ಮುಂಬೈ: 12 ವರ್ಷಗಳ ಬಳಿಕ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲುವ ಸನಿಹಕ್ಕೆ ಬಂದಿದೆ. 2011ರಲ್ಲಿ ತವರಿನಲ್ಲಿ ವಿಶ್ವಕಪ್ ಗೆದ್ದು ಹಿಡಿದಿದ್ದ ಭಾರತ ತಂಡವು ಇದೀಗ ಮತ್ತೆ ತವರಿನ ಅಭಿಮಾನಿಗಳ ಎದುರಿನಲ್ಲಿ ಕ್ರಿಕೆಟ್ ನ ಅತ್ಯುನ್ನತ ಟ್ರೋಫಿಯನ್ನು ಎತ್ತಿ ಹಿಡಿಯಲು ಕಾತರದಿಂದಿದೆ.
ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಪ್ ಗಾಗಿ ಸೆಣಸಾಡಲಿದೆ. ಇತ್ತ ಕೋಟ್ಯಾಂತರ ಭಾರತೀಯ ಅಭಿಮಾನಿಗಳು ಟೀಂ ಇಂಡಿಯಾದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಹಲವು ಕಡೆ ಪೂಜೆಗಳು, ಹೋಮಗಳು, ನಮಾಜ್ ಗಳನ್ನು ಮಾಡಿ ಅಭಿಮಾನಿಗಳು ತಂಡದ ಗೆಲುವಿಗೆ ಹಾರೈಸುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಅಮ್ರೋಹಾ ಗ್ರಾಮದಲ್ಲಿ ಜನರು ದುವಾ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಪುಣೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜನರು ವಿಶೇಷ ಆರತಿ ಮಾಡಿ ಟೀಂ ಇಂಡಿಯಾ ಗೆಲುವಿಗೆ ಹಾರೈಕೆ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ವಾರಣಾಸಿಯ ಸಿಂಧಿಯಾ ಘಾಟ್‌ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಲಾಯಿತು. ತ್ರಿವರ್ಣ ಮತ್ತು ಟೀಂ ಇಂಡಿಯಾದ ಫೋಟೋಗಳನ್ನು ಹಿಡಿದ ಜನರು ಘಾಟ್‌ನಲ್ಲಿ ಆರತಿ ಮಾಡಿದರು.
ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲ್ ದೇವಸ್ಥಾನದಲ್ಲಿ ಅರ್ಚಕರು ಭಾರತದ ವಿಜಯಕ್ಕಾಗಿ ಭಸ್ಮ ಆರತಿ ಮಾಡಿದರು. “ಇಂದು ನಾವು ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಭಾರತವು ಕ್ರೀಡಾ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವಗುರುವಾಗಬೇಕೆಂದು ನಾವು ಬಯಸುತ್ತೇವೆ. ಇಂದು ಫೈನಲ್ ಪಂದ್ಯವನ್ನು ಭಾರತ ಗೆಲ್ಲುತ್ತದೆ ಎಂದು ನಾವು ಭಾವಿಸುತ್ತೇವೆ…” ಎಂದು ಮಹೇಶ್ ಶರ್ಮಾ ಹೇಳಿದರು.