ಬೀದರ: ತಾಲೂಕಿನ ಅಣದೂರವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೀರ್ತಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಆಶ್ರಯದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮ ದಿನ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ಅಂಬಾದಾಸ ಜಾಲಿ ಮಾತನಾಡಿ, ಹಲವು ಸವಾಲುಗಳ ನಡುವೆ ದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ಒದಗಿಸಿಕೊಟ್ಟ ಸಾವಿತ್ರಿಬಾಯಿ ಫುಲೆ ಮೊದಲ ಮಹಿಳಾ ಶಿಕ್ಷಕಿ ಎನಿಸಿಕೊಂಡಿದ್ದಾರೆ. ಶಿಕ್ಷಕ ವರ್ಗಕ್ಕೆ ಅವರು ಆದರ್ಶ ಆಗಲಿ ಎಂದರು.
ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಾ| ಸಂಜೀವಕುಮಾರ ಅತಿವಾಳೆ ಮಾತನಾಡಿ, ಶೂದ್ರ ಮತ್ತು ಅತಿ ಶೂದ್ರ ಮಹಿಳೆಯರಿಗೆ ಅಕ್ಷರ ಊಣಬಡಿಸಿದ ಸಾವಿತ್ರಿಬಾಯಿ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿ ಎಂದು ಬ್ರಿಟಿಷರಿಂದ ಬಿರುದು ಪಡೆದಿದ್ದರು. ಸಾಮಾಜಿಕ. ಶೈಕ್ಷಣಿಕ ಮತ್ತು ಆರ್ಥಿಕ ಸಂಪನ್ಮೂಲಗಳು ಸಂಪ್ರದಾಯಸ್ಥರ ಪಾಲಾಗಿದ್ದ ಆ ಕಾಲದಲ್ಲಿ ಆಂಗ್ಲರ ಆಡಳಿತ, ಲಿಂಗ ತಾರತಮ್ಯ, ಜಾತಿ ವ್ಯವಸ್ಥೆಗಳ ವಿರುದ್ಧ ಫುಲೆ ದಂಪತಿ ಸಂಘರ್ಷ ಮಾಡಿ ಸ್ತ್ರೀಯರಿಗಾಗಿ ಶಾಲೆ ತೆರೆದು ಅಕ್ಷರ ಜ್ಞಾನ ನೀಡಿದ್ದರು ಎಂದು ಸ್ಮರಿಸಿದರು.
ಮುಖ್ಯಗುರು ಪುಷ್ಪಾ ಕನಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ನಾಗಶೆಟ್ಟಿ ಧರಮಪೂರ್ ಜಾನಪದ ಗಾಯನ ನಡೆಸಿಕೊಟ್ಟರು. ಸೇನೆ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಜಿಲ್ಲಾಧ್ಯಕ್ಷ ಚಂದ್ರಕಾಂತ ಹಳ್ಳಿಖೇಡಕರ್, ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಅಷ್ಟೂರೆ, ಗೋವಿಂದ ಜಾಲಿ ಮಾತನಾಡಿದರು. ಶಿಕ್ಷಕ ಸಂಜಯ ಸೂರ್ಯವಂಶಿ, ರೇಣುಕಾ ಸುತಾರ್, ಪುಷ್ಪಾ ಹತ್ತಿ ಇತರರಿದ್ದರು.