Advertisement
ದರ್ಶನ್ ಕೂಡ ನೀನಾಸಂನಲ್ಲೇ ಕಲಿತು ಬಂದವರು. ಅದರಲ್ಲೂ ಆ ಸಮಯದಲ್ಲಿ ದರ್ಶನ್ ಅವರಿಗೆ ಅಡುಗೆ ಮಾಡಿ ಅನ್ನ ಹಾಕಿದ್ದ ರತ್ನಾ ಶ್ರೀಧರ್ ಈಗ ಮೊದಲ ಬಾರಿಗೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆ ಪ್ರೀತಿಗೆ ದರ್ಶನ್ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿ ಹೋಗುತ್ತಿದ್ದಂತೆಯೇ, ಅತ್ತ “ಹಿಕೋರಾ’ ತಂಡ ಮಾಧ್ಯಮದ ಎದುರು ಬಂದು ಕುಳಿತುಕೊಂಡಿತು.
Related Articles
Advertisement
ಯಕ್ಷಗಾನ ಹಾಗು ಭರತನಾಟ್ಯ ಪ್ರಾಕಾರಗಳೂ ಇಲ್ಲಿವೆ. ಅದು ಸಿನಿಮಾಗೆ ಪೂರಕವೂ ಹೌದು. ಶೇ.70 ರಷ್ಟು ನೀನಾಸಂ ಪ್ರತಿಭೆಗಳಿವೆ. ಬೆಂಗಳೂರು, ಸಾಗರ, ಜೋಗ್ ಫಾಲ್ಸ್ ಇತರೆಡೆ ಚಿತ್ರೀಕರಣ ನಡೆಯಲಿದೆ. ಬಹುತೇಕ ಒಂದೇ ಮನೆಯಲ್ಲಿ ನಡೆಯುವ ಕಥೆ ಇದು ಅಂದರು ನಿರ್ದೇಶಕರು. ನಿರ್ಮಾಪಕಿ ರತ್ನ ಶ್ರೀಧರ್‌ಗೆ ಕಥೆ ಇಷ್ಟ ಆಗಿದ್ದಕ್ಕೆ ನಿರ್ಮಾಣ ಮಾಡಲು ಮುಂದಾದರಂತೆ.
ನನ್ನ ಈ ಪ್ರಯತ್ನಕ್ಕೆ ಪತಿ ಶ್ರೀಧರ್ ಸಾಥ್ ಕೊಟ್ಟಿದ್ದಕ್ಕೆ ಚಿತ್ರ ನಿರ್ಮಾಣ ಸಾಧ್ಯವಾಗಿದೆ. ನಾನು 1993ರಿಂದ 2012 ರವರೆಗೆ ನೀನಾಸಂನಲ್ಲಿ ನಟನೆ ತರಬೇತಿ ಪಡೆಯುವ ಕಲಾವಿದರಿಗೆ ಅಡುಗೆ ಮಾಡುತ್ತಿದ್ದೆ. ಅವರಿಗಾಗಿಯೇ ಈ ಚಿತ್ರ. ನಾನೀಗ ಗಡಿಕಟ್ಟೆ ಊರಲ್ಲಿ ತೋಟ ಮಾಡಿಕೊಂಡಿದ್ದೇನೆ. ಇದು ದಿಢೀರನೆ ತೆಗೆದುಕೊಂಡ ನಿರ್ಧಾರವಲ್ಲ. ಒಂದುವರೆ ವರ್ಷದಿಂದಲೂ ಕಥೆ ಕೆತ್ತನೆಯ ಕೆಲಸವಾಗಿದೆ.
ನಮ್ಮ ಸುತ್ತಮುತ್ತಲಿನ ಘಟನೆಗಳೇ ಕಥೆಯಲ್ಲಿ ಸಾಗುತ್ತವೆ. ಮೊದಲ ಪ್ರಯತ್ನ ನಿಮ್ಮ ಸಹಕಾರ ಬೇಕು’ ಅಂದರು ನಿರ್ಮಾಪಕರು. “ಕಟಕ’ ಬಳಿಕ ಸ್ಪಂದನಾಗೆ ಸಾಕಷ್ಟು ಕಥೆ ಬಂದವಂತೆ. ಆದರೆ, ಎಲ್ಲವೂ ಒಂದೇ ರೀತಿಯ ಕಥೆ, ಪಾತ್ರವಾಗಿದ್ದರಿಂದ ಯಾವುದನ್ನೂ ಒಪ್ಪಲಿಲ್ಲವಂತೆ. “ಹಿಕೋರಾ’ ಕಥೆ, ಪಾತ್ರ ವಿಭಿನ್ನವಾಗಿದ್ದು, ನಟನೆಗೂ ಹೆಚ್ಚು ಜಾಗವಿದೆ. ರಂಗಭೂಮಿ ಕಲಾವಿದರಿಗೆ ಇಂತಹ ಪಾತ್ರಗಳೇ ಬೇಕು.
ಅದಿಲ್ಲಿ ಸಿಕ್ಕಿದೆ. ನಾನಿಲ್ಲಿ ನಿರ್ದೇಶಕರೊಬ್ಬರ ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿದ್ದೇ ಅಂದರು ಅವರು. ಯಶ್‌ಶೆಟ್ಟಿ ಅವರಿಗೆ ಹೀರೋಗಿಂತ ನೆಗೆಟಿವ್ ಪಾತ್ರ ಮಾಡುವ ಆಸೆಯಂತೆ. ಆದರೆ, “ಸೂಜಿದಾರ’ ನಂತರ ಈ ಕಥೆ ಕೇಳಿದ ಮೇಲೆ ಬಿಡಲಾಗಲಿಲ್ಲವಂತೆ. ಅವರಿಲ್ಲಿ ಸಿನಿಮಾದೊಳಗಿನ ನಿರ್ದೇಶಕರ ಹೀರೋ ಆಗಿಯೇ ನಟಿಸುತ್ತಿದ್ದಾರಂತೆ. ಇನ್ನು, ಪೂರ್ಣಚಂದ್ರ ತೇಜಸ್ವಿ ಹೊಸಬಗೆಯ ಹಾಡುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಿದ್ದಾರಂತೆ.
ಛಾಯಾಗ್ರಾಹಕ ರಮೇಶ್‌ಬಾಬು ಅವರಿಲ್ಲಿ ಒಂದೇ ಮನೆಯಲ್ಲಿ ಹೆಚ್ಚು ಚಿತ್ರೀಕರಣ ನಡೆಯುವುದರಿಂದ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದಾರಂತೆ. ಉಳಿದಂತೆ ಈ ಚಿತ್ರಕ್ಕೆ ಶ್ರೀಕಂಠಯ್ಯ ಹಾಗೂ ವಿನಾಯಕರಾಮ್ ಕಲಗಾರು ಸಹ ನಿರ್ಮಾಪಕರಾಗಿದ್ದಾರೆ. ರತ್ನಮ್ಮ ಅವರ ಮೇಲಿರುವ ಗೌರವಕ್ಕೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದಾಗಿ ವಿನಾಯಕರಾಮ್ ಹೇಳುವ ಹೊತ್ತಿಗೆ ಮಾತುಕತೆಗೂ ಬ್ರೇಕ್ ಬಿತ್ತು.