Advertisement
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಶಿಕ್ಷಣವು ಆಧುನಿಕ ಮತ್ತು ತಾಂತ್ರಿಕತೆಯ ಯುಗದ ಶಿಕ್ಷಣ ಕ್ಷೇತ್ರ ಹೊಂದಬೇಕಾದ ಅತೀ ಅಗತ್ಯದ ಶಿಕ್ಷಣವೆಂದೇ ಹೇಳಬಹುದು. ಕ್ಲಾಸ್‌ರೂಂ ಶಿಕ್ಷಣ, ಪಠ್ಯಪುಸ್ತಕಾಧಾರಿತ ಶಿಕ್ಷಣಗಳಿಂದ ಪ್ರಸ್ತುತ ಅತಿ ವೇಗದ ಜಗತ್ತಿನಲ್ಲಿ ಜ್ಞಾನ ಸಂಪಾದನೆ ಮತ್ತು ಬದುಕಿನ ನಿರ್ವಹಣೆಗೆ ಸಾಕಾಗುವ ಸೌಲಭ್ಯಗಳನ್ನು ಖಂಡಿತ ಕಲ್ಪಿಸಿಕೊಡದು. ಕ್ಲಾಸ್ ರೂಂನಿಂದಾಚೆಗಿನ ಜಗತ್ತನ್ನು ತಿಳಿದುಕೊಳ್ಳುವ ಮತ್ತು ಅಲ್ಲಾಗುವ ಬದಲಾವಣೆಗಳನ್ನು ಸನಿಹದಿಂದ ವೀಕ್ಷಿಸುವ ಆಧುನಿಕ ಜಗತ್ತಿನೊಂದಿಗೆ ಹೆಜ್ಜೆ ಹಾಕಬೇಕಾದುದು ಇಂದಿನ ಮಕ್ಕಳಿಗೆ ಅಗತ್ಯವೂ, ಅನಿವಾರ್ಯವೂ ಆಗಿದೆ.
ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಕೌಶಲಗಳನ್ನು ಪಡೆಯುವ ಅವಕಾಶ ನೀಡುವುದು ಮತ್ತು ಈ ವಿಧಾನದ ಶಿಕ್ಷಣದ ಮುಖಾಂತರ ಕಲಿಕಾ ಪ್ರಕ್ರಿಯೆಯನ್ನು ವೇಗಗೊಳಿಸುವುದು ಯೋಜನೆಯ ಮಹತ್ತರ ಉದ್ದೇಶಗಳಲ್ಲೊಂದು. ಶಾಲೆಗಳಲ್ಲಿ ಪ್ರತ್ಯೇಕ ಗಣಕಯಂತ್ರ ಪ್ರಯೋಗಾಲಯವನ್ನು ಹೊಂದಿ ಅಲ್ಲಿ ಆನ್‌ಲೈನ್ ಶಿಕ್ಷಣವನ್ನೂ ಪರಿಗಣಿಸುವ ಉದ್ದೇಶದೊಂದಿಗೆ ಯೋಜನೆ ರೂಪುಗೊಂಡಿದೆ.
Related Articles
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಐಸಿಟಿ ಶಿಕ್ಷಣವು ಹಂತ ಹಂತವಾಗಿ ರೂಪುಗೊಳ್ಳುತ್ತಿದೆ. ಹಾಗೆ ನೋಡಿದರೆ ಇಲ್ಲಿನ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿದೆ ಎನ್ನುತ್ತಾರೆ ಅಧಿಕಾರಿಗಳು. ಜಿಲ್ಲೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕಲಿಕಾಸಕ್ತಿಯನ್ನು ಪರಿಗಣಿಸಿ ಹಂತ ಹಂತವಾಗಿ ಈ ಶಿಕ್ಷಣ ವ್ಯವಸ್ಥೆಯನ್ನು ಶಾಲೆಗಳಲ್ಲಿ ಜೋಡಿಸುವ ಕೆಲಸ ನಡೆಯುತ್ತಿದೆ. 2016- 17 ಹಾಗೂ 2017- 18ನೇ ಸಾಲಿನಲ್ಲಿ ಒಟ್ಟು 58 ಸರಕಾರಿ ಪ್ರೌಢಶಾಲೆಗಳಲ್ಲಿ ಐಟಿಸಿ ಶಿಕ್ಷಣವನ್ನು ಅಳವಡಿಸಲಾಗಿದ್ದು, ಕಂಪ್ಯೂಟರ್, ಲ್ಯಾಪ್ ಟಾಪ್ ಗಳನ್ನು ಶಾಲೆಗಳಿಗೆ ನೀಡಲಾಗಿದೆ. 2018- 19ನೇ ಸಾಲಿನಲ್ಲಿ 31 ಸರಕಾರಿ ಪ್ರೌಢಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಅನುಷ್ಠಾನಗೊಳಿಸಿದ ಎಲ್ಲ ಶಾಲೆಗಳಲ್ಲಿಯೂ ಮಕ್ಕಳು ಆಸಕ್ತಿಯಿಂದಲೇ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಡಯಟ್ ಪ್ರಾಂಶುಪಾಲ ಸಿಪ್ರಿಯನ್ ಮೊಂತೆರೋ. ಸರಕಾರಿ ಶಾಲೆಗಳಲ್ಲಿ ಸರಕಾರಿ ಯೋಜಿತವಾಗಿ ಈ ಯೋಜನೆ ಅನುಷ್ಠಾನಗೊಂಡರೆ, ಖಾಸಗಿ ಶಾಲೆಗಳಲ್ಲಿ ಐಸಿಟಿ ಎಂಬುದು ಶಿಕ್ಷಣದ ಭಾಗವೇ ಆಗಿದ್ದು, ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ಈ ಶಿಕ್ಷಣವನ್ನು ಪ್ರಾಥಮಿಕ ಹಂತದ ಕಲಿಕಾವಿಧಾನದೊಂದಿಗೆ ಬೋಧಿಸಲಾಗುತ್ತದೆ.
Advertisement
ಮಾನದಂಡಕ್ಕನುಗುಣವಾಗಿ ಶಿಕ್ಷಣವಿಶೇಷವೆಂದರೆ ಐಸಿಟಿಯನ್ನು ಎಲ್ಲ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದಿಲ್ಲ. ಇದಕ್ಕೆ ಕೆಲವೊಂದು ಮಾನದಂಡಗಳಿದ್ದು, ಇದಕ್ಕನುಗುಣವಾಗಿ ಕಾರ್ಯ ನಿರ್ವಹಿಸುವ ಶಾಲೆಗಳನ್ನಷ್ಟೇ ಈ ಯೋಜನೆ ವ್ಯಾಪ್ತಿಗೆ ತರಲಾಗುತ್ತದೆ. ಮುಖ್ಯವಾಗಿ ನಿಗದಿತ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಇರಬೇಕು. ಅಲ್ಲದೆ ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ಮತ್ತು ಗಣಿತಕ್ಕೆ ಅದೇ ವಿಷಯದಲ್ಲಿ ಪಾಠ ಮಾಡುವ ಅರ್ಹತೆ ಹೊಂದಿರುವ ಶಿಕ್ಷಕರಿರಬೇಕು. ಶಿಕ್ಷಕರಿಗೆ ತರಬೇತಿ
ಈ ಯೋಜನೆಯನುಸಾರ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ತಂತ್ರಜ್ಞಾನ ಶಿಕ್ಷಣವನ್ನು ಬೋಧಿಸುವಂತಿಲ್ಲ. ಮುಖ್ಯೋಪಾಧ್ಯಾ ಯರು ಸಹಿತ ಐವರು ಶಿಕ್ಷಕರನ್ನು ಇದಕ್ಕೆಂದೇ ತರಬೇತಿಗೊಳಿಸಿ ಅವರನ್ನು ವಿದ್ಯಾರ್ಥಿಗಳಿಗೆ ಬೋಧನೆಗೆ ಸಜ್ಜುಗೊಳಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಯುಗದ ಸಂಪೂರ್ಣ ಜ್ಞಾನ ಸಿಗುವಂತಾಗಬೇಕೆಂಬುದು ಇದರ ಮಹತ್ತರ ಉದ್ದೇಶವೂ ಆಗಿದೆ. ಇಂದಿನ ಅನಿವಾರ್ಯತೆ
ಜಗತ್ತು ತಾಂತ್ರಿಕ ಓಟದೊಂದಿಗೆ ಪೈಪೋಟಿಯಲ್ಲಿದೆ. ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ, ಅನ್ವೇಷಣೆಗಳು ನಡೆಯುತ್ತಲೇ ಇವೆ. ಆನ್‌ಲೈನ್ ಜಗತ್ತಿನಲ್ಲಿಯೂ ಕ್ಷಿಪ್ರಗತಿಯ ಬೆಳವಣಿಗೆಗಳಾಗುತ್ತಿವೆ. ಈ ಎಲ್ಲ ಬೆಳವಣಿಗೆಗಳ- ಬದಲಾವಣೆಗಳ ಜತೆಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಮನುಷ್ಯನಿಗಿದೆ. ಹಾಗೆ ಹೋಗಬೇಕಾದರೆ ಪ್ರಾಥಮಿಕ ಹಂತದಿಂದಲೇ ಆನ್‌ಲೈನ್ ಒಡನಾಟ ಬೆಳೆಸಿಕೊಳ್ಳುವಿಕೆ ಇವತ್ತಿನ ಆವಶ್ಯಕತೆಯೂ ಆಗಿದೆ. ಅದಕ್ಕಾಗಿಯೇ ಮಾಹಿತಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರ ಹೆಚ್ಚು ಒತ್ತು ನೀಡುತ್ತಲೇ ಬಂದಿವೆ. ಅವುಗಳ ಅನುಷ್ಠಾನವೂ ಶಾಲಾ ಹಂತದಲ್ಲಿ ಮುಖ್ಯವಾಗಿರುತ್ತದೆ. ಧನ್ಯಾ ಬಾಳೆಕಜೆ