Advertisement

ಇಚ್ಲಂಪಾಡಿ: ಮತ್ತೆ ಕಾಡಾನೆ ದಾಳಿ, ಕೃಷಿ ನಾಶ

12:02 AM Jul 31, 2023 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಶನಿವಾರ ರಾತ್ರಿ ಕಾಡಾನೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ನಾಶಗೊಳಿಸಿವೆ.

Advertisement

ಕೊರಮೇರು ನಿವಾಸಿ ಕೆ.ರಮೇಶ್‌ ಗೌಡ, ಕುಶಾಲಪ್ಪ ಗೌಡ ದೇಸಾಲು, ಹೊನ್ನಪ್ಪ ಗೌಡ ದೇಸಾಲು ಅವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ಅಡಿಕೆ ಗಿಡ, ಬಾಳೆ ಗಿಡಗಳನ್ನು ಹಾನಿಗೊಳಿಸಿವೆ. ಘಟನೆಯಿಂದ ಸಾವಿರಾರು ರೂ.ನಷ್ಟ ಸಂಭವಿಸಿದೆ. ಅರಣ್ಯ ಭಾಗದಲ್ಲಿರುವ ಇಚ್ಲಂಪಾಡಿ ಗ್ರಾಮದಲ್ಲಿ ಪದೇ ಪದೇ ಆನೆ ದಾಳಿ ನಡೆಯುತ್ತಿದ್ದು ಅಪಾರ ಕೃಷಿ ಹಾನಿಯಾಗುತ್ತಿದೆ. ಗ್ರಾಮಸ್ಥರೂ ಆನೆ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಆವರಣ ಗೋಡೆ ಹಾನಿ
ಕಾಡಾನೆ ದಾಳಿಯಿಂದ ಕೃಷಿ ಹಾಗೂ ಮನೆ ಆವರಣಗೋಡೆ ಹಾನಿಗೊಂಡಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗ್ರಾಮದ ಬಿಜೇರು ನಿವಾಸಿ ದಯಾನಂದ ಆಚಾರ್ಯ ಅವರ ಕೃಷಿ ತೋಟಕ್ಕೆ ನುಗ್ಗಿರುವ ಕಾಡಾನೆ ನೇಂದ್ರ ಬಾಳೆಗಿಡ ಹಾನಿಗೊಳಿಸಿದೆ ಮಾತ್ರವಲ್ಲದೇ ಬಿಂದು ಸಂತೋಷ್‌ ಅವರ ನಿರ್ಮಾಣ ಹಂತದ ಮನೆಯ ಸುತ್ತಲಿನ ತಡೆಗೋಡೆಯನ್ನು ಕೆಡವಿ ಹಾಕಿವೆ. ಅಲ್ಲದೇ ಅವರ ನಿರ್ಮಾಣ ಹಂತದ ಮನೆಯ ಮೆಟ್ಟಿಲನ್ನೂ ಹಾನಿಗೊಳಿಸಿವೆ. ಘಟನೆಯಿಂದ ಅಂದಾಜು 3 ಲಕ್ಷ ರೂ.ನಷ್ಟ ಸಂಭವಿಸಿದೆ. ಆನೆ ದಾಳಿ ಬಗ್ಗೆ ಎರಡೂ ಮನೆಯವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಕಂಬಿಬಾಣೆ ಪರ್ಚಿಕೆರೆಯಲ್ಲಿ ಕಾಡಾನೆ ಸಾವು
ಮಡಿಕೇರಿ: ಸುಮಾರು 20 ವರ್ಷದ ಗಂಡು ಕಾಡಾನೆಯೊಂದು ತೋಟದಲ್ಲಿ ಸತ್ತು ಬಿದ್ದಿರುವ ಘಟನೆ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಪರ್ಚಿಕೆರೆ ಎಂಬಲ್ಲಿ ಬೆಳಕಿಗೆ ಬಂದಿದೆ.

ಶುಕ್ರವಾರ ರಾತ್ರಿಯೇ ಈ ಘಟನೆ ನಡೆದಿದ್ದು, ತಡವಾಗಿ ಕಾಡಾನೆಯ ದೇಹ ಗೋಚರಿಸಿದೆ. ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆಯಾದರೂ ಬೇಲಿಗೆ ಬಳಸುವ ಮುಳ್ಳು ತಂತಿಯ ಉರುಳು ಕುತ್ತಿಗೆಯಲ್ಲಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.

Advertisement

ಸ್ಥಳಕ್ಕೆ ಕುಶಾಲನಗರ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಡಿಸಿಎಫ್ ಪೂವಯ್ಯ, ಪೊಲೀಸ್‌ ಶ್ವಾನದಳ, ಸುಂಟಿಕೊಪ್ಪ ಪೊಲೀಸ್‌ ಠಾಣಾಧಿಕಾರಿ ಹಾಗೂ ಸಿಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಶುವೈದ್ಯ ಡಾ| ಚಿಟ್ಟಿಯಪ್ಪ ಅವರು ಮರಣೋತ್ತರ ಪರೀಕ್ಷೆ ನಡೆಸಿದ ಅನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next