ಲಕ್ನೋ: ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ 10 ತಂಡಗಳಲ್ಲಿ 7 ತಂಡಗಳು ಗೆಲುವಿನ ಖಾತೆ ತೆರೆದಿವೆ. 3 ತಂಡಗಳು ಇನ್ನೂ ಜಯದ ಮುಖವನ್ನು ಕಾಣದೆ “ಬಾಟಮ್ ಹಾಫ್’ನಲ್ಲಿವೆ. ಇವುಗಳಲ್ಲಿ ಮಾಜಿ ಚಾಂಪಿಯನ್‌ಗಳಾದ ಆಸ್ಟ್ರೇಲಿಯ ಮತ್ತು ಶ್ರೀಲಂಕಾ ಕೂಡ ಸೇರಿರುವುದು ಅಚ್ಚರಿ ಹಾಗೂ ಆಘಾತ ಮೂಡಿಸುವ ಸಂಗತಿ. ಈ ಎರಡೂ ತಂಡಗಳು ಸೋಮವಾರ ಲಕ್ನೋ ಅಂಗಳದಲ್ಲಿ ಮುಖಾಮುಖೀ ಆಗಲಿವೆ. ಲಕ್ ಯಾರಿಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ.
ಈ ಎರಡರಲ್ಲಿ ಒಂದು ತಂಡ ಗೆಲು ವಿನ ಖಾತೆ ತೆರೆಯಲೇ ಬೇಕಿದೆ. ಹಾಗೆಯೇ ಒಂದು ತಂಡದ ಸೋಲಿನ ಸರಪಳಿ ಇನ್ನಷ್ಟು ಬೆಳೆಯ ಲಿದೆ. ಈ ತಂಡಕ್ಕೆ ಮುನ್ನಡೆಯ ಹಾದಿ ದುರ್ಗಮಗೊಳ್ಳುವುದು ಖಂಡಿತ.
ವಿಶ್ವಕಪ್ ಇತಿಹಾಸವನ್ನು ಉಲ್ಲೇಖೀಸುವುದಾದರೆ ಲಂಕೆಯ ವಿರುದ್ಧ ಆಸ್ಟ್ರೇಲಿಯ ಭರ್ಜರಿ ಮೇಲುಗೈ ಸಾಧಿಸಿದೆ. 11ರಲ್ಲಿ 8 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯವನ್ನು ಬಿಟ್ಟುಕೊಟ್ಟಿದೆ. ಶ್ರೀಲಂಕಾ ಎರಡನ್ನಷ್ಟೇ ಗೆದ್ದಿದೆ. ಇದರಲ್ಲೊಂದು ಗೆಲುವು 1996ರ ಫೈನಲ್‌ನಲ್ಲಿ ಒಲಿದಿತ್ತು ಎಂಬುದನ್ನು ಮರೆಯುವಂತಿಲ್ಲ. ರವಿವಾರ ಸಂಜೆ ಲಂಕಾ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಕೇಳಿಬಂದಿದೆ. ನಾಯಕ ದಸುನ್ ಶಣಕ ಗಾಯಾಳಾಗಿ ಕೂಟದಿಂದಲೇ ಹೊರಬಿದ್ದಿದ್ದಾರೆ.
ಛಾತಿಗೆ ವಿರುದ್ಧವಾದ ಆಟ: 5 ಬಾರಿಯ ಚಾಂಪಿಯನ್ ಎಂಬ ಖ್ಯಾತಿಯ ಆಸ್ಟ್ರೇಲಿಯ ಈ ಛಾತಿಗೆ ತಕ್ಕ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯ ವಾಗಿ ನಾಯಕತ್ವದಲ್ಲೇ ತಂಡದ ವೈಫಲ್ಯ ಅಡಗಿದೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು. ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯದ ಹಿಂದಿನ ನಾಯಕರಿಗೆ ಯಾವ ವಿಧದಲ್ಲೂ ಸಾಟಿಯಾಗುತ್ತಿಲ್ಲ ಎಂಬ ಅಪವಾದ ಹೊತ್ತಿದ್ದಾರೆ. ಅಲನ್ ಬೋರ್ಡರ್, ಸ್ಟೀವ್ ವೋ, ರಿಕಿ ಪಾಂಟಿಂಗ್, ಮೈಕಲ್ ಕ್ಲಾರ್ಕ್ ಅವರೆಲ್ಲ ಆಸ್ಟ್ರೇಲಿಯವನ್ನು ವಿಶ್ವ ಪಟ್ಟಕ್ಕೇರಿದ ಯಶಸ್ವಿ ನಾಯಕರು. ಕಮಿನ್ಸ್ ಇವರ ಮಟ್ಟದಲ್ಲಿಲ್ಲ ಎಂಬುದು ಸ್ವತಃ ಆಸ್ಟ್ರೇಲಿಯಕ್ಕೆ ಅರಿವಾಗತೊಡಗಿದೆ.
ಮೇಲ್ನೋಟಕ್ಕೆ ಆಸ್ಟ್ರೇಲಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡಲ್ಲೂ ಬಲಿಷ್ಠವಾಗಿ ಗೋಚರಿಸುವ ತಂಡ. ವಾರ್ನರ್, ಲಬುಶೇನ್, ಸ್ಮಿತ್, ಮಾರ್ಷ್, ಗ್ರೀನ್, ಹೆಡ್, ಸ್ಟಾರ್ಕ್, ಮ್ಯಾಕ್ಸ್‌ವೆಲ್, ಸ್ಟೋಯಿನಿಸ್, ಹೇಝಲ್‌ವುಡ್, ಝಂಪ… ಹೀಗ ಪಟ್ಟಿ ಬೆಳೆಯುತ್ತದೆ. ಆದರೆ ಸಾಧನೆಯ ವಿಷಯಕ್ಕೆ ಬಂದಾಗ ಎಲ್ಲವೂ ತಲೆಕೆಳಗೆ. ಭಾರತದ ವಿರುದ್ಧ ಆರಂಭಿಕ ಪಂದ್ಯವನ್ನು ಆಡಿದ ಆಸ್ಟ್ರೇಲಿಯ, ಎಲ್ಲ ವಿಭಾಗಗಳಲ್ಲೂ ಹಿನ್ನಡೆ ಕಂಡಿತ್ತು. ಭಾರತದ 3 ವಿಕೆಟ್‌ಗಳನ್ನು 2 ರನ್ನಿಗೆ ಉಡಾಯಿಸಿಯೂ ಹಿಡಿತ ಸಾಧಿಸಲು ವಿಫಲವಾಗಿತ್ತು.
ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧವೂ ಇದೇ ಕಳಪೆ ಆಟ ಪುನರಾವರ್ತನೆಗೊಂಡಿತು. ಹರಿಣಗಳ ಪಡೆಗೆ 311 ರನ್ ಬಿಟ್ಟುಕೊಟ್ಟಿತು, ಚೇಸಿಂಗ್ ವೇಳೆ 177ಕ್ಕೆ ಕುಸಿಯಿತು. ಅರ್ಥಾತ್, ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯ ಇನ್ನೂರರ ಗಡಿ ದಾಟುವಲ್ಲಿ ವಿಫಲವಾಗಿದೆ. ಆಸೀಸ್ ಫೀಲ್ಡಿಂಗ್ ಕೂಡ ಶೋಚನೀಯವಾಗಿತ್ತು. 2 ಪಂದ್ಯಗಳಲ್ಲಿ 6 ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದೆ. ಇದು ಚಾಂಪಿಯನ್ನರ ಆಟವಲ್ಲ!
ಆಸೀಸ್‌ಗಿಂತ ಲಂಕೆ ಓಕೆ: ಅರ್ಹತಾ ಸುತ್ತಿನಿಂದ ಬಂದ ಶ್ರೀಲಂಕಾ ಕೂಡ ಸೋಲಿನ ಸುಳಿಗೆ ಸಿಲುಕಿದೆ. ಆದರೆ ಆಸ್ಟ್ರೇಲಿಯಕ್ಕೆ ಹೋಲಿಸಿದರೆ ಲಂಕನ್ನರ ಪ್ರದರ್ಶನ ತುಸು “ಬೆಟರ್’ ಎನ್ನಲಡ್ಡಿಯಿಲ್ಲ. ಅದು ಎರಡೂ ಪಂದ್ಯಗಳಲ್ಲಿ ಮುನ್ನೂರರ ಗಡಿ ದಾಟಿದೆ. ದಕ್ಷಿಣ ಆಫ್ರಿಕಾಕ್ಕೆ 428 ರನ್ ಬಿಟ್ಟುಕೊಟ್ಟರೂ ಚೇಸಿಂಗ್ ವೇಳೆ 326 ರನ್ ಪೇರಿಸುವಲ್ಲಿ ಯಶಸ್ಸು ಕಂಡಿತ್ತು. ಪಾಕಿಸ್ಥಾನ ವಿರುದ್ಧ 344 ರನ್ ರಾಶಿ ಹಾಕಿತಾದರೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಅರ್ಥಾತ್, ಶ್ರೀಲಂಕಾದ ಬೌಲಿಂಗ್ ಎರಡೂ ಪಂದ್ಯಗಳಲ್ಲಿ ಗೋತಾ ಹೊಡೆದಿದೆ. ತೀಕ್ಷಣ, ಮದುಶಂಕ, ಪತಿರಣ, ವೆಲ್ಲಲಗೆ, ಧನಂಜಯ… ಎಲ್ಲರೂ ದುಬಾರಿಯಾಗಿ ಗೋಚರಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಮೊದಲು ಲಂಕೆಯ ಬೌಲಿಂಗ್ ವಿಭಾಗ ಕ್ಲಿಕ್ ಆಗಬೇಕು. ಬ್ಯಾಟಿಂಗ್ ವಿಭಾಗವನ್ನು ನೋಡಿಕೊಳ್ಳಲು ನಿಸ್ಸಂಕ, ಪೆರೆರ, ಮೆಂಡಿಸ್, ಸಮರವಿಕ್ರಮ ಇದ್ದಾರೆ.
ಲಂಕೆಗೂ ನಾಯಕತ್ವದ ಸಮಸ್ಯೆ ಇದೆ. ಇಲ್ಲಿಯ ತನಕ ದಸುನ್ ಶಣಕ ಲೆಕ್ಕದ ಭರ್ತಿಯ ನಾಯಕನಂತಿದ್ದರು. ಇನ್ನು ಮುಂದೆ ಕುಸಲ್ ಮೆಂಡಿಸ್ ಸರದಿ. ಇವರಿಗೆ ಅದೃಷ್ಟ ಇದೆಯೇ ಎಂಬುದು ಸೋಮವಾರದಿಂದ ಸಾಬೀತಾಗಲಿದೆ.