Advertisement

ಪಠ್ಯದಲ್ಲಿ ಸತ್ಯವಿರಬೇಕು, ನಿಮ್ಮ ಐಡಿಯಾಲಜಿಗಳು ಇರಬಾರದು: ಎಸ್.ಎಲ್.ಭೈರಪ್ಪ

12:15 PM Jun 02, 2022 | Team Udayavani |

ಮೈಸೂರು: ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು ಯಾವುದು? ಪಠ್ಯದಲ್ಲಿ ಸತ್ಯವಿರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ಎಸ್.ಎಲ್.ಭೈರಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಜಪೇಯಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ಆಗ ಸಾಹಿತಿಗಳು ದೇಶದ ತುಂಬೆಲ್ಲ “ಪ್ರಶಸ್ತಿ ವಾಪ್ಸಿ” ಚಳವಳಿ ಶುರು ಮಾಡಿದರು.  ಪ್ರಶಸ್ತಿ ಜತೆಗೆ ಹಣವನ್ನೂ ವಾಪಸ್ ಕೊಡಿಯೆಂದು ಸಲಹೆ ಕೊಟ್ಟಿದ್ದೆ. 15 ದಿನಗಳಲ್ಲಿ ಎಲ್ಲರೂ ಸುಮ್ಮನಾಗಿದ್ದರು ಎಂದರು.

ಪ್ರಜಾಪ್ರಭುತ್ವಕ್ಕಾಗಿ ಚುನಾವಣೆ ನಡೆಯಬೇಕು. ಆದರೆ ಚುನಾವಣೆ ಬಂತೆಂದರೆ ನಾವು ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟು ಬಿಡುತ್ತೇವೆ ಎಂದ ಅವರು ಮಹಾಬಲೇಶ್ವರ ಜಾಗದ ಬಗ್ಗೆ ಮಾತನಾಡಿ, ಮಹಾಬಲೇಶ್ವರದಲ್ಲಿ ಇತಿಹಾಸ ಮರೆ ಮಾಚಲಾಗಿದೆ. ಶಿವಾಜಿ ಕೊಲ್ಲಲು ಬಂದಿದ್ದ ಅಫ್ಜಲ್‌ಖಾನ್ ನನ್ನ ನಾಯಕ ಮಾಡಲಾಗಿದೆ. ನಾನು ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿದ್ದ ಗೈಡ್ ಮೊದಲು ನನಗೆ ಸತ್ಯ ಹೇಳಲಿಲ್ಲ. ಐದು ರೂಪಾಯಿ ಕೊಟ್ಟ ನಂತರ ಘಟನಾ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದ. ಅಫ್ಜಲ್ ದಾಳಿ ಬಗ್ಗೆ ಅಲ್ಲಿ ಮೊದಲು ನಾಮ ಫಲಕ ಹಾಕಲಾಗಿತ್ತು. ಸರ್ಕಾರವೇ ನಂತರ ಅದನ್ನ ತೆಗೆದು ಹಾಕಿದೆ. ಇದನ್ನು ಯಾರಿಗೂ ಹೇಳಬೇಡಿ ಎಂದು ಆ ಹುಡುಗ ಕೇಳಿಕೊಂಡ. ಇದೆಲ್ಲವೂ ಚುನಾವಣೆಗಾಗಿ ನಮ್ಮವರು ಮಾಡಿರುವುದು ಎಂದು ಕಿಡಿಕಾರಿದರು.

ಇದನ್ನೂ ಓದಿ:ಕಾಶ್ಮೀರದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ: ಬ್ಯಾಂಕ್ ಮ್ಯಾನೇಜರ್ ಗೆ ಗುಂಡಿಟ್ಟು ಹತ್ಯೆ

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು.  ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲ ಮಾಡಿದನೆಂದು ಕಾರ್ಯಪ್ಪಗೆ ಗೊತ್ತು.  ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು.  ಸ್ವಲ್ಪದಿನಗಳ ನಂತರ ಎಲ್ಲರೂ ಸುಮ್ಮನಾದರು.  ನಾಟಕ ಇರುವುದು ಚಳವಳಿ ಮಾಡಲು.  ಕಾವ್ಯ, ಕಾದಂಬರಿ ಹೇಗೆ ರಸಾನುಭವವೋ ಹಾಗೆಯೇ ನಾಟಕ ಕೂಡ ರಸಾನುಭವ.  ಅಡ್ಡಂಡ ಕಾರ್ಯಪ್ಪ ತೆಗೆದು ಹಾಕಲು ಚಳವಳಿ ಮಾಡಿದವರಿಗೆ ಸಾಧ್ಯವಾಗಲಿಲ್ಲ. ಟಿಪ್ಪು ವಿಚಾರದಲ್ಲಿ ಲೆಫ್ಟಿಸ್ಟ್, ಮುಸ್ಲಿಂಗಳು ಅವರದ್ದೇ ಐಡಿಯಾಲಜಿ ಮಾಡುತ್ತಾರೆ. ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಿಸಬೇಕು ಅಂತ ಪ್ರತಾಪ್ ಸಿಂಹ ಹೇಳಿದರು. ಆದರೆ “ಟಿಪ್ಪುವಿನ ನಿಜ ಸ್ವರೂಪ” ಪುಸ್ತಕವನ್ನು ಯಾರೂ ಓದುವುದಿಲ್ಲ ಎಂದು ಎಸ್.ಎಲ್‌.ಭೈರಪ್ಪ ಹೇಳಿದರು.

Advertisement

ಇಂದಿರಾ ಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಯಾಗಿತ್ತು. ಆಗ ಸತ್ಯವನ್ನ ಹೇಳಬೇಕು ಎಂದಿದ್ದಕ್ಕೆ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಆಗಲೂ ಅವರಿಗೆ ಬೇಕಾದವರನ್ನು ಸೇರಿಸಿಕೊಂಡು ಪಠ್ಯ ರಚನೆ ಮಾಡಿದರು. ಅವತ್ತಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಪಠ್ಯವನ್ನ ಒಪ್ಪಿಕೊಂಡು ಅಳವಡಿಸಿಕೊಂಡರು ಎಂದು ಅವರು ಹೇಳಿದರು.

ಶಿಕ್ಷಣ ಸಚಿವ ನಾಗೇಶ್ ಮನೆ ಮೇಲೆ ದಾಳಿ ವಿಚಾರವಾಗಿ ಮಾತನಾಡಿದ ಅವರು, ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಿದ್ದಾರೆ. ಹೀಗಾದರೆ ನಮ್ಮ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ ಎಂದು ಆತಂಕ ವ್ಯಕ್ತಪಡಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನನ್ನದು ಯಾವುದೇ ನಿಲುವನ್ನು ಪ್ರಕಟಿಸುತ್ತಿಲ್ಲ. ಆದರೆ ಬಹಳ ವರ್ಷಗಳಿಂದ ಅನೇಕ ಸಂದರ್ಭಗಳಲ್ಲಿ ನಡೆದ ಎಲ್ಲವನ್ನೂ ಹೇಳಿದ್ದೇನೆ ಅಷ್ಟೇ ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next