Advertisement

ಇನ್ನು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಸಂಭ್ರಮ

09:19 AM Jul 31, 2019 | Sriram |

ದುಬಾೖ: ಐದು ದಿನಗಳ ಸಾಂಪ್ರದಾಯಿಕ ಟೆಸ್ಟ್‌ ಕ್ರಿಕೆಟಿಗೆ ಹೊಸ ರಂಗು ತುಂಬುವ, ಇದನ್ನು ಇನ್ನಷ್ಟು ಲೋಕಪ್ರಿಯಗೊಳಿಸುವ ಉದ್ದೇಶದಿಂದ ಮುಂದಿನೆರಡು ವರ್ಷಗಳ ಕಾಲ ನಡೆಯುವ “ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌’ಗೆ (ಡಬ್ಲ್ಯುಟಿಸಿ) ಸೋಮವಾರ ದುಬಾೖಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.

Advertisement

“ವಿಶ್ವದ ಅತ್ಯುತ್ತಮ ತಂಡಗಳು ಪಾಲ್ಗೊಳ್ಳುವ ಸರಣಿ ಇದಾಗಲಿದ್ದು, ಪ್ರತಿಯೊಂದು ಪಂದ್ಯವೂ ಎಷ್ಟು ಪ್ರಾಮುಖ್ಯ ಪಡೆಯಲಿದೆ ಎಂಬುದಕ್ಕೆ ಈ ಕೂಟ ಸಾಕ್ಷಿ ಯಾಗ ಲಿದೆ. ದ್ವಿಪಕ್ಷೀಯ ಸರಣಿಗೆ ಇದೊಂದು ಹೊಸ ಆಯಾಮ ನೀಡಲಿದೆ. ಏಕದಿನ ಹಾಗೂ ಟಿ20 ವಿಶ್ವಕಪ್‌ ಪಂದ್ಯಾವಳಿಯಷ್ಟೇ ಜನಪ್ರಿಯ ಗೊಳ್ಳಲಿದೆ’ ಎಂದು ಐಸಿಸಿ ಜನರಲ್‌ ಮ್ಯಾನೇಜರ್‌ ಜೆಫ್ ಅಲ್ಲಡೈìಸ್‌ ಈ ಸಂದರ್ಭದಲ್ಲಿ ಹೇಳಿದರು.

ಈ ಕೂಟದಲ್ಲಿ ಆಸ್ಟ್ರೇಲಿಯ, ಬಾಂಗ್ಲಾ ದೇಶ, ಇಂಗ್ಲೆಂಡ್‌, ಭಾರತ, ನ್ಯೂಜಿಲ್ಯಾಂಡ್‌, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಸೆಣಸಲಿವೆ. ಗುರುವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಯೊಂದಿಗೆ ಸ್ಪರ್ಧೆ ಕಾವೇರಿಸಿಕೊಳ್ಳಲಿದೆ.

ಅತ್ಯಧಿಕ ಅಂಕ ಸಂಪಾದಿಸಿದ ಅಗ್ರ 2 ತಂಡಗಳ ನಡುವಿನ ಫೈನಲ್‌ ಹಣಾಹಣಿ 2021ರ ಜೂನ್‌ನಲ್ಲಿ ನಡೆಯಲಿದೆ. ಇಂಗ್ಲೆಂಡ್‌ನ‌ಲ್ಲಿ ನಡೆಯುವ ಈ ಫೈನಲ್‌ ಪಂದ್ಯದ ಆತಿಥ್ಯ ಬಹುಶಃ ಲಾರ್ಡ್ಸ್‌ ಪಾಲಾಗಲಿದೆ. ಗೆದ್ದವರು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಕಿರೀಟ ಏರಿಸಿ ಕೊಳ್ಳಲಿದ್ದಾರೆ.

ಟೆಸ್ಟ್‌ ಸರಣಿಯ ಅಂಕ ಪದ್ಧತಿ
ಪ್ರತಿಯೊಂದು ಸರಣಿಗೂ 120 ಅಂಕಗಳನ್ನು ನಿಗದಿಗೊಳಿಸಲಾಗಿದೆ. ಸರಣಿಯಲ್ಲಿ ನಡೆಯುವ ಒಟ್ಟು ಟೆಸ್ಟ್‌ ಪಂದ್ಯಗಳ ಸಂಖ್ಯೆಯಿಂದ ಅಂಕಗಳನ್ನು ವಿಭಾಗಿಸಲಾಗುವುದು. ಉದಾ ಹರಣೆಗೆ, 2 ಪಂದ್ಯಗಳ ಸರಣಿಯಾದರೆ ಪ್ರತಿಯೊಂದು ಪಂದ್ಯಕ್ಕೆ 60 ಅಂಕ. 3 ಪಂದ್ಯಗಳ ಸರಣಿಯಾದರೆ ಪಂದ್ಯವೊಂದಕ್ಕೆ 40 ಅಂಕ. ಪಂದ್ಯ ಟೈ ಆದರೆ ಪಂದ್ಯದ ಶೇ. 50ರಷ್ಟು ಅಂಕಗಳಷ್ಟೇ ಲಭಿಸಲಿದೆ. ಡ್ರಾ ಪಂದ್ಯಕ್ಕೆ 3:1 ಅನುಪಾತದಲ್ಲಿ ಅಂಕಗಳನ್ನು ಹಂಚಲಾಗುವುದು.

Advertisement

ಸರಣಿಯಲ್ಲಿ ಗರಿಷ್ಠ 5, ಕನಿಷ್ಠ 2 ಪಂದ್ಯ ಗಳನ್ನು ಆಡಲಾಗುವುದು. ಪ್ರತಿಯೊಂದು ತಂಡ ತವರಿನಲ್ಲಿ 3, ವಿದೇಶಗಳಲ್ಲಿ 3 ಸರಣಿಯನ್ನಾಡಲಿದೆ. ಭಾರತ ತನ್ನ ಅಭಿಯಾನ ವನ್ನು ವೆಸ್ಟ್‌ ಇಂಡೀಸ್‌ ಪ್ರವಾಸದೊಂದಿಗೆ ಆರಂಭಿಸಲಿದೆ. ಇದು 2 ಪಂದ್ಯಗಳ ಟೆಸ್ಟ್‌ ಸರಣಿಯಾಗಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯಗಳೆಲ್ಲ ಹಗಲು ಹೊತ್ತಿನ ಮುಖಾಮುಖೀಗಳಾದರೂ ಮಂಡಳಿಗಳ ಪೂರ್ವ ಒಪ್ಪಂದದಂತೆ ಹಗಲು-ರಾತ್ರಿ ಪಂದ್ಯಗಳಿಗೂ ಅವಕಾಶವಿದೆ.

ಸರಣಿಗಾಗಿ ಕಾತರ: ಕೊಹ್ಲಿ
ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಸರಣಿಯನ್ನು ನಾವೆಲ್ಲ ಭಾರೀ ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.
“5 ದಿನಗಳ ಮಾದರಿಯ ಕ್ರಿಕೆಟಿಗೆ ಹೊಸ ರೂಪ ಲಭಿಸಿರುವುದು ಸ್ವಾಗತಾರ್ಹ. ಟೆಸ್ಟ್‌ ಕ್ರಿಕೆಟ್‌ ಎಂಬುದು ಬಹಳ ಸವಾಲಿನ ಪಂದ್ಯ. ಭಾರತ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಾಧನೆ ತೋರ್ಪಡಿಸುತ್ತಲೇ ಬಂದಿದೆ. ಹೀಗಾಗಿ ಚಾಂಪಿಯನ್‌ಶಿಪ್‌ ರೇಸ್‌ನಲ್ಲಿ ಭಾರತವೂ ಮುಂಚೂಣಿಯಲ್ಲಿ ಇರಲಿದೆ’ ಎಂದು ಕೊಹ್ಲಿ ಹೇಳಿದರು.

22 ವರ್ಷಗಳ ಹಿಂದಿನ ಕಲ್ಪನೆ
ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ನೂತನ ಕಲ್ಪನೆಯೇನಲ್ಲ, ಇದನ್ನು 22 ವರ್ಷಗಳಷ್ಟು ಹಿಂದಿನ ಯೋಜನೆ, ಈಗ ಸಾಕಾರಗೊಳ್ಳುತ್ತಿದೆ ಅಷ್ಟೇ. 2 ದಶಕಗಳಷ್ಟು ಹಿಂದೆ ಯುನೈಟೆಡ್‌ ಕ್ರಿಕೆಟ್‌ ಬೋರ್ಡ್‌ ಆಫ್ ಸೌತ್‌ ಆಫ್ರಿಕಾದ ಅಧ್ಯಕ್ಷ ಅಲಿ ಬಾಕರ್‌, ಪಾಕ್‌ ಕ್ರಿಕೆಟ್‌ ಮಂಡಳಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರಿಫ್ ಅಲಿ ಅಬ್ಟಾಸಿ ಮತ್ತು ವೆಸ್ಟ್‌ ಇಂಡೀಸಿನ ಮಾಜಿ ಕ್ರಿಕೆಟಿಗ ಕ್ಲೈವ್‌ ಲಾಯ್ಡ ಈ ಬಗ್ಗೆ ಯೋಚಿಸಿದ್ದರು. ಇದಕ್ಕೆ “ಟೆಸ್ಟ್‌ ವರ್ಲ್ಡ್ ಕಪ್‌’ ಎಂದು ಹೆಸರನ್ನೂ ಇರಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ, ಮುಖ್ಯವಾಗಿ ಇದು ಸುದೀರ್ಘ‌ ಅವಧಿಗೆ ವಿಸ್ತರಿಸಲ್ಪಡುವುಂದರಿಂದ ಸಾಕಾರಗೊಳ್ಳಲಿಲ್ಲ.

ರ್‍ಯಾಂಕಿಂಗ್‌
ವಿಧಾನ ಹೇಗೆ?
ಈ ಪಂದ್ಯಾವಳಿಯಿಂದ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ಪದ್ಧತಿಯೇನೂ ಬದಲಾಗದು. ಪ್ರತೀ ಸರಣಿ ಮುಗಿದ ಬಳಿಕ ಇದು ಎಂದಿನ ರೀತಿಯಲ್ಲೇ ಪರಿಷ್ಕೃತಗೊಳ್ಳಲಿದೆ.

ಜೆರ್ಸಿ ಮೇಲೆ ಹೆಸರು, ನಂಬರ್‌
ಟೆಸ್ಟ್‌ ಚಾಂಪಿಯನ್‌ಶಿಪ್‌ ಮೂಲಕ ಮೊದಲ ಬಾರಿಗೆ ಕ್ರಿಕೆಟಿಗರ ಜೆರ್ಸಿ ಮೇಲೆ ಆಟಗಾರನ ಹೆಸರು ಮತ್ತು ನಂಬರ್‌ ಕಾಣಿಸಿಕೊಳ್ಳಲಿದೆ. 1992ರ ಬಳಿಕ ಕೇವಲ ಸೀಮಿತ ಓವರ್‌ ಪಂದ್ಯಗಳಲ್ಲಷ್ಟೇ ಈ ಪದ್ಧತಿ ಜಾರಿಯಲ್ಲಿತ್ತು. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸದ್ಯ ಬಣ್ಣದ ಉಡುಗೆಯ ಪ್ರಸ್ತಾವ ಇಲ್ಲ. ಬಿಳಿ ಜೆರ್ಸಿಯ ಹಿಂಭಾಗದಲ್ಲಿ ಆಟಗಾರರ ಹೆಸರು ಮತ್ತು ನಂಬರ್‌ ಗೋಚರಿ ಸುತ್ತದೆ. ಕೆಲವು ತಂಡಗಳು ನೂತನ ಮಾದರಿಯ ಜೆರ್ಸಿಯನ್ನು ಈಗಾಗಲೇ ಬಿಡುಗಡೆಗೊಳಿಸಿವೆ. ಈ ಸಂಪ್ರದಾಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಮುಗಿದ ಬಳಿಕವೂ ಮುಂದು ವರಿಯಲಿದೆಯೇ ಎಂಬುದೊಂದು ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next