ಮೈಸೂರು: ಬಾಲ್ಯದಲ್ಲಿರುವಾಗಲೇ ಜೀವನೋಪಾಯದ ಗುರಿ ಬೆನ್ನು ಹತ್ತಬೇಕು ಎಂದು ಹಿರಿಯ ರಂಗಕರ್ಮಿ ಎಂ.ಎಸ್. ಸತ್ಯು ಹೇಳಿದರು. ಮಹಾರಾಜ ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಥೆಯ ಸಂಸ್ಥಾಪಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿರುವ ಎಂ.ಎಸ್. ಸತ್ಯು ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದರು. ಕಲಿಕೆಯಲ್ಲಿ ನಾನು ಬಹಳ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ. ಕಲೆಯಲ್ಲಿ ಆಸಕ್ತಿ ಇತ್ತು. ಇದರಿಂದ ಪದವಿ ಮುಗಿಸುವ ಮುನ್ನವೇ ಮುಂಬೈಗೆ ಹೋಗಿ ರಂಗಭೂಮಿ ಮತ್ತು ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡೆ.
ನಾನು ಸಾಮಾನ್ಯವಾಗಿ ಹೆಚ್ಚು ಮಾತನಾಡುವುದಿಲ್ಲ. ಪರದೆಯ ಹಿಂದೆ ಕಾರ್ಯನಿರ್ವಹಿಸುವ ವ್ಯಕ್ತಿ. ಅಭಿನಯ ಇಷ್ಟ ಇಲ್ಲ. ನಿರ್ದೇಶನ ನನ್ನ ವೃತ್ತಿ. ಆದರೂ ಒತ್ತಾಯದ ಮೇಲೆ ಕೆಲ ನಾಟಕ ಮತ್ತು ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಆಶಕ್ತಿ ಕ್ಷೇತ್ರವನ್ನು ಬಾಲ್ಯದಲ್ಲೇ ಗುರುತಿಸಿಕೊಳ್ಳಬೇಕು. ಶಾಲೆಯಲ್ಲಿ ಕಲಿಯುವುದೊಂದೇ ಮುಖ್ಯವಲ್ಲ. ಮುಂದೆ ಯಾವ ವೃತ್ತಿ ಸೇರುತ್ತೇವೆ ಎಂದು ನಿರ್ಧರಿಸಿ, ಆ ಹಾದಿಯಲ್ಲಿ ಸಾಗಲು ತಯಾರಾಗುವುದು ಮುಖ್ಯ.
ಯಾವುದೇ ವೃತ್ತಿಗೆ ಹೊಸದಾಗಿ ಪ್ರವೇಶಿಸಿದಾಗ ಹಲವು ರೀತಿ ಕಷ್ಟ ಎದುರಾಗುತ್ತದೆ. ಅವುಗಳನ್ನು ಮೆಟ್ಟಿ ನಿಲ್ಲಬೇಕು. ಜೀವನದ ಮುಂದಿನ ಗುರಿ ಬಾಲ್ಯದಲ್ಲೇ ನಿರ್ಧರಿಸಬೇಕು. ಜೀವನ ಮುಂದಿನ ದಾರಿಯ ಬಗ್ಗೆ ಸ್ಪಷ್ಟ ಆಲೋಚನೆ ಇರಬೇಕು. ತಾಳ್ಮೆ, ಶ್ರಮ ವಹಿಸುವುದು ಮಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಹಾರಾಜ ಕಾಲೇಜಿನಲ್ಲಿ ಕಥಕ್: ಮಹಾರಾಜ ಕಾಲೇಜಿನ ಕ್ವಾಡ್ರ ಆ್ಯಂಗಲ್‌ನಲ್ಲಿ ನಾವು ಮತ್ತು ಗೆಳೆಯರು ಕಥಕ್ ನೃತ್ಯ ಅಭ್ಯಾಸ ಮಾಡುತ್ತಿದ್ದೆವು. ಅದೇ ವೇದಿಕೆಯಲ್ಲಿ ಕಥಕ್ ನೃತ್ಯ ಪ್ರದರ್ಶನ ನೀಡಿದ್ದೇವೆ ಎಂದು ತಮ್ಮ ಹಳೆಯ ನೆನಪು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ವೈದ್ಯ ಡಾ.ಚಂದ್ರಶೇಖರ್, ಸಾರಿಗೆ ಇಲಾಖೆ ಜಂಟಿ ಆಯುಕ್ತ ಎಂ.ಎನ್.ಬಾಲದೇವರಾಜೇ ಅರಸ್, ಪತ್ರಕರ್ತ ಶ್ರೀಹರಿ, ಕಾಲೇಜಿನ ಉಪ ಪ್ರಾಂಶುಪಾಲ ಡಾ.ಡಿ.ಮಹೇಶ್ ಇತರರಿದ್ದರು.