Advertisement

ಆದರ್ಶ ಕೃಷಿ

06:00 AM Dec 24, 2018 | |

ಕನಕಾಂಬರ ಬೆಳೆದು ಯಶಸ್ಸು ಕಂಡಿರುವುದು ಶ್ರೀರಂಗಪಟ್ಟಣದ ರೈತ ಆದರ್ಶರ ಹೆಗ್ಗಳಿಕೆ. ಸಸಿ ಸಾಯೋ ರೋಗ ಇಲ್ಲದೇ ಹೋದರೆ, ಕನಕಾಂಬರದಿಂದ ಭಾರೀ ಲಾಭ ಪಡೆಯಬಹುದು ಎಂಬುದು ಅವರ ಅನುಭವದ ಮಾತು. 

Advertisement

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರಕ್ಕೆ ಹೊಂದಿಕೊಂಡಂತೆ ಈ ರೈತನ ಜಮೀನಿದೆ. ಅದರ ತುಂಬ ಬರೀ ಕನಕಾಂಬರ.  ಅದೆಷ್ಟೋ ರೈತರು ಕನಕಾಂಬರ ಬೆಳೆಯಲಾರದೇ ಕೈ ಚೆಲ್ಲಿದರೂ, ಈ ಜಮೀನಿನ ಮಾಲೀಕ ಆದರ್ಶ ಛಲ ಬಿಡದೇ ಯಶಸ್ವಿಯಾಗಿ ಕನಕಾಂಬರ ಬೆಳೆದಿದ್ದಾರೆ. ಜೊತೆಗೆ ನರ್ಸರಿ ಕೂಡ ನಡೆಸುತ್ತಿದ್ದಾರೆ.

ಇವರ ಪ್ರಕಾರ, ಕನಕಾಂಬರ ಬೆಳೆ ವಿಫ‌ಲವಾಗಲು ಮುಖ್ಯ ಕಾರಣ : ಸಸಿ ಸಾಯೋ ರೋಗ. ಇದೊಂದು ತೊಂದರೆ ಇರದೇ ಹೋದರೆ ಕನಕಾಂಬರ ನಿಜಕ್ಕೂ ಬಂಗಾರದಂಥ ಬೆಳೆ ಅನ್ನುತ್ತಾರೆ.

ಈ ಸಮಸ್ಯೆ ಪರಿಹಾರಕ್ಕಾಗಿ ಇವರು ಹತ್ತು ಹಲವು ಪ್ರಯತ್ನ ಮಾಡಿದ್ದಾರೆ, ಹಲವಾರು ಅನುಭವಿಗಳನ್ನು, ತೋಟಗಾರಿಕಾ ವಿಜ್ಞಾನಿಗಳನ್ನು ಭೇಟಿಯಾಗಿದ್ದಾರೆ. ಆದರೆ ಎಲ್ಲೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಆಮೇಲೆ ಸ್ವತಃ ತಾನೇ ಮದ್ದನ್ನು ಕಂಡು ಹಿಡಿದುಕೊಂಡಿದ್ದಾರೆ.  ಅದು ಹೇಗೆ ಎಂಬುದು ಕುರಿತು ಇಲ್ಲಿದೆ ಮಾಹಿತಿ. 

ಗುಣಿ ಪದ್ದತಿಯಲ್ಲಿ ಸಸಿ ನಾಟಿ ಮಾಡುವುದು, ಮೂರೂವರೆ ಅಡಿ ಅಂತರದ ಸಾಲು ಬಿಟ್ಟು, ಒಂದೂವರೆ ಅಡಿಗೆ ಒಂದು ಗುಣಿ ತೆಗೆಯಬೇಕು. ಗುಣಿಯಿಂದ ಹೊರತಗೆದ ಮಣ್ಣು ಹಾಗೂ ಎರೆಹುಳು ಗೊಬ್ಬರ ಮತ್ತು ಬೇವಿನ ಹಿಂಡಿಯನ್ನು ಮಿಶ್ರಣ ಮಾಡಿ ಗುಣಿ ತುಂಬಬೇಕು. ಗುಣಿ ತುಂಬಿದ ಮೇಲೆ ಮಣ್ಣು ಗುಣಿಯಿಂದ ಅರ್ಧ ಅಡಿಯಷ್ಟಾದರೂ ನೆಲಮಟ್ಟದಿಂದ ಮೇಲೆ ಬಂದಿರಬೇಕು.

Advertisement

ಅಂಥ ಒಂದೊಂದು ಗುಡ್ಡೆಯ ಮೇಲೆ ಎರಡು ಅಥವಾ ಮೂರು ಸಸಿ ನೆಡಬೇಕು. ಕನಕಾಂಬರ ಕೃಷಿಯಲ್ಲಿ  ಹನಿ ನೀರಾವರಿ ಅಳವಡಿಸುವುದು ಉತ್ತಮ ವಿಧಾನ. ಇದರಿಂದ ಖಂಡಿತ ಸಸಿ ಸಾಯುವ ರೋಗ ನಿಯಂತ್ರಿಸಬಹುದು ಎನ್ನುತ್ತಾರೆ ಆದರ್ಶ್‌. 
ಬರಿಗೈಯಲ್ಲಿ ಕನಕಾಂಬರ ಕೃಷಿ ಆರಂಭಿಸಿದ ಆದರ್ಶ್‌ ಅದರಿಂದಲೇ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಪ್ರಕಾರ, ಒಂದು ಸಾವಿರ ಗಿಡದಿಂದ ಐದಾರು ದಿನಕ್ಕೊಮ್ಮೆ ಐದರಿಂದ ಹತ್ತು ಕೆ.ಜಿ ಹೂವು ಕೀಳಬಹುದು. ಸರಾಸರಿ ನಾಲ್ಕು ನೂರು ರುಪಾಯಿಗೆ ಒಂದು ಕೆ.ಜಿ ಹೂ ಮಾರಾಟ ಆಗುತ್ತದೆ ಅಂದುಕೊಂಡರೂ, ವಾರಕ್ಕೆ ಮೂರರಿಂದ ನಾಲ್ಕು ಸಾವಿರ ಆದಾಯ ನಿಶ್ಚಿತ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಕೇವಲ ಹತ್ತು ಗುಂಟೆಯಲ್ಲಿ ಒಂದು ಸಂಸಾರ ನಡೆಸುವಷ್ಟು ಆದಾಯ ಕನಕಾಂಬರದಿಂದ ಬರುತ್ತದೆ ಎನ್ನುವುದು ಆದರ್ಶರ ಅನುಭವ ಮಾತು. 

– ಎಸ್‌.ಕೆ. ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next