ನನ್ನ ಬಳಿ ಬಹಳಷ್ಟು ಮಂದಿ ನೃತ್ಯ ಕಲಿತಿದ್ದಾರೆ, ಕಲಿಯುತ್ತಿದ್ದಾರೆ. ಎಲ್ಲರೂ ಅತ್ಯಂತ ಪ್ರೀತಿಪಾತ್ರರೇ. ಆದರೆ, ಇಸ್ರೇಲ್‌ನ ಈ ಹುಡುಗಿ ಯೇಲ್ ಟಾಲ್ ಇದ್ದಾಳಲ್ಲ, ಅವಳು ಯಾವ ಜನ್ಮದಲ್ಲಿ ನನಗೆ ಮಗಳಾಗಿದ್ದಳ್ಳೋ ಗೊತ್ತಿಲ್ಲ. ಇಸ್ರೇಲಿನಿಂದ ಬಂದು ನನ್ನ ಬಳಿ ನೃತ್ಯ ಕಲಿತು, ಈಗ ಅಲ್ಲಿ ಭಾರತೀಯ ನೃತ್ಯದ ಜತೆಗೆ ಇಲ್ಲಿನ ಸಂಸ್ಕೃತಿಯನ್ನೂ ಪಸರಿಸುತ್ತಿದ್ದಾಳೆ.
ಯೇಲ್, ಭಾರತಕ್ಕೆ ಬರುವಾಗಲೇ ವೆಸ್ಟರ್ನ್ ಡ್ಯಾನ್ಸ್‌ನಲ್ಲಿ ಡಿಗ್ರಿ ಪಡೆದಿದ್ದಳು. ಕೇವಲ 15 ದಿನಗಳಲ್ಲಿ ಭಾರತೀಯ ನೃತ್ಯ ಕಲಿಯುತ್ತೇನೆಂದು ಬಂದಿದ್ದಳು. ಆಮೇಲೆ ನೃತ್ಯದ ಅಗಾಧತೆ ಅರ್ಥವಾಗಿ, ಅದನ್ನು ಕಲಿತೇ ತೀರುತ್ತೇನೆ ಎಂದು ಉಳಿದುಕೊಂಡಳು. 4 ವರ್ಷ ನನ್ನ ಮನೆಯಲ್ಲೇ ಇದ್ದು ನೃತ್ಯ ಕಲಿತಳು. ಬರೀ ನೃತ್ಯವನ್ನಷ್ಟೇ ಅಲ್ಲ, ನನ್ನ ಜೀವನಶೈಲಿ, ಊಟ, ಡ್ರೆಸ್, ಭಾರತೀಯ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಕಲಿತಳು.
ವಾಪಸಾದ ಮೇಲೆ ನನಗೊಂದು ಪತ್ರ ಬರೆದಿದ್ದಳು- “ಇಸ್ರೇಲ್‌ನಲ್ಲಿ ಒಂದು ಸಣ್ಣ ಜಿರಳೆಯಂತಿದ್ದ ನನಗೊಂದು ಐಡೆಂಟಿಟಿ ಕೊಟ್ಟವರು ನೀವು. ಈಗ ಇಲ್ಲಿ ಜನ ನನ್ನನ್ನು ಭಾರತೀಯ ನೃತ್ಯಗಾರ್ತಿ ಅಂತ ಗುರುತಿಸುತ್ತಾರೆ’ ಅಂತ. ಅದೊಂದು ಸಾರ್ಥಕ ಕ್ಷಣ. ಕೆಲ ವರ್ಷಗಳ ಹಿಂದೆ ಇಸ್ರೇಲ್‌ನಲ್ಲಿ ನನ್ನ ಮತ್ತು ಅವಳ ನೃತ್ಯ ಪ್ರದರ್ಶನ ಏರ್ಪಡಿಸಿದ್ದರು. ಅವಳವತ್ತು ಏನೇನೂ ಚೆನ್ನಾಗಿ ಡ್ಯಾನ್ಸ್ ಮಾಡಲಿಲ್ಲ. ನನಗೆ ಒಂದು ಕ್ಷಣಕ್ಕೆ ಬಹಳ ಬೇಜಾರಾಯ್ತು. ಆಮೇಲೆ ಅವಳೇ ಹೇಳಿದಳು- “ಮೇಡಂ, ಇಲ್ಲಿ ನನ್ನನ್ನು ತಿದ್ದುವವರು ಯಾರೂ ಇಲ್ಲ. ಪ್ರಾಕ್ಟೀಸ್ ಬೇರೆ ಬಿಟ್ಟು ಹೋಗಿದೆ. ನಾನು ಕೆಟ್ಟದಾಗಿ ಪರ್ಫಾಮ್ ಮಾಡಿದ್ದೇನೆಂದು ಗೊತ್ತು. ಆದರೆ ತಪ್ಪು ಮಾಡಿಯೇ ಅಲ್ಲವಾ ಎಲ್ಲರೂ ಕಲಿಯುವುದು? ನಾನೂ ಕಲಿಯುತ್ತೇನೆ’ ಅಂದಳು. ಹೌದಲ್ವಾ? ತಪ್ಪು ಮಾಡಿಯೇ ತಾನೇ ಎಲ್ಲರೂ ಕಲಿಯುವುದು. ನಾನೂ ಮೊದಲು ತಪ್ಪು ಮಾಡಿದವಳೇ ತಾನೇ ಅಂತ ಅನ್ನಿಸಿತು.
ಈಗಲೂ ಅವಳ ನೃತ್ಯ ಪ್ರದರ್ಶನದ ವಿಡಿಯೋ ಅಥವಾ ವರದಿಯನ್ನು ಇ- ಮೇಲ್ ಮಾಡುತ್ತಾಳೆ. ತಪ್ಪಿದ್ದರೆ ತಿದ್ದುವಂತೆ ಹೇಳುತ್ತಾಳೆ. “ಇಸ್ರೇಲ್‌ನವರಿಗೆ ಬಾಲಿವುಡ್ ಡ್ಯಾನ್ಸ್ ಮೇಲೆ ಕ್ರೇಝ್ ಜಾಸ್ತಿ. ಹಾಗಾಗಿ, ಬೇರೆಯವರಿಗೆ ಅದನ್ನು ಕಲಿಸುತ್ತೇನೆ. ಆದರೆ, ನಾನು ಮಾತ್ರ ನೀವು ಕಲಿಸಿದ್ದನ್ನೇ ಪ್ರದರ್ಶನ ಕೊಡುತ್ತೇನೆ.’ ಅಂತ ಕೇಳಿದ್ದಳು. “ಐ ಫಾಲೋ ಮೈ ಗುರು. ಈವನ್ ಇನ್ ಮೈ ಲೈಫ್ಸ್ಟೈಲ್’ ಅನ್ನುತ್ತಾಳೆ ಆಕೆ. ಅದಕ್ಕೇ ಹೇಳುವುದು “ಗುರು’ ಅನ್ನೋದು ವೃತ್ತಿಯಷ್ಟೇ ಅಲ್ಲ, ಅದೊಂದು ಗುರುತರ ಜವಾಬ್ದಾರಿ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲಿಗೆ
ಹೋಗಿದ್ದಾಗ ಅಲ್ಲಿನ ರಾಯಭಾರ ಕಚೇರಿ ಆಕೆಯ ನೃತ್ಯ ಪ್ರದರ್ಶನವನ್ನು ಏರ್ಪಡಿಸಿತ್ತು ಅನ್ನೋದು ಇನ್ನೊಂದು ಹೆಮ್ಮೆಯ ವಿಷಯ.
ವೈಜಯಂತಿ ಕಾಶಿ, ನೃತ್ಯ ಕಲಾವಿದೆ