Advertisement
ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತವರಿನಂಗಳದಲ್ಲೇ ವಿಶ್ವಕಪ್ ಎತ್ತುವ ಮೂಲಕ ಹೊಸ ಇತಿಹಾಸ ಬರೆಯಿತು. ಫೈನಲ್ ಎದುರಾಳಿ ಶ್ರೀಲಂಕಾ. ಏಶ್ಯದ ತಂಡಗಳೆರಡು ವಿಶ್ವಕಪ್ ಫೈನಲ್‌ನಲ್ಲಿ ಎದುರಾದ ಮೊದಲ ನಿದರ್ಶನ ಇದಾಗಿತ್ತು.
ಭಾರತ ತನ್ನ ಆರಂಭಿಕ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ಆಡಿತು. ಕಳೆದ ವಿಶ್ವಕಪ್‌ನಲ್ಲಿ ದ್ರಾವಿಡ್ ಪಡೆಯನ್ನು ಕೆಡವಿ ಲೀಗ್ ಹಂತದಲ್ಲೇ ಭಾರತವನ್ನು ಕೂಟದಿಂದ ಹೊರದಬ್ಬಿದ ಬಾಂಗ್ಲಾ ಮೇಲಿನ ಆಕ್ರೋಶ ಇನ್ನೂ ಆರಿರಲಿಲ್ಲ. ಇದಕ್ಕೆ ಸೇಡು ತೀರಿಸಿಕೊಳ್ಳುವ ಕೆಲಸವೊಂದು ಬಾಕಿ ಇತ್ತು. ಉದ್ಘಾಟನಾ ಪಂದ್ಯವೇ ಇದಕ್ಕೆ ಸಾಕ್ಷಿಯಾಯಿತು. ಧೋನಿ ಪಡೆಯ ಗೆಲುವಿನ ಅಂತರ 87 ರನ್.
Related Articles
Advertisement
ಇಲ್ಲಿ ಹ್ಯಾಟ್ರಿಕ್ ಚಾಂಪಿಯನ್ ಆಸ್ಟ್ರೇಲಿಯದ ಆಟ ನಡೆಯಲಿಲ್ಲ. ಭಾರತ 5 ವಿಕೆಟ್‌ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಮೊಹಾಲಿಯ ಹೈ ವೋಲ್ಟೆಜ್ ಹಣಾಹಣಿಯಲ್ಲಿ ಪಾಕಿಸ್ಥಾನಕ್ಕೆ ನೀರು ಕುಡಿಸಿ ಅಜೇಯ ದಾಖಲೆ ಬರೆಯಿತು.
ಗಂಭೀರ್, ಧೋನಿ ಗೆಲುವಿನ ಆಟವಾಂಖೇಡೆಯಲ್ಲಿ ಸಾಗಿದ ಭಾರತ-ಶ್ರೀಲಂಕಾ ನಡುವಿನ ಫೈನಲ್ ದೊಡ್ಡ ಮೊತ್ತದ ಹಣಾಹಣಿಯಾಗಿತ್ತು. ಮಾಹೇಲ ಜಯವರ್ಧನ ಅವರ ಅಜೇಯ ಶತಕ ಸಾಹಸದಿಂದ ಶ್ರೀಲಂಕಾ 6 ವಿಕೆಟಿಗೆ 274 ರನ್ ಪೇರಿಸಿತು. ಭಾರತದ ಆರಂಭ ಆಘಾತಕಾರಿಯಾಗಿತ್ತು. ಸೆಹವಾಗ್ ಸೊನ್ನೆಗೆ ಔಟ್. ಕೊನೆಯ ವಿಶ್ವಕಪ್ ಆಡಲಿಳಿದಿದ್ದ ತೆಂಡುಲ್ಕರ್ 18 ರನ್ನಿಗೆ ಆಟ ಮುಗಿಸಿದರು. ಆದರೆ ಮಾಸ್ಟರ್ ಬ್ಲಾಸ್ಟರ್‌ಗೆ ಕಪ್ ಅರ್ಪಿಸಲೇಬೇಕೆಂದು ಪಣತೊಟ್ಟವರಂತೆ ಆಡಿದ ಗಂಭೀರ್ (97), ಧೋನಿ (ಅಜೇಯ 91) ಭಾರತದ ಜಯಭೇರಿ ಮೊಳಗಿಸಿಯೇ ಬಿಟ್ಟರು! 6 ವಿಶ್ವಕಪ್ ಪಂದ್ಯಾವಳಿಯೊಂದಿಗೆ ಈ ಪ್ರತಿಷ್ಠಿತ ಕೂಟದಿಂದ ದೂರ ಸರಿದ ಸಚಿನ್ ತೆಂಡುಲ್ಕರ್ ಅವರನ್ನು ಸಹ ಆಟಗಾರರೆಲ್ಲ ಎತ್ತಿ ಮೆರೆದಾಡಿದ ದೃಶ್ಯಾವಳಿಯನ್ನು ಮರೆಯುವಂತಿಲ್ಲ!
ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ತವರು ನೆಲದಲ್ಲೇ ಚಾಂಪಿಯನ್ ಆಗಿ ಮೂಡಿಬಂದ ಮೊದಲ ನಿದರ್ಶನ ಇದಾಗಿದೆ. ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಆತಿಥೇಯ ಭಾರತ ಸಹ ಆತಿಥ್ಯ ವಹಿಸಿದ್ದ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿ ಇತಿಹಾಸ ನಿರ್ಮಿಸಿತು.ಸಾಮಾನ್ಯವಾಗಿ ತವರು ತಂಡಕ್ಕೆ ಕಪ್ ಒಲಿಯದು ಎಂಬುದಕ್ಕೆ ವಿಶ್ವಕಪ್ ಪಂದ್ಯಾವಳಿ ಆರಂಭದಿಂದಲೇ ನಿದರ್ಶನ ಒದಗಿಸುತ್ತ ಬಂದಿದೆ. ಆದರೆ 1996ರಲ್ಲಿ ಆತಿಥೇಯ ತಂಡಗಳಲ್ಲಿ ಒಂದಾದ ಶ್ರೀಲಂಕಾ ಚಾಂಪಿಯನ್ ಆಗುವ ಮೂಲಕ ಈ ಮಾತನ್ನು ಸುಳ್ಳು ಮಾಡಿತು. ಈ ಫೈನಲ್ ಲಾಹೋರ್‌ನಲ್ಲಿ ನಡೆದಿತ್ತು.
2011ರಲ್ಲಿ ಭಾರತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವದೇಶದಲ್ಲೇ ವಿಶ್ವ ಚಾಂಪಿಯನ್ ಆಗಿ ಮೂಡಿಬಂದು ಹೊಸ ಇತಿಹಾಸ ಬರೆಯಿತು. 2015ರಲ್ಲಿ ಆಸ್ಟ್ರೇಲಿಯ ಇದನ್ನು ಪುನರಾವರ್ತಿಸಿತು. ಮೆಲ್ಬರ್ನ್ ಫೈನಲ್‌ನಲ್ಲಿ ನ್ಯೂಜಿಲ್ಯಾಂಡನ್ನು ಮಣಿಸಿ ಚಾಂಪಿಯನ್ ಆಗಿತ್ತು.ಈ ಬಾರಿ ಇಂಗ್ಲೆಂಡ್ ಮುಂದೆ ಇಂಥದೊಂದು ಅವಕಾಶವಿದೆ. ಆಗ “ಹೋಮ್ ಟೀಮ್’ಗಳ ಹ್ಯಾಟ್ರಿಕ್ ಸಾಧನೆ ದಾಖಲಾದಂತಾಗುತ್ತದೆ.
ಈ ಕೂಟದ ಆತಿಥ್ಯ ಏಶ್ಯದ 4 ಕ್ರಿಕೆಟ್ ರಾಷ್ಟ್ರಗಳ ನಡುವೆ ನಡೆ ಯಬೇಕಿತ್ತು. ಭಾರತ, ಪಾಕಿಸ್ಥಾನ, ಶ್ರೀಲಂಕಾ ಮತ್ತು ಇದೇ ಮೊದಲ ಬಾರಿಗೆ ಬಾಂಗ್ಲಾದೇಶದಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದವು. ಆದರೆ 2009ರ ಲಂಕಾ ಕ್ರಿಕೆಟ್ ಬಸ್ ಮೇಲಿನ ದಾಳಿ ಪಾಕಿಸ್ಥಾನಕ್ಕೆ ತೊಡ ಕಾಗಿ ಪರಿಣಮಿಸಿತು. ಭದ್ರತಾ ದೃಷ್ಟಿಯಿಂದ ಪಾಕಿಸ್ಥಾವನ್ನು ಆತಿಥ್ಯ ದಿಂದ ಹೊರಗಿಡಲಾಯಿತು. ಸಂಘಟನಾ ಸಮಿತಿ ಕಚೇರಿಯನ್ನು ಲಾಹೋರ್‌ನಿಂದ ಮುಂಬಯಿಗೆ ವರ್ಗಾಯಿಸಲಾಯಿತು.
ಮೂಲ ವೇಳಾಪಟ್ಟಿ ಪ್ರಕಾರ ಪಾಕಿಸ್ಥಾನದಲ್ಲಿ 14 ಪಂದ್ಯಗಳು ನಡೆಯಬೇಕಿತ್ತು. ಇದರಲ್ಲಿ ಒಂದು ಸೆಮಿಫೈನಲ್ ಕೂಡ ಸೇರಿತ್ತು. ಈ ಸೆಮಿಫೈನಲ್ ಹಾಗೂ 8 ಲೀಗ್ ಪಂದ್ಯಗಳು ಭಾರತದ ಪಾಲಾ ದವು. ಉಳಿದ 4 ಪಂದ್ಯಗಳನ್ನು ಶ್ರೀಲಂಕಾದಲ್ಲೂ, 2 ಪಂದ್ಯಗಳನ್ನು ಬಾಂಗ್ಲಾದೇಶದಲ್ಲೂ ಆಡಿಸುವ ತೀರ್ಮಾನ ಕೈಗೊಳ್ಳಲಾಯಿತು. ಭಾರತ ತಂಡ
ಮಹೇಂದ್ರ ಸಿಂಗ್ ಧೋನಿ (ನಾಯಕ), ವೀರೇಂದ್ರ ಸೆಹವಾಗ್, ಸಚಿನ್ ತೆಂಡುಲ್ಕರ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಯೂಸುಫ್ ಪಠಾಣ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆಶಿಷ್ ನೆಹ್ರಾ, ಮುನಾಫ್ ಪಟೇಲ್, ಎಸ್. ಶ್ರೀಶಾಂತ್, ಪೀಯೂಷ್ ಚಾವ್ಲಾ, ಆರ್. ಅಶ್ವಿನ್.
ಮೂಲ ತಂಡದಲ್ಲಿದ್ದ ಪ್ರವೀಣ್ ಕುಮಾರ್ ಗಾಯಾಳಾದ್ದರಿಂದ ಈ ಅವಕಾಶ ಶ್ರೀಶಾಂತ್ ಪಾಲಾಯಿತು. 2011 ವಿಶ್ವಕಪ್ ಫೈನಲ್
ಶ್ರೀಲಂಕಾ
ಉಪುಲ್ ತರಂಗ ಸಿ ಸೆಹವಾಗ್ ಬಿ ಜಹೀರ್ 2
ತಿಲಕರತ್ನೆ ದಿಲ್ಶನ್ ಬಿ ಹರ್ಭಜನ್ 33
ಕುಮಾರ ಸಂಗಕ್ಕರ ಸಿ ಧೋನಿ ಬಿ ಯುವರಾಜ್ 48
ಮಾಹೇಲ ಜಯವರ್ಧನೆ ಔಟಾಗದೆ 103
ತಿಲನ್ ಸಮರವೀರ ಎಲ್‌ಬಿಡಬ್ಲ್ಯು ಯುವರಾಜ್ 21
ಚಾಮರ ಕಪುಗೆಡರ ಸಿ ರೈನಾ ಬಿ ಜಹೀರ್ 1
ನುವಾನ್ ಕುಲಶೇಖರ ರನೌಟ್ 32
ತಿಸರ ಪೆರೆರ ಔಟಾಗದೆ 22
ಇತರ 12
ಒಟ್ಟು (6 ವಿಕೆಟಿಗೆ) 274
ವಿಕೆಟ್ ಪತನ: 1-17, 2-60, 3-122, 4-179, 5-182, 6-248.
ಬೌಲಿಂಗ್:
ಜಹೀರ್ ಖಾನ್ 10-3-60-2
ಎಸ್. ಶ್ರೀಶಾಂತ್ 8-0-52-0
ಮುನಾಫ್ ಪಟೇಲ್ 9-0-41-0
ಹರ್ಭಜನ್ ಸಿಂಗ್ 10-0-50-1
ಯುವರಾಜ್ ಸಿಂಗ್ 10-0-49-2
ಸಚಿನ್ ತೆಂಡುಲ್ಕರ್ 2-0-12-0
ವಿರಾಟ್ ಕೊಹ್ಲಿ 1-0-6-0 ಭಾರತ
ವೀರೇಂದ್ರ ಸೆಹವಾಗ್ ಎಲ್‌ಬಿಡಬ್ಲ್ಯು ಮಾಲಿಂಗ 0
ಸಚಿನ್ ತೆಂಡುಲ್ಕರ್ ಸಿ ಸಂಗಕ್ಕರ ಬಿ ಮಾಲಿಂಗ 18
ಗೌತಮ್ ಗಂಭೀರ್ ಬಿ ಪೆರೆರ 97
ವಿರಾಟ್ ಕೊಹ್ಲಿ ಸಿ ಮತ್ತು ಬಿ ದಿಲ್ಶನ್ 35
ಎಂ.ಎಸ್. ಧೋನಿ ಔಟಾಗದೆ 91
ಯುವರಾಜ್ ಸಿಂಗ್ ಔಟಾಗದೆ 21
ಇತರ 15
ಒಟ್ಟು (48.2 ಓವರ್‌ಗಳಲ್ಲಿ 4 ವಿಕೆಟಿಗೆ) 277
ವಿಕೆಟ್ ಪತನ: 1-0, 2-31, 3-114, 4-223.
ಬೌಲಿಂಗ್: ಲಸಿತ ಮಾಲಿಂಗ 9-0-42-2
ನುವಾನ್ ಕುಲಶೇಖರ 8.2-0-64-0
ತಿಸರ ಪೆರೆರ 9-0-55-1
ಸೂರಜ್ ರಾಂದಿವ್ 9-0-43-0
ತಿಲಕರತ್ನೆ ದಿಲ್ಶನ್ 5-0-27-1
ಮುತ್ತಯ್ಯ ಮುರಳೀಧರನ್ 8-0-39-0 ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ
ಸರಣಿಶ್ರೇಷ್ಠ: ಯುವರಾಜ್ ಸಿಂಗ್