Advertisement

ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ : ಡ್ರಾ-ಟೈ ಆದರೆ ಇತ್ತಂಡಗಳೂ ಚಾಂಪಿಯನ್ಸ್‌

01:01 AM May 29, 2021 | Team Udayavani |

ದುಬಾೖ: ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಚೊಚ್ಚಲ ವಿಶ್ವಕಪ್‌ ಟೆಸ್ಟ್‌ ಫೈನಲ್‌ ಪಂದ್ಯ ಸ್ಪಷ್ಟ ಫಲಿತಾಂಶ ಕಾಣದೇ ಹೋದರೆ ಆಗ ಚಾಂಪಿಯನ್‌ ತಂಡವನ್ನು ಹೇಗೆ ನಿರ್ಧರಿಸುವುದು ಎಂಬ ಪ್ರಶ್ನೆ ಹಾಗೂ ಕುತೂಹಲಕ್ಕೆ ಐಸಿಸಿ ಶುಕ್ರವಾರ ಉತ್ತರ ಒದಗಿಸಿದೆ. ಆಗ ಜಂಟಿ ವಿಜೇತರೆಂದು ತೀರ್ಮಾನಿಸಿ ಎರಡೂ ತಂಡಗಳಿಗೆ ಟ್ರೋಫಿ ನೀಡುವ ತೀರ್ಮಾನಕ್ಕೆ ಬಂದಿದೆ. ಯಾವುದೇ ರೀತಿಯ ಟೈ ಬ್ರೇಕರ್‌ ನಿಯಮವನ್ನು ಅಳವಡಿಸದಿರಲು ನಿರ್ಧರಿಸಿದೆ.

Advertisement

ಈ ಎರಡೂ ನಿಯಮಗಳನ್ನು ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಯನ್ನು ಆಡಿಸುವ ಮೊದಲೇ, ಅಂದರೆ 2018ರ ಜೂನ್‌ನಲ್ಲೇ ಅಳವಡಿಸಲಾಗಿತ್ತೆಂದೂ, ಇದರಲ್ಲಿ ಯಾವುದೇ ಬದಲಾವಣೆ ತರಲಾಗದೆಂದೂ ಐಸಿಸಿ ತಿಳಿಸಿದೆ. ಹಾಗೆಯೇ ಅನಿವಾರ್ಯವಿದ್ದರಷ್ಟೇ ಮೀಸಲು ದಿನವನ್ನು ಇರಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

ಓವರ್‌ಗಳ ಹೊಂದಾಣಿಕೆ
ಟೆಸ್ಟ್‌ ಪಂದ್ಯವೆಂದರೆ ತಲಾ 90 ಓವರ್‌ಗಳ 5 ದಿನಗಳ ಆಟ. ಅಕಸ್ಮಾತ್‌ ಮಳೆ ಹಾಗೂ ಇನ್ನಿತರ ಪ್ರತಿಕೂಲ ಹವಾಮಾನದಿಂದಾಗಿ ದಿನದ 90 ಓವರ್‌ಗಳ ಕೋಟಾವನ್ನು ಪೂರ್ತಿಗೊಳಿಸಲು ಸಾಧ್ಯವಾಗದೇ ಹೋದರೆ ಆಗ ಮರುದಿನ ಪಂದ್ಯವನ್ನು ಬೇಗ ಆರಂಭಿಸಲಾಗುವುದು. ಜತೆಗೆ ವಿಳಂಬವಾಗಿ ಮುಗಿಸಿ 90 ಓವರ್‌ಗಳ ಕೋಟಾವನ್ನು ಸರಿದೂಗಿಸಲಾಗುವುದು.

ಅಕಸ್ಮಾತ್‌ ಈ ಅವಧಿಯಲ್ಲೂ ನಿಗದಿತ ಓವರ್‌ಗಳ ಆಟ ಸಾಧ್ಯವಾಗದೇ ಹೋದರಷ್ಟೇ ಮೀಸಲು ದಿನ ಇರಲಿದೆ. ಇದನ್ನು ಪೂರ್ತಿ 5 ದಿನಗಳ ಆಟದ ಮರುದಿನವಷ್ಟೇ ಅಳವಡಿಸಲಾಗುವುದು. ಅಗ ಜೂನ್‌ 23 ಮೀಸಲು ದಿನವಾಗಿರಲಿದೆ. ಒಂದು ವೇಳೆ ನಷ್ಟವಾದ ಅವಧಿಯನ್ನು ನಿಗದಿತ 5 ದಿನಗಳಲ್ಲಿ ಸರಿದೂಗಿಸಲು ಸಾಧ್ಯವಾದರೆ ಆಗ ಮೀಸಲು ದಿನ ಇರದು ಎಂದು ಐಸಿಸಿ ತಿಳಿಸಿದೆ.

ಗ್ರೇಡ್‌-1 ಡ್ನೂಕ್ಸ್‌ ಬಾಲ್‌
ಫೈನಲ್‌ ಪಂದ್ಯಕ್ಕೆ ಗ್ರೇಡ್‌-1 ಡ್ನೂಕ್ಸ್‌ ಚೆಂಡನ್ನು ಬಳಸಲಾಗುವುದು ಎಂದು ಐಸಿಸಿ ತಿಳಿಸಿದೆ. ಸಾಮಾನ್ಯವಾಗಿ ಭಾರತದಲ್ಲಿ ಎಸ್‌ಜಿ ಬಾಲ್ಸ್‌, ನ್ಯೂಜಿಲ್ಯಾಂಡ್‌ನ‌ಲ್ಲಿ ಕೂಕಬುರ ಚೆಂಡನ್ನು ಟೆಸ್ಟ್‌ ವೇಳೆ ಉಪಯೋಗಿಸಲಾಗುತ್ತದೆ.

Advertisement

5ನೇ ದಿನದ ಕೊನೆಯಲ್ಲಿ ಘೋಷಣೆ
ಫೈನಲ್‌ ಪಂದ್ಯಕ್ಕೆ ಮೀಸಲು ದಿನದ ಅಗತ್ಯವನ್ನು ಯಾವಾಗ ನಿರ್ಧರಿಸಲಾಗುತ್ತದೆ ಎಂಬ ಪ್ರಶ್ನೆಗೂ ಐಸಿಸಿ ಪರಿಹಾರ ಒದಗಿಸಿದೆ. ಅಂತಿಮ ದಿನದಾಟದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ “ರಿಸರ್ವ್‌ ಡೇ’ ನಿರ್ಧಾರಕ್ಕೆ ಬರಲಾಗುವುದು ಎಂದಿದೆ.

ಫಲಿತಾಂಶಕ್ಕಾಗಿ ಅವಧಿ ವಿಸ್ತರಣೆ ಇಲ್ಲ
5 ದಿನಗಳ ಆಟ ಸಂಪೂರ್ಣಗೊಂಡು, ತಂಡವೊಂದರ ಗೆಲುವಿಗೆ ಒಂದೆರಡು ವಿಕೆಟ್‌ ಅಥವಾ ಕೆಲವೇ ರನ್‌ ಅಗತ್ಯವಿದ್ದ ಸಂದರ್ಭದಲ್ಲಿ ಸ್ಪಷ್ಟ ಫಲಿತಾಂಶಕ್ಕಾಗಿ ಪಂದ್ಯದ ಅವಧಿಯನ್ನು ವಿಸ್ತರಿಸಲಾಗದು; ಆಗ ಪಂದ್ಯವನ್ನು ಡ್ರಾ ಎಂದೇ ತೀರ್ಮಾನಿಸಿ ಇತ್ತಂಡಗಳನ್ನೂ ಚಾಂಪಿಯನ್‌ ಎಂದು ಘೋಷಿಸಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next