Advertisement

ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ನಲ್ಲಿ ಚಾಂಪಿಯನ್ ಆದ ನ್ಯೂಜಿಲ್ಯಾಂಡ್‌

11:26 PM Jun 23, 2021 | Team Udayavani |

ಸೌತಾಂಪ್ಟನ್‌: ಕೊನೆಗೂ ಮೂರನೇ ಪ್ರಯತ್ನದಲ್ಲಿ ನ್ಯೂಜಿಲ್ಯಾಂಡ್‌ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕೇನ್‌ ವಿಲಿಯಮ್ಸನ್‌ ಪಡೆ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿ ಚೊಚ್ಚಲ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಕಿರೀಟ ಏರಿಸಿಕೊಂಡು ಮೆರೆದಿದೆ. ಸಾಂಪ್ರದಾಯಿಕ ಕ್ರಿಕೆಟಿನ ಮೊದಲ ಸಾಮ್ರಾಟನೆನಿಸಿದೆ.

Advertisement

ಮೀಸಲು ದಿನಕ್ಕೆ ವಿಸ್ತರಿಸಲ್ಪಟ್ಟ ಫೈನಲ್‌ ಹಣಾಹಣಿಯಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ ಪತನ ಎನ್ನುವುದು ಸ್ಪಷ್ಟ ಫಲಿತಾಂಶಕ್ಕೆ ರಹದಾರಿ ಒದಗಿಸಿತು. ಇಲ್ಲವಾದರೆ ಎರಡೂ ತಂಡಗಳು ಒಟ್ಟಿಗೇ ಕಪ್‌ ಗೌರವ ಸಂಪಾದಿಸಬಹುದಿತ್ತು. ಆರನೇ ದಿನದ ಶುಭ್ರ ಹಾಗೂ ಸ್ವತ್ಛಂದ ವಾತಾವರಣದಲ್ಲಿ 139 ರನ್ನುಗಳ ಗುರಿ ಪಡೆದ ನ್ಯೂಜಿಲ್ಯಾಂಡ್‌ 2 ವಿಕೆಟಿಗೆ 140 ರನ್‌ ಬಾರಿಸಿ ನೂತನ ಇತಿಹಾಸ ನಿರ್ಮಿಸಿತು. ಆಗ ವಿಲಿಯಮ್ಸನ್‌ 52 ಮತ್ತು ಟೇಲರ್‌ 47 ರನ್‌ ಮಾಡಿ ಅಜೇಯರಾಗಿದ್ದರು.

 ಕೊಹ್ಲಿ, ಪೂಜಾರ ಫೇಲ್‌ :

ಬುಧವಾರದ ಮೊದಲ ಅವಧಿಯ ಆಟ ಕೈಲ್‌ ಜಾಮೀಸನ್‌ಗೆ ಮೀಸಲಾಯಿತು. ಕಿವೀಸ್‌ ವೇಗಿ ಎರಡು ದೊಡ್ಡ ಬೇಟೆಯ ಮೂಲಕ ಭಾರತದ ಮೇಲೆ ಒತ್ತಡ ಹೇರಿದರು. ನಾಯಕ ವಿರಾಟ್‌ ಕೊಹ್ಲಿ ಮತ್ತು ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಅವರನ್ನು “ಜಾಮಿ’ ಸತತ ಓವರ್‌ಗಳಲ್ಲಿ, ಒಂದೇ ರನ್‌ ಅಂತರದಲ್ಲಿ ಪೆವಿಲಿಯನ್ನಿಗೆ ಅಟ್ಟಿದರು. 2ಕ್ಕೆ 64ರಲ್ಲಿದ್ದ ಭಾರತ 72ಕ್ಕೆ ತಲಪುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು.

ಕೊಹ್ಲಿ ಗಳಿಕೆ ಕೇವಲ 13 ರನ್‌. ಎರಡೂ ಇನ್ನಿಂಗ್ಸ್‌ಗಳಲ್ಲಿ ಇವರ ವಿಕೆಟ್‌ ಜಾಮೀಸನ್‌ ಪಾಲಾಯಿತು. ಅಂತಿಮ ದಿನ ಕ್ರೀಸಿಗೆ ಬರುವ ಮುನ್ನ ಕೀಪರ್‌ ವಾಟಿÉಂಗ್‌ಗೆ ಶೇಕ್‌ಹ್ಯಾಂಡ್‌ ಮಾಡಿದ್ದ ಕೊಹ್ಲಿ, ತಮ್ಮ ಕ್ಯಾಚನ್ನೂ ವಾಟಿÉಂಗ್‌ಗೇ ನೀಡಿ ವಾಪಸಾದರು. 29 ಎಸೆತ ಎದುರಿಸಿದ ಕೊಹ್ಲಿ ಒಂದೂ ಬೌಂಡರಿ ಶಾಟ್‌ ಬಾರಿಸಲಿಲ್ಲ. ಪೂಜಾರ 80 ಎಸೆತ ನಿಭಾಯಿಸಿದರೂ ಮತ್ತೆ ನಿಧಾನ ಗತಿಯ ಬ್ಯಾಟಿಂಗ್‌ಗೆ ಮೊರೆಹೋದರು. 15 ರನ್ನಿಗೆ 80 ಎಸೆತ ವ್ಯಯಿಸಿದರು. ಹೊಡೆದದ್ದು 2 ಫೋರ್‌.

Advertisement

ಉಪನಾಯಕ ಅಜಿಂಕ್ಯ ರಹಾನೆ ಕೂಡ ರಕ್ಷಣೆಗೆ ನಿಲ್ಲುವಲ್ಲಿ ವಿಫ‌ಲರಾದರು. 40 ಎಸೆತಗಳಿಂದ 15 ರನ್‌ ಮಾಡಿದ ಅವರು ಬೌಲ್ಟ್ ಬಲೆಗೆ ಬಿದ್ದರು. ಆಗ ಭರ್ತಿ 50 ಓವರ್‌ಗಳ ಆಟ ಮುಗಿದಿತ್ತು; ಸ್ಕೋರ್‌ 109 ರನ್‌ ಆಗಿತ್ತು. ಲಂಚ್‌ ವೇಳೆ ಭಾರತ 130ಕ್ಕೆ 5 ವಿಕೆಟ್‌ ಕಳೆದುಕೊಂಡು ಅಪಾಯದ ಸುಳಿಗೆ ಸಿಲುಕಿತ್ತು.

ಆಲ್‌ರೌಂಡರ್‌ ರಿಷಭ್‌ ಪಂತ್‌ ಮತ್ತು ಆಲ್‌ರೌಂಡರ್‌ ರವೀಂದ್ರ ಜಡೇಜ ಒಂದಿಷ್ಟು ಭರವಸೆ ಮೂಡಿಸಿದರು. ಭಾರತ ಕನಿಷ್ಠ 200 ರನ್ನುಗಳ ಗಡಿಯನ್ನಾದರೂ ತಲುಪೀತು ಎಂಬ ನಿರೀಕ್ಷೆ ಹುಟ್ಟುಹಾಕಿದರು. ಪಂತ್‌ ಎಂದಿನ ಬೀಸು ಹೊಡೆತಗಳಿಗೆ ಬದಲಾಗಿ ಕ್ರೀಸ್‌ ಆಕ್ರಮಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಇದರಲ್ಲಿ ಬಹುತೇಕ ಯಶಸ್ವಿಯೂ ಆದರು. 88 ಎಸೆತಗಳಿಂದ 41 ರನ್‌ (4 ಬೌಂಡರಿ) ಮಾಡಿದ ಪಂತ್‌ ಅವರೇ ಭಾರತದ ಟಾಪ್‌ ಸ್ಕೋರರ್‌ ಆಗಿದ್ದರು. ಇಂಥದೊಂದು ಮಹತ್ವದ ಪಂದ್ಯದಲ್ಲಿ ಭಾರತದ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗದಿದ್ದುದೊಂದು ದುರಂತ.

ಸೌಥಿ 4, ಬೌಲ್ಟ್ 3, ಜಾಮೀಸನ್‌ 2 ಹಾಗೂ ವ್ಯಾಗ್ನರ್‌ ಒಂದು ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-217 ಮತ್ತು 170. ನ್ಯೂಜಿಲ್ಯಾಂಡ್‌-249 ಮತ್ತು 2 ವಿಕೆಟಿಗೆ 140

Advertisement

Udayavani is now on Telegram. Click here to join our channel and stay updated with the latest news.

Next