Advertisement

ವನಿತಾ ವಿಶ್ವಕಪ್‌: ತಿರುಗಿಬಿದ್ದ ಇಂಗ್ಲೆಂಡ್ ; ಉತ್ಸಾಹದಲ್ಲಿದ್ದ ಭಾರತಕ್ಕೆ ಸೋಲಿನ ಶಾಕ್

12:07 PM Mar 16, 2022 | Team Udayavani |

ಮೌಂಟ್‌ ಮೌಂಗನುಯಿ: ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡಿದ ಎಲ್ಲ 3 ಪಂದ್ಯಗಳಲ್ಲಿ ಸೋತಿದ್ದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡಕ್ಕೆ ಶಾಕ್ ನೀಡಿ 4 ವಿಕೆಟ್ ಗಳ ಗೆಲುವು ಸಾಧಿಸಿದೆ.

Advertisement

ಸತತ 3 ಪಂದ್ಯಗಳಲ್ಲಿ ಸೋತು ಹೈರಾಣಾಗಿದ್ದ ಇಂಗ್ಲೆಂಡ್‌ ಇಂದು ಹೊಸ ಉತ್ಸಾಹದಲ್ಲಿ ಆಡಿ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಿಗು ದಾಳಿ ನಡೆಸಿದ ಆಂಗ್ಲ ಮಹಿಳೆಯರು 36.2 ಓವರ್ ಗಳಲ್ಲಿ ಮಿಥಾಲಿ ಬಳಗವನ್ನು ಅಗ್ಗದ 134 ರನ್ ಗಳಿಗೆ ಕಟ್ಟಿ ಹಾಕಿತು. ಚಾರ್ಲೆಟ್ ಡೀನ್ 4 ವಿಕೆಟ್ ಪಡೆದು ಭಾರತದ ವನಿತೆಯರನ್ನು ಕಾಡಿದರು.

ಭಾರತದ ಪರ ಸ್ಮೃತಿ ಮಂಧನ 35, ಹರ್ಮನ್‌ಪ್ರೀತ್ ಕೌರ್ 14, ರಿಚಾ ಘೋಷ್ 33, ಕೊನೆಯಲ್ಲಿ ಬಂದ ಜೂಲನ್ ಗೋಸ್ವಾಮಿ 20 ರನ್ ಕೊಡುಗೆ ಸಲ್ಲಿಸಿದರೆ, ಉಳಿದೆಲ್ಲಾ ಆಟಗಾರ್ತಿಯರು ದಯನೀಯ ವೈಫಲ್ಯ ಅನುಭವಿಸಿ ಒಂದಂಕಿ ದಾಟಲಿಲ್ಲ.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿದರೂ 4 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಚೇತರಿಕೊಂಡು  31.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಗೆಲುವು ತನ್ನದಾಗಿಸಿ ಕೊಂಡಿತು.

ತಾಳ್ಮೆಯ ಆಟವಾಡಿದ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ 53 ರನ್, ನಟಾಲಿಯಾ ಸ್ಕಿವರ್ 45 ರನ್ ಗಳ ಜತೆಯಾಟವಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಬೌಲಿಂಗ್ ನಲ್ಲಿ ಮೇಘನಾ ಸಿಂಗ್ 3 ವಿಕೆಟ್ ಪಡೆದು ಗಮನ ಸೆಳೆದರು.

Advertisement

ಕಳೆದ ವಿಶ್ವಕಪ್ ರನ್ನರ್ ಅಪ್‌ ಆಗಿದ್ದ ಭಾರತ ಸೋಲಿನ ಸೇಡು ತೀರಿಸಿಕೊಳ್ಳುವಲ್ಲಿ ವಿಫಲವಾಗಿದೆ. 2017ರ ಫೈನಲ್‌ನಲ್ಲಿ ಅಲ್ಪ ಅಂತರದಿಂದ ಇಂಗ್ಲೆಂಡಿಗೆ ಶರಣಾಗಿತ್ತು.

ಪಾಕಿಸ್ಥಾನವನ್ನು ಮಣಿಸಿ, ಆತಿಥೇಯ ನ್ಯೂಜಿಲ್ಯಾಂಡ್‌ ವಿರುದ್ಧ ಸೋತು, ಅನಂತರದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ಎದುರು ಭರ್ಜರಿ ಆಟವಾಡಿ ಸ್ಮೃತಿ ಮಂಧನಾ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಶತಕ ಬಾರಿಸಿ ವಿಶ್ವಕಪ್‌ ಇತಿಹಾಸದಲ್ಲೇ ತನ್ನ ಗರಿಷ್ಠ ಮೊತ್ತ ದಾಖಲಿಸಿ ಗೆಲುವು ತನ್ನದಾಗಿಸಿಕೊಂಡು ಉತ್ಸಾಹದಲ್ಲಿತ್ತು. ಇಂಗ್ಲೆಂಡ್ ಎದುರು ಬ್ಯಾಟಿಂಗ್ ವೈಫಲ್ಯ ಅನುಭವಿಸಿ ತಂಡ ಮುಂದಿನ ಕಠಿಣ ಹಾದಿ ತುಳಿಯಬೇಕಾಗಿದೆ.

ಅಂಕಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮೊದಲ ಸ್ಥಾನ ಮತ್ತು ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next