ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಕೂಟವು ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ರವಿವಾರ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಅಗ್ರ ಶ್ರೇಯಾಂಕಿತ ಭಾರತ ಮತ್ತು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಫೈನಲ್ ನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಫೈನಲ್ ಪಂದ್ಯದ ಮ್ಯಾಚ್ ಅಫೀಶಿಯಲ್ ಗಳನ್ನು ಆಯ್ಕೆ ಮಾಡಿದೆ. ಫೈನಲ್ ಹಣಾಹಣಿಯಲ್ಲಿ ಆನ್ ಫೀಲ್ಡ್ ಅಂಪೈರ್ ಗಳಾಗಿ ರಿಚರ್ಡ್ ಇಲ್ಲಿಂಗ್ ವರ್ತ್ ಮತ್ತು ರಿಚರ್ಡ್ ಕೆಟಲ್ ಬರೋ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಇವರಿಬ್ಬರೂ ಇಂಗ್ಲೆಂಡ್ ನವರು ಎಂದು ಗಮನಿಸಬಹುದಾದ ವಿಚಾರ.
ಇಲ್ಲಿಂಗ್ ವರ್ತ್ ಅವರು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿ ಫೈನಲ್ ಪಂದ್ಯದಲ್ಲಿ ಅಂಪೈರ್ ಆಗಿದ್ದರೆ ಕೆಟಲ್ ಬರೋ ಅವರು ದಕ್ಷಿಣ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ್ದರು.
ಫೈನಲ್ ಪಂದ್ಯಾವಳಿಗೆ ವೆಸ್ಟ್ ಇಂಡೀಸ್ ನ ಜೋಯೆಲ್ ವಿಲ್ಸನ್ ಮತ್ತು ನ್ಯೂಜಿಲ್ಯಾಂಡ್ ನ ಕ್ರಿಸ್ಟೋಫರ್ ಗ್ಯಾಫ್ನಿ ಅವರು ಮೂರನೇ ಮತ್ತು ನಾಲ್ಕನೇ ಅಂಪೈರ್ ಗಳಾಗಿ ಕೆಲಸ ನಿರ್ವಹಿಸಲಿದ್ದಾರೆ. ಜಿಂಬಾಬ್ವಯ ಆ್ಯಂಡ್ರ್ಯೂ ಪೈಕ್ರಾಫ್ಟ್ ಅವರು ಮ್ಯಾಚ್ ರೆಫ್ರಿ ಗಲಿದ್ದಾರೆ.
2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ಆಗಿದ್ದ ಕುಮಾರ ಧರ್ಮಸೇನಾ ಅವರಿಗೆ ಈ ಬಾರಿ ಸೆಮಿ ಫೈನಲ್ ಅಥವಾ ಫೈನಲ್ ನಲ್ಲಿ ಅವಕಾಶ ಸಿಕ್ಕಿಲ್ಲ.