ಹೊಸದಿಲ್ಲಿ : ಮುಂಬರುವ ಐಸಿಸಿ ವಿಶ್ವ ಕ್ರಿಕೆಟ್ ಕಪ್ ಗೆಲ್ಲುವ ಪೂರ್ತಿ ವಿಶ್ವಾಸ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ಅವರಲ್ಲಿದೆ. ಭಾರತ ಗೆಲ್ಲುವ ವಿಶ್ವ ಕಪ್ ಅನ್ನು ಎಂಟೆದೆಯ ಭಾರತೀಯ ಸೈನಿಕರಿಗೆ ಮುಡಿಪಿಡಲಾಗುವುದು ಎಂದು ಕೊಹ್ಲಿ ಹೇಳಿದ್ದಾರೆ.
ಈ ಬಾರಿಯ ವಿಶ್ವ ಕಪ್ ಕ್ರಿಕೆಟ್ ನಡೆಯುವ ಇಂಗ್ಲಂಡ್ ಗೆ ಇಂದು ನಿರ್ಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ಸದಾ ಸಿದ್ಧರಿರುವ ಎಂಟೆದೆಯ ಭಾರತೀಯ ಸೈನಿಕರ ಧೈರ್ಯ, ಸ್ಥೈರ್ಯವನ್ನು ಕೊಂಡಾಡಿದರು.
ಇಂಗ್ಲಂಡ್‌ನಲ್ಲಿ ಇದೇ ಮೇ 30ರಿಂದ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
“ಭಾರತದ ಹೆಮ್ಮೆಯ ಸೈನಿಕರಿಗಾಗಿ ನಾವು ಈ ಬಾರಿಯ ವಿಶ್ವ ಕ್ರಿಕೆಟ್ ಕಪ್ ಗೆಲ್ಲುವೆವು; ಈ ಸಾಧನೆ ಮಾಡಲು ನಮಗೆ ಹಲವೆಡೆಗಳಿಂದ ಸ್ಫೂರ್ತಿ ದೊರಕಬಹುದು; ಆದರೆ ಭಾರತೀಯ ಸೈನಿಕರಿಂದ ನಮಗೆ ದೊರಕುವುದಕ್ಕಿಂತ ದೊಡ್ಡ ಸ್ಫೂರ್ತಿ ಬೇರೆಲ್ಲಿಂದಲೂ ಸಿಗದು”
”ಕ್ರೀಡೆಯಲ್ಲಿನ ನಮ್ಮ ಪಾತ್ರವನ್ನು ನಾವೆಂದೂ ಸೇನೆಯೊಂದಿಗೆ ಹೋಲಿಸಲಾರೆವು; ಆದರೆ ನಾವೇನಾದರೂ ಮಾಡಬೇಕೆಂಬ ಛಲದಲ್ಲಿ ಹೊರಟಾಗ ನಮಗೆ ನಮ್ಮ ಸೈನಿಕರಿಂದ ಅಪಾರವಾದ ಪ್ರೇರಣೆ, ಸ್ಫೂರ್ತಿ ದೊರಕುತ್ತದೆ; ಈ ಬಾರಿಯ ವಿಶ್ವ ಕ್ರಿಕೆಟ್ ಕಪ್ ಅನ್ನು ನಾವು ಜಯಿಸುತ್ತೇವೆ ಮತ್ತು ಅದನ್ನು ಸೇನೆಗೆ ಮುಡಿಪಾಗಿಡುತ್ತೇವೆ” ಎಂದು ಕಪ್ತಾನ ಕೊಹ್ಲಿ ಉತ್ಸಾಹಭರಿತರಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀ ಅವರು ಭಾರತ ಮೂರನೇ ಬಾರಿಗೆ ಈ ಸಲ 50 ಓವರ್‌ಗಳ ನಿಗದಿತ ಪಂದ್ಯಾವಳಿಯ ವಿಶ್ವ ಕ್ರಿಕೆಟ್ ಕಪ್ ಗೆಲ್ಲುವುದೆಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಈ ಬಾರಿಯ ಟೂರ್ನಿಯಲ್ಲಿ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಶಾಸ್ತ್ರೀ ಹೇಳಿದರು.