ನವದೆಹಲಿ: ಏಕದಿನ ವಿಶ್ವಕಪ್ ನ ಇಂಡೋ – ಪಾಕ್ ಮುಖಾಮುಖಿಗೆ ವೇದಿಕೆ ಹಾಗೂ ಡೇಟ್ ಫಿಕ್ಸ್ ಆಗಿದೆ. ಎರಡೂ ತಂಡಗಳ ಕ್ರಿಕೆಟ್ ಸಮರವನ್ನು ನೋಡಲು ಲಕ್ಷಾಂತರ ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಅಂದುಕೊಂಡ ದಿನಾಂಕಕ್ಕಿಂತ ಪಂದ್ಯ ಬೇರೊಂದು ದಿನ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಐಸಿಸಿ ಈಗಾಗಲೇ ಏಕದಿನ ವಿಶ್ವಕಪ್ ನ ಎಲ್ಲಾ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಖಾಮುಖಿ ಅಕ್ಟೋಬರ್ 15 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂಡೋ – ಪಾಕ್ ಮುಖಾಮುಖಿಯನ್ನು ನೋಡಲು ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ಅಹಮದಾಬಾದ್ ಮೈದಾನದ ಅಕ್ಕಪಕ್ಕದ ಹೊಟೇಲ್ ರೂಮ್ ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿರುವ ಬೆನ್ನಲ್ಲೇ ಇದೀಗ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಯಿದೆ ಎನ್ನುವ ವರದಿಯೊಂದಿ ಬಂದಿದೆ.
ಅಕ್ಟೋಬರ್ 15 ರಂದು ನವರಾತ್ರಿ ಹಬ್ಬದ ಮೊದಲ ದಿನ. ಗುಜರಾತ್ ನಲ್ಲಿ ದಾಂಡಿಯಾ ನೈಟ್ಸ್ ಸೇರಿದಂತೆ ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸಾವಿರಾರು ಮಂದಿ ಒಂದೇ ಸ್ಥಳದಲ್ಲಿ ಸೇರಿ ಹಬ್ಬವನ್ನು ಆಚರಿಸುತ್ತಾರೆ. ಭದ್ರತೆಯ ಕಾರಣದಿಂದ ಪಂದ್ಯದ ದಿನಾಂಕವನ್ನು ಬದಲಾಯಿಸುವಂತೆ ಬಿಸಿಸಿಐಗೆ ಭದ್ರತಾ ಸಂಸ್ಥೆಗಳು ಸೂಚನೆ ನೀಡಿವೆ ಎಂದು ವರದಿ ತಿಳಿಸಿದೆ.
ಸದ್ಯ ಈ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದ್ದು, ಭದ್ರತೆಯ ದೃಷ್ಟಿಯಿಂದ ಪಂದ್ಯದ ದಿನಾಂಕವನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಭಾರತ ಅತಿಥ್ಯ ವಹಿಸಿರುವ ಈ ಬಾರಿಯ ಏಕದಿನ ವಿಶ್ವಕಪ್ ನಲ್ಲಿ, ಸುಮಾರು 1 ಲಕ್ಷ ಸಾಮರ್ಥ್ಯವಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ – ಇಂಗ್ಲೆಂಡ್, ಭಾರತ – ಪಾಕಿಸ್ತಾನ, ಇಂಗ್ಲೆಂಡ್ -ಆಸ್ಟ್ರೇಲಿಯಾ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.
ವಿಶ್ವಕಪ್ ಪಂದ್ಯಾವಳಿಗಳು 10 ನಗರದಲ್ಲಿ ನಡೆಯಲಿದೆ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಸೆಮಿಫೈನಲ್‌ಗಳನ್ನು ನಿಗದಿಪಡಿಸಲಾಗಿದೆ.