Advertisement

World Cup Final: ಹಾರಲಿ ಭಾರತದ ವಿಜಯ ಪತಾಕೆ; ಅಹಮದಾಬಾದ್ ನಲ್ಲಿ ಟಾಸ್ ಗೆದ್ದ ಆಸೀಸ್

01:32 PM Nov 19, 2023 | Team Udayavani |

ಅಹಮದಾಬಾದ್: ಹಾರಲಿ ಭಾರತದ ವಿಜಯ ಪತಾಕೆ.. ಮೊಳಗಲಿ ಗೆಲುವಿನ ದುಂಧುಭಿ.. ಮೇಳೈಸಲಿ ಭಾರತದ ಜಯಘೋಷ.. ಬಾನೆತ್ತರಕೆ ಹಾರಲಿ ತ್ರಿವರ್ಣ.. ಇದು ಕೋಟ್ಯಾಂತರ ಭಾರತೀಯರ ಮನದಾಳ ಭಾವ.

Advertisement

ಹೌದು, ಹತ್ತು ತಂಡಗಳು, 48 ಪಂದ್ಯಗಳು, 45 ದಿನಗಳು, ರನ್ ರಾಶಿ ಪೇರಿಸಿದ ಬ್ಯಾಟರ್ ಗಳು, ವಿಕೆಟ್ ಗಳನ್ನು ತರಗೆಲೆಗಳಂತೆ ಉಡಾಯಿಸಿದ ಬೌಲರ್ ಗಳು, ಅತ್ಯಂತ ರೋಮಾಂಚಕ ಪಂದ್ಯಗಳಿಗೆ ಸಾಕ್ಷಿಯಾದ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಕೂಟದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದ, ಅಗ್ರ ಶ್ರೇಯಾಂಕಿತ ಭಾರತ ತಂಡ ಮತ್ತು ಸತತ ಎಂಟು ಪಂದ್ಯಗಳನ್ನು ಗೆದ್ದ, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಫೈನಲ್ ಪಂದ್ಯದಲ್ಲಿ ಸೆಣಸಾಡುತ್ತಿವೆ.

ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ಎದುರು ಈ ಫೈನಲ್ ಪಂದ್ಯ ನಡೆಯುತ್ತಿದೆ. ಅಂತಿಮ ಮುಖಾಮುಖಿಯಲ್ಲಿ ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

ಭಾರತ ತಂಡವು ಫೈನಲ್ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ. ಸೆಮಿ ಫೈನಲ್ ನಲ್ಲಿ ಆಡಿದ ತಂಡವೇ ಇಂದು ಆಡುತ್ತಿದೆ.

ಎರಡೂ ತಂಡಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆ. ರೋಹಿತ್‌ ಪಡೆಯ 11 ಆಟಗಾರರ ಮೇಲೆ 140 ಕೋಟಿ ಭಾರತೀಯರ ಹರಕೆ, ಹಾರೈಕೆ ಇದೆ. ಭಾರತದ 2ನೇ ಕಪ್‌ ಗೆಲುವಿಗೆ 20 ವರ್ಷಗಳ ಹಿಂದೆ “ವಾಂಡರರ್ ಸ್ಟೇಡಿಯಂ’ನಲ್ಲಿ ಅಡ್ಡಗಾಲಿಕ್ಕಿದ ಆಸ್ಟ್ರೇಲಿಯವನ್ನು ಈ ಬಾರಿ ಮಣಿಸಲೇಬೇಕು ಎಂಬ ಹಕ್ಕೊತ್ತಾಯವೂ ಇದೆ. ಟಿ20 ಲೀಗ್‌ಗಳಿಂದ ಏಕದಿನ ಕ್ರಿಕೆಟ್‌ ಕೂಡ ಚಾರ್ಮ್ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಭಾರತದ ಗೆಲುವು ಖಂಡಿತವಾಗಿಯೂ ಜಾಗತಿಕ ಕ್ರಿಕೆಟ್‌ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂಬುದು ಸಾರ್ವತ್ರಿಕ ಅನಿಸಿಕೆ. ಈ ಕಾರಣಕ್ಕಾಗಿಯೂ ಟೀಮ್‌ ಇಂಡಿಯಾ ವಿಶ್ವಕಪ್‌ ಗೆಲ್ಲಬೇಕು ಮತ್ತು ಖಂಡಿತ ಗೆಲ್ಲಲಿದೆ; ಟ್ರೋಫಿಯ ಮೇಲೆ ಭಾರತದ ಹೆಸರೇ ಬರೆಯಲ್ಪಟ್ಟಿದೆ ಎಂಬುದು ಎಲ್ಲರ ದೃಢ ಅಭಿಪ್ರಾಯ.

Advertisement

ಲೀಗ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸುವ ಮೂಲಕವೇ ತನ್ನ ಅಭಿಯಾನ ಆರಂಭಿಸಿರುವ ಭಾರತ, ಫೈನಲ್‌ನಲ್ಲಿ ಆಸೀಸ್‌ಗೆ ಇನ್ನೊಂದು ಆಘಾತ ನೀಡಿದರೆ ಅದೊಂದು ಪರಿಪೂರ್ಣ ಆವೃತ್ತವಾಗಲಿದೆ. ಚೆನ್ನೈ ಚೇಸಿಂಗ್‌ ವೇಳೆ 2 ರನ್ನಿಗೆ 3 ವಿಕೆಟ್‌ ಕಳೆದುಕೊಂಡೂ ಗೆದ್ದು ಬಂದದ್ದಿದೆಯಲ್ಲ, ಈ ಸ್ಫೂರ್ತಿಯೇ ಭಾರತವನ್ನು ಪ್ರಶಸ್ತಿ ಸುತ್ತಿನ ತನಕ ಕರೆದು ತಂದಿರುವುದು!

ಆಸ್ಟ್ರೇಲಿಯದ್ದು ಪ್ರತ್ಯೇಕ ಸಿದ್ಧಾಂತ. ಇವರನ್ನು ಸೆಮಿಫೈನಲ್‌ನಲ್ಲೇ ಹೊಡೆದುರುಳಿಸಿದರೋ ಬಚಾವ್‌, ಫೈನಲ್‌ಗೆ ಲಗ್ಗೆ ಹಾಕಿದರೆ ಯಾರನ್ನೂ ಬಿಡುವುದಿಲ್ಲ ಎಂಬುದಕ್ಕೆ ನಿದರ್ಶನಗಳು ಹಲವು. ದೊಡ್ಡ ಕೂಟಗಳಲ್ಲಿ ಗೆಲ್ಲುವ ಕಲೆ ಇವರಿಗೆ ಕರಗತ. ಆದರೆ ನೆನಪಿರಲಿ, ಈ ಬಾರಿ ಕಾಂಗರೂ ಸವಾಲು ಖಂಡಿತ ಸುಲಭದ್ದಲ್ಲ.

ಫೈನಲ್ ಪಂದ್ಯದ ತಂಡಗಳು

ಭಾರತ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿ.ಕೀ), ಪ್ಯಾಟ್ ಕಮಿನ್ಸ್ (ನಾ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

Advertisement

Udayavani is now on Telegram. Click here to join our channel and stay updated with the latest news.

Next