರಂಭಿಕ ಹಂತದಲ್ಲಿ ಬಿರುಸಿನಿಂದ ನಡೆದ ಕಾಮಗಾರಿ ಬಹುತೇಕ ಸ್ಥಗಿತಗೊಂಡು ತಿಂಗಳುಗಳೇ ಉರುಳಿವೆ. ಕಾಮಗಾರಿ ಮುಂದುವರೆಯುವ ಲಕ್ಷಣಗಳೇ ಇಲ್ಲ.