Advertisement

ಮಹಿಳಾ ಏಕದಿನ ವಿಶ್ವಕಪ್‌: ಭಾರತ ವನಿತೆಯರ ದಾಳಿಗೆ ಮುಗ್ಗರಿಸಿದ ಪಾಕ್‌

03:45 AM Jul 03, 2017 | |

ಡರ್ಬಿ(ಇಂಗ್ಲೆಂಡ್‌): ಸಂಘಟನಾತ್ಮಕ ಹೋರಾಟ ಪ್ರದರ್ಶಿಸಿದ ಭಾರತ ತಂಡ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 95 ರನ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ ಕೂಟದಲ್ಲಿ ಸತತ 3ನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಅದೇ ರೀತಿ ಪಾಕ್‌ ವಿರುದ್ಧ ಏಕದಿನದಲ್ಲಿ ಸೋಲಿಲ್ಲದ ಅಜೇಯ ಓಟವನ್ನು ಮುಂದುವರಿಸಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ನಲ್ಲಿ 9 ವಿಕೆಟ್‌ ಕಳೆದುಕೊಂಡು 169 ರನ್‌ ಬಾರಿಸಿತ್ತು. ಸುಲಭ ಗುರಿ ಬೆನ್ನು ಹತ್ತಿದ ಪಾಕ್‌ 38.1 ಓವರ್‌ಗೆ 74 ರನ್‌ ಬಾರಿಸಿ ಆಲೌಟ್‌ ಆಯಿತು. ಭಾರತೀಯ ಬೌಲರ್‌ ಏಕ್ತಾ ಬಿಸ್ಟ್‌ ಭರ್ಜರಿ ದಾಳಿಯಿಂದಾಗಿ ಪಾಕ್‌ ಆಟಗಾರ್ತಿಯರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಸೇರಿದರು. ಪಾಕ್‌ ಪರ ಸನಾ ಮಿರ್‌ (29), ನಹಿದಾ ಖಾನ್‌(23) ರನ್‌ ಬಾರಿಸಿದ್ದೆ ವೈಯಕ್ತಿಕ ದೊಡ್ಡ ಮೊತ್ತವಾಗಿತ್ತು. ಭಾರತದ ಪರ ಏಕ್ತಾ ಬಿಸ್ಟ್‌ 5 ವಿಕೆಟ್‌ ಪಡೆದು ಮಿಂಚಿದರು.

ಭಾರತಕ್ಕೆ ರಾವತ್‌, ಸುಷ್ಮಾ ಆಸರೆ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಭಾರತಕ್ಕೆ ಪೂನಂ ರಾವತ್‌, ಸುಷ್ಮಾ ವರ್ಮ, ದೀಪ್ತಿ ಶರ್ಮ ಆಸರೆಯಾದರು. ಈ ಮೂವರು ಆಟಗಾರ್ತಿಯರ ಬ್ಯಾಟಿಂಗ್‌ ಬಲದಿಂದಾಗಿ ಭಾರತ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಲು ಯಶಸ್ವಿಯಾಯಿತು.

ಆರಂಭಿಕರಾಗಿ ಪೂನಂ ರಾವುತ್‌ ಮತ್ತು ಸ್ಮತಿ ಮಂಧನಾ ಕಣಕ್ಕೆ ಇಳಿದರು. ಕಳೆದ ಎರಡೂ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಮಂಧನಾ 2 ರನ್‌ ಬಾರಿಸುತ್ತಿದ್ದಂತೆ ದಿಯಾನ ಬೇಗ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಹೀಗಾಗಿ ಆಕಂಭದಲ್ಲಿಯೇ ಭಾರತಕ್ಕೆ ಆಘಾತವಾಯಿತು. 2ನೇ ವಿಕೆಟ್‌ಗೆ ಜತೆಗೂಡಿದ ರಾವತ್‌ ಮತ್ತು ದೀಪ್ತಿ ಶರ್ಮ 67 ರನ್‌ ಜತೆಯಾಟ ನೀಡಿದರು. ಆದರೆ ಇವರ ಬ್ಯಾಟಿಂಗ್‌ ತುಂಬಾ ನಿಧಾನವಾಗಿತ್ತು. ರಾವತ್‌ 72 ಎಸೆತದಲ್ಲಿ 5 ಬೌಂಡರಿ ಸೇರಿದಂತೆ 47 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಭಾರತದ ಭರವಸೆಯ ಆಟಗಾರ್ತಿ ಮಿಥಾಲಿ ರಾಜ್‌ (8) ಅಲ್ಪ ಮೊತ್ತಕ್ಕೆ ವಿಕೆಟ್‌ ಕಳೆದುಕೊಂಡರು. ನಂತರ ಭಾರತೀಯರ ಆಟಗಾರ್ತಿಯರು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್‌ ಸೇರತೊಡಗಿದರು.

ಆದರೆ ಈ ಹಂತದಲ್ಲಿ ಸುಷ್ಮಾ ವರ್ಮ ಮತ್ತು ಜೂಲನ್‌ ಗೋಸ್ವಾಮಿ ಉತ್ತಮ ಆಟ ಪ್ರದರ್ಶಿಸಿದರು. ಸುಷ್ಮಾ 33 ರನ್‌ ಬಾರಿಸಿದರೆ, ಗೋಸ್ವಾಮಿ 14 ರನ್‌ ಬಾರಿಸಿ ಔಟ್‌ ಆದರು.

Advertisement

ಸಂಕ್ಷಿಪ್ತ ಸ್ಕೋರ್‌: ಭಾರತ 50 ಓವರ್‌ಗೆ 169/9 (ಪೂನಂ ರಾವತ್‌ 47, ಸುಷ್ಮಾ ವರ್ಮ 33, ದೀಪ್ತಿ ಶರ್ಮ 28, ನಶ್ರಾ ಸಂಧು 26ಕ್ಕೆ4, ಸಾದಿಯಾ ಯೂಸುಫ್ 30ಕ್ಕೆ 2), ಪಾಕಿಸ್ತಾನ 38.1 ಓವರ್‌ಗೆ 74/10 (ಸನಾ ಮಿರ್‌ 29, ನಹಿದಾ ಖಾನ್‌ 23, ಏಕ್ತಾ ಬಿಸ್ಟ್‌ 18ಕ್ಕೆ 5).

ಪಂದ್ಯದ ತಿರುವು:
ಸ್ಪರ್ಧಾತ್ಮಕ ಮೊತ್ತವನ್ನು ಚೇಸ್‌ ಮಾಡಲು ಮುಂದಾದ ಪಾಕ್‌ ತಂಡ 26 ರನ್‌ ಬಾರಿಸುವುದರೊಳಗಾಗಿ ಮಹತ್ವದ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಭಾರತದ ಗೆಲುವಿಗೆ ಕಾರಣವಾಯಿತು.
 

Advertisement

Udayavani is now on Telegram. Click here to join our channel and stay updated with the latest news.

Next