ಲಂಡನ್: ದ್ವಿತೀಯ “ಟೆಸ್ಟ್ ವಿಶ್ವಕಪ್” ಫೈನಲ್‌ನಲ್ಲಿ ಆಸ್ಟ್ರೇಲಿಯ ಬೃಹತ್ ಮೊತ್ತದ ಸೂಚನೆ ನೀಡಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಟ್ರ್ಯಾವಿಸ್ ಹೆಡ್ ಬಾರಿಸಿದ ಅಮೋಘ ಶತಕ ಹಾಗೂ ಹೆಡ್-ಸ್ಮಿತ್ ಜೋಡಿಯ ದ್ವಿಶತಕದ ಜತೆಯಾಟದ ನೆರವಿನಿಂದ 3 ವಿಕೆಟಿಗೆ 327 ರನ್ ಬಾರಿಸಿ ಮೊದಲ ದಿನದಾಟ ಮುಗಿಸಿದೆ. ಹೆಡ್ 146 ರನ್ (156 ಎಸೆತ, 22 ಬೌಂಡರಿ, 1 ಸಿಕ್ಸರ್) ಮತ್ತು ಸ್ಮಿತ್ 95 ರನ್(227 ಎಸೆತ, 14 ಬೌಂಡರಿ) ಮಾಡಿ ಆಡುತ್ತಿದ್ದರು. ಈ ಜೋಡಿಯಿಂದ 4ನೇ ವಿಕೆಟಿಗೆ 370 ಎಸೆತಗಳಿಂದ 251 ರನ್ ಹರಿದು ಬಂದಿದೆ. ಮೊದಲ ಅವಧಿಯಲ್ಲಷ್ಟೇ ಭಾರತದ ಬೌಲಿಂಗ್ ಪರಿಣಾಮಕಾರಿಯಾಗಿತ್ತು.
73ಕ್ಕೆ 3 ವಿಕೆಟ್ ಉಡಾಯಿಸಿದ ಬಳಿಕ ಭಾರತಕ್ಕೆ ಯಾವ ಯಶಸ್ಸೂ ಸಿಗಲಿಲ್ಲ. ಹೆಡ್-ಸ್ಮಿತ್ ಸೇರಿಕೊಂಡು ಟೀಮ್ ಇಂಡಿಯಾ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತ ಹೋದರು.
ಅದೃಷ್ಟದ ಟಾಸ್ ಏನೋ ಭಾರತಕ್ಕೆ ಒಲಿಯಿತು. ನಿರೀಕ್ಷೆಯಂತೆ ರೋಹಿತ್ ಶರ್ಮ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಈ ನಿರ್ಧಾರ ಆರಂಭದಲ್ಲಿ ಯಶಸ್ವಿಯಾಯಿತು.
ಮೊಹಮ್ಮದ್ ಶಮಿ ಮೇಡನ್ ಓವರ್ ಮೂಲಕ ಬೌಲಿಂಗ್ ಆಕ್ರಮಣಕ್ಕೆ ಚಾಲನೆ ನೀಡಿದರು. ಮೊಹಮ್ಮದ್ ಸಿರಾಜ್ ಆಘಾತಕಾರಿ ಸ್ಪೆಲ್ ನಡೆಸಿ ದೊಡ್ಡ ಬೇಟೆಯಾಡಿದರು. ಪಂದ್ಯದ 4ನೇ ಓವರ್‌ನಲ್ಲೇ ಅವರು ಅಪಾಯಕಾರಿ ಉಸ್ಮಾನ್ ಖ್ವಾಜಾ ಅವರ ವಿಕೆಟ್ ಉಡಾಯಿಸಿದರು. ಬ್ಯಾಟಿಗೆ ಸವರಿದ ಚೆಂಡು ಕೀಪರ್ ಶ್ರೀಕರ್ ಭರತ್ ಕೈಸೇರಿತು. 10 ಎಸೆತ ಎದುರಿಸಿದ ಖ್ವಾಜಾ ರನ್ ಖಾತೆಯನ್ನೇ ತೆರೆದಿರಲಿಲ್ಲ. ಇಂಗ್ಲೆಂಡ್ ನೆಲದಲ್ಲಿ ಅವರ ವೈಫಲ್ಯ ಮತ್ತೆ ಮುಂದುವರಿಯಿತು.
ದ್ವಿತೀಯ ವಿಕೆಟಿಗೆ ಜತೆಗೂಡಿದ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಬುಶೇನ್ ಭಾರತದ ಬೌಲಿಂಗ್ ದಾಳಿಯನ್ನು ಎಚ್ಚರಿಕೆಯಿಂದಲೇ ಎದುರಿಸಿದರು. ಆಸ್ಟ್ರೇಲಿಯದ ಇನ್ನಿಂಗ್ಸ್ ಬೆಳೆಯತೊಡಗಿತು. ಫಾರ್ಮ್ನಲ್ಲಿಲ್ಲದ ವಾರ್ನರ್ ದೊಡ್ಡ ಹೊಡೆತಗಳಿಗೆ ಮುಂದಾದರು. ಮೊದಲ ಅವಧಿಯ ಆಟವನ್ನು ಇವರು ನಿಭಾಯಿಸಿ ನಿಲ್ಲುವ ಸೂಚನೆ ಸಿಕ್ಕಿತು. ಇನ್ನೇನು ಲಂಚ್ ಸಮೀಪಿಸಿತು ಎನ್ನುವಾಗಲೇ ಶಾರ್ದೂಲ್ ಠಾಕೂರ್ ದೊಡ್ಡದೊಂದು ಬ್ರೇಕ್‌ತ್ರೂ ಒದಗಿಸಿದರು. ಎಡಗೈ ಆರಂಭಕಾರ ವಾರ್ನರ್ ವಿಕೆಟ್ ಬಿತ್ತು. ಮತ್ತೆ ಕೀಪರ್ ಭರತ್ ಕ್ಯಾಚ್ ಪಡೆದಿದ್ದರು. ಆರ್. ಅಶ್ವಿನ್ ಜತೆಗಿನ ಆಯ್ಕೆ ರೇಸ್‌ನಲ್ಲಿ ಶಾರ್ದೂಲ್ ಮೇಲುಗೈ ಸಾಧಿಸಿ ಆಡುವ ಬಳಗವನ್ನು ಸೇರಿಕೊಂಡಿದ್ದರು.
60 ಎಸೆತ ನಿಭಾಯಿಸಿದ ವಾರ್ನರ್ 8 ಬೌಂಡರಿ ನೆರವಿನಿಂದ 43 ರನ್ ಹೊಡೆದರು. ದ್ವಿತೀಯ ವಿಕೆಟಿಗೆ 69 ರನ್ ಒಟ್ಟುಗೂಡಿತು. ಲಂಚ್ ವೇಳೆ ಆಸ್ಟ್ರೇಲಿಯ 2 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿತ್ತು.
ಲಂಚ್ ಕಳೆದ ಬಳಿಕ ತಮ್ಮ ಮೊದಲ ಎಸೆತದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ಬಲವಾದ ಆಘಾತವಿಕ್ಕಿದರು. ಲಬುಶೇನ್ ಕ್ಲೀನ್‌ಬೌಲ್ಡ್ ಆಗಿದ್ದರು. 62 ಎಸೆತ ಎದುರಿಸಿದ ಲಬುಶೇನ್ ಗಳಿಕೆ 26 ರನ್ (3 ಬೌಂಡರಿ). ಆದರೆ 4ನೇ ವಿಕೆಟಿಗೆ ಜತೆಗೂಡಿದ ಸ್ಟೀವನ್ ಸ್ಮಿತ್ ಮತ್ತು ಟ್ರ್ಯಾವಿಸ್ ಹೆಡ್ ಭಾರತದ ಬೌಲಿಂಗ್ ಆಕ್ರಮಣವನ್ನು ಸಮರ್ಥವಾಗಿ ಎದುರಿಸಿ ನಿಂತರು. ಟೀ ಬ್ರೇಕ್ ತನಕ ತಂಡಕ್ಕೆ
ಯಾವುದೇ ಹಾನಿಯಾಗದಂತೆ ನೋಡಿ ಕೊಂಡರು. ಸ್ಕೋರ್ 170ಕ್ಕೆ ಏರಿತ್ತು. ಈ ಅವಧಿಯ 28 ಓವರ್‌ಗಳಲ್ಲಿ ಒಂದು ವಿಕೆಟಿಗೆ 97 ರನ್ ಒಟ್ಟುಗೂಡಿತು.
ಇವರಲ್ಲಿ ಸ್ಮಿತ್ ಟೆಸ್ಟ್ ಶೈಲಿಯಲ್ಲೇ ಬ್ಯಾಟಿಂಗ್ ನಡೆಸಿದರೆ, ಹೆಡ್ ಒನ್‌ಡೇ ಮೂಡ್‌ನಲ್ಲಿದ್ದರು. ಕೇವಲ 60 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. 106 ಎಸೆತಗಳಲ್ಲಿ ಸೆಂಚುರಿ ಪೂರ್ತಿಗೊಂಡಿತು. ಇದು ಅವರ 6ನೇ ಟೆಸ್ಟ್ ಶತಕ. ಭಾರತದೆದುರು ಹಾಗೂ ತವರಿನಾಚೆ ಮೊದಲನೆಯದು.