Advertisement

ನಿವೇಶನಕ್ಕಾಗಿ ಕಾಯ್ದಿರಿಸಿದ ಸ್ಥಳದ ಗಡಿ ಗುರುತಿಗೆ ಮೀನಮೇಷ!

11:38 AM Jun 25, 2018 | Team Udayavani |

ಸವಣೂರು: ಗ್ರಾ.ಪಂ. ವ್ಯಾಪ್ತಿಯ ನಿವೇಶನರಹಿತರಿಗೆ ಗ್ರಾ.ಪಂ. ಕಾಯ್ದಿರಿಸಿದ ಸ್ಥಳದ ಹಕ್ಕುಪತ್ರ ಸಿಕ್ಕರೂ ನಿವೇಶನ ಮಾತ್ರ ದಕ್ಕಲಿಲ್ಲ. ಕಾರಣ ನಿವೇಶನದ ಗಡಿಗುರುತಿಗೆ ಕಂದಾಯ ಇಲಾಖೆ ಮೀನ-ಮೇಷ ಎಣಿಸುತ್ತಿದೆ. ನಿವೇಶನವನ್ನು ಗಡಿಗುರುತು ಮಾಡಿ ಹಂಚಿಕೆ ಮಾಡದೆ ಇವರಿಗೆ ಮನೆ ಕಟ್ಟಲು ಅಸಾಧ್ಯ. ಇದರಿಂದಾಗಿ ಹಕ್ಕುಪತ್ರ ಸಿಕ್ಕ ಬಳಿಕ ಗಡಿಗುರುತಿಗಾಗಿ ಕಾದು ಹೈರಾಣಾಗಿದ್ದಾರೆ. ಕಡಬ ಕಂದಾಯ ಹೋಬಳಿಯ ಸವಣೂರು ಗ್ರಾ.ಪಂ.ನ ಕುಮಾರ ಮಂಗಲದಲ್ಲಿ ನಿವೇಶನದ ಹಕ್ಕು ಪತ್ರ ಪಡೆದವರ ಸ್ಥಿತಿ ಇದು.

Advertisement

2010-11ನೇ ಸಾಲಿನಲ್ಲಿ ಆಯ್ಕೆ ಮಾಡಿದ್ದ ಫಲಾನುಭವಿಗಳಿಗೆ ಹಲವು ತೊಡಕುಗಳಿಂದಾಗಿ ಹಕ್ಕಪತ್ರ ದೊರಕುವುದು ವಿಳಂಬವಾಗಿತ್ತು. ಗ್ರಾ.ಪಂ.ನ ನಿರಂತರ ಶ್ರಮ, ಒತ್ತಡದಿಂದ ಹಕ್ಕುಪತ್ರ ದೊರಕಲು ಇದ್ದ ತೊಡಕುಗಳನ್ನು ನಿವಾರಿಸಿದ ಮೇಲೆ ಫ‌ಲಾನುಭವಿಗಳಿಗೆ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಹಕ್ಕುಪತ್ರ ಕೈಸೇರಿದೆ. ಆದರೆ, ನಿವೇಶನದ ಗಡಿಗುರುತು ಮಾಡದೆ ಸಮಸ್ಯೆಯಾಗಿದೆ.

ಗಡಿಗುರುತಿಗೆ ಏಕೆ ವಿಳಂಬ?
ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರ ಕೈಗೆ ಬಂದು ಒಂದು ವರ್ಷವಾಗುತ್ತ ಬಂದರೂ ಕಂದಾಯ ಇಲಾಖೆಯವರು ಗಡಿಗುರುತು ಮಾಡಿ ನಿವೇಶನ ಹಂಚಲು ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ಫಲಾನುಭವಿಗಳ ಪ್ರಶ್ನೆ. ಈ ಕುರಿತು ಗ್ರಾ.ಪಂ.ನ್ನು ಸಂಪರ್ಕಿಸಿದರೆ, ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳುತ್ತಾರೆ ಎಂದು ಫಲಾನುಭವಿ ಕಮಲಾ ಹೇಳಿದರು.

ಮನೆ ಕಟ್ಟಲೂ ಆಗುತ್ತಿಲ್ಲ
ನಿವೇಶನ ನೀಡದೆ ಹಕ್ಕುಪತ್ರ ನೀಡಿದರೆ ಮನೆ ಕಟ್ಟುವುದಾದರೂ ಹೇಗೆ? ಹಲವು ವರ್ಷಗಳ ಬಳಿಕ ಹಕ್ಕುಪತ್ರ ಕೈ ಸೇರಿದೆ.ಆದರೆ ನಿವೇಶನ ಗಡಿಗುರುತು ಮಾಡದೇ ತಮಗೆ ಯಾವ ನಿವೇಶನ ಎಂದು ತಿಳಿಯದೆ ಸಮಸ್ಯೆಯಾಗಿದೆ. ಗಡಿಗುರುತು ಮಾಡಿದರೆ ಗ್ರಾ.ಪಂ.ನ ಯೋಜನೆಯಲ್ಲಿ ಮನೆಯನ್ನಾದರೂ ಕಟ್ಟಬಹುದು ಎನ್ನುತ್ತಾರೆ ಹಕ್ಕುಪತ್ರ ಪಡೆದ ಲಕ್ಷ್ಮೀ ಎಂಬವರು.

24 ಮಂದಿಗೆ ಹಕ್ಕುಪತ್ರ
ಜಯಂತಿ ರಮೇಶ್‌ ಆಚಾರ್ಯ, ಯಮುನಾ‌ ರಮೇಶ, ಕುಸುಮಾ ರಾಮಕ್ಕ, ಕುಸುಮಾ ದಯಾನಂದ, ದೇವಕಿ ಗಂಗಾಧರ, ವಿಜಯ ರವಿ, ಲಕ್ಷ್ಮೀ ವಿಶ್ವನಾಥ, ಲಕ್ಷ್ಮೀ ವಿಜಯ, ಸುಂದರಿ ಕುಂಞ, ಅಮಿತಾ ಉಮೇಶ್‌, ನಿರ್ಮಲಾ ಕೃಷ್ಣಪ್ಪ, ಹೊನ್ನಮ್ಮ ಕುಶಾಲಪ್ಪ, ಜಯಾಶೇಖರ ಗೌಡ, ಕಮಲಾ ಬಾಲಣ್ಣ ಗೌಡ, ಸೇಸಮ್ಮ ತ್ಯಾಂಪಣ್ಣ ಗೌಡ, ಸೇಸಮ್ಮ ಬೆಳಿಯಪ್ಪ ಗೌಡ, ಗಾಯತ್ರಿ ಜನಾರ್ದನ ಗೌಡ, ಕಮಲಾ ಸೌಂದರ್ಯರಾಜನ್‌, ತಾರಾ ಕುಮಾರಿ ರೋಹಿತ್‌ ರೈ, ಕಮಲಾ ತಿಮ್ಮಪ್ಪ ಗೌಡ, ಶ್ಯಾಮಲಾ ರವಿ ಆಚಾರ್ಯ, ಶೋಭಾ ಕೃಷ್ಣಪ್ಪ ಅವರಿಗೆ ತಲಾ ಮೂರು ಸೆಂಟ್ಸ್‌ ಜಾಗಕ್ಕೆ ಹಕ್ಕುಪತ್ರ ನೀಡಲಾಗಿದೆ.

Advertisement

ಸತತ ಪ್ರಯತ್ನದಿಂದ ಹಕ್ಕುಪತ್ರ
ಕುಮಾರಮಂಗಲದಲ್ಲಿ ಗ್ರಾ.ಪಂ.ನಿಂದ ಕಾಯ್ದಿರಿಸಿದ ನಿವೇಶನಕ್ಕೆ 2010-11 ಸಾಲಿನಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಹಕ್ಕು ಪತ್ರ ದೊರಕಿದ್ದು 2017-18ನೇ ಸಾಲಿನಲ್ಲಿ. ಆದರೆ ಈಗ ನಿವೇಶನದ ಗಡಿಗುರುತು ಮಾಡದೆ ಫಲಾನುಭವಿಗಳಿಗೆ ನಿವೇಶನ ಹಂಚುವ ಹಾಗಿಲ್ಲ. ಈ ಹಿಂದಿನ ಅವಧಿ ಮತ್ತು ಈಗಿನ ಅವಧಿಯಲ್ಲಿ ಹಲವು ಬಾರಿ ಸಾಮಾನ್ಯ ಸಭೆಯಲ್ಲಿ, ಕಂದಾಯ ಅದಾಲತ್‌ನಲ್ಲಿ ಪ್ರಸ್ತಾವಿಸಲಾಗಿದೆ. ಕಂದಾಯ ಇಲಾಖೆಯ ವಿಳಂಬದಿಂದಾಗಿ ಈ ಸಮಸ್ಯೆಯಾಗಿದೆ. ಫಲಾನುಭವಿಗಳು ನಮ್ಮ ಬಳಿ ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ. ಎಲ್ಲ ಫಲಾನುಭವಿಗಳು ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಗ್ರಾ.ಪಂ.ನಿಂದ ಎಲ್ಲ ಪ್ರಯತ್ನ ಮಾಡಲಾಗಿದೆ ಎಂದು ಗ್ರಾ.ಪಂ.ನ ಹಿರಿಯ ಸದಸ್ಯ ಗಿರಿಶಂಕರ ಸುಲಾಯ ಅವರು.

ಕಂದಾಯ ಇಲಾಖೆ ಸಂಪರ್ಕಿಸಿದ್ದೇವೆ
ಸವಣೂರು ಗ್ರಾ.ಪಂ. ಗುರುತಿಸಿದ 24 ಫಲಾನುಭವಿಗಳಿಗೆ ಹಲವು ವರ್ಷಗಳ ಬಳಿಕ ಇದ್ದ ತೊಡಕುಗಳನ್ನು ನಿವಾರಿಸಿ ಹಕ್ಕುಪತ್ರ ನೀಡಲಾಗಿದೆ. ಗಡಿಗುರುತು ಮಾಡುವಂತೆ ಹಲವು ಬಾರಿ ಕಂದಾಯ ಇಲಾಖೆಯನ್ನು ಸಂಪರ್ಕಿಸಿದರೂ ಯಾವುದೇ ಪ್ರಗತಿಯಾಗಿಲ್ಲ. ಗ್ರಾ.ಪಂ.ನಿಂದ ಪತ್ರ ಸಂಖ್ಯೆ 156/2017-18, 167/2017-18, 14/2018-19 ಮೂಲಕ ಲಿಖೀತವಾಗಿ ಮನವಿ ಮಾಡಿದರೂ ಯಾವುದೇ ಹಿಂಬರಹ ಅಥವಾ ಪ್ರತಿಕ್ರಿಯೆ ಬಂದಿಲ್ಲ. ಕಡಬ ನಾಡಕೇಂದ್ರಕ್ಕೆ ತೆರಳಿ ತಹಶೀಲ್ದಾರ್‌, ಸರ್ವೇಯರ್‌ ಅವರನ್ನು ಮುಖತಃ ಭೇಟಿ ಮಾಡಿ ಇಲ್ಲಿನ ಸಮಸ್ಯೆಯ ಕುರಿತು ಮನದಟ್ಟು ಮಾಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ವಾರದೊಳಗೆ ಪುತ್ತೂರು ಉಪವಿಭಾಗಾಧಿಕಾರಿಯವರನ್ನು ಭೇಟಿ ಮಾಡಲಾಗುವುದು ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ತಿಳಿಸಿದ್ದಾರೆ.

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next