ದುಬೈ: ದಕ್ಷಿಣ ಆಫ್ರಿಕಾದ ಲಿಜೆಲ್ ಲೀ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅವರೊಂದಿಗೆ ಏಕದಿನ ಮಹಿಳಾ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಜಂಟಿ ಆಗ್ರಸ್ಥಾನ ಅಲಂಕರಿಸಿದ್ದಾರೆ. ಇಬ್ಬರೂ 762 ಅಂಕ ಹೊಂದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಆಡಲಾದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 91 ರನ್ ಬಾರಿಸಿದ ಲಿಜೆಲ್ ಲೀ, 154 ರನ್ನುಗಳ ಯಶಸ್ವಿ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದಕ್ಕೂ ಮುನ್ನ ಅವರು 2018ರ ಜೂನ್ ಹಾಗೂ ಇದೇ ವರ್ಷದ ಮಾರ್ಚ್‌ನಲ್ಲಿ ನಂ.1 ಆಗಿದ್ದರು.
ಶಫಾಲಿ ವರ್ಮ ನಂ.1: ಟಿ20 ಬ್ಯಾಟಿಂಗ್ ವಿಭಾಗದಲ್ಲಿ ಶಫಾಲಿ ವರ್ಮ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ (759 ಅಂಕ). ಆಸ್ಟ್ರೇಲಿಯದ ಬೆತ್ ಮೂನಿ (744) ಮತ್ತು ಭಾರತದ ಟಿ20 ತಂಡದ ಉಪನಾಯಕಿ ಸ್ಮತಿ ಮಂಧನಾ (716) ಅನಂತರದ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ಅಲಿಸ್ಸಾ ಹೀಲಿ 3ನೇ ಸ್ಥಾನದಲ್ಲಿದ್ದಾರೆ. ಟಾಪ್-10 ಯಾದಿಯಲ್ಲಿರುವ ಭಾರತದ ಮತ್ತೋರ್ವ ಆಟಗಾರ್ತಿ ಸ್ಮತಿ ಮಂಧನಾ (9).
ಬೌಲಿಂಗ್ ವಿಭಾಗದಲ್ಲಿ ಜೂಲನ್ ಗೋಸ್ವಾಮಿ (5) ಮತ್ತು ಪೂನಂ ಯಾದವ್ (9) ತಮ್ಮ ರ್‍ಯಾಂಕಿಂಗ್ ಸ್ಥಾನ ಕಾಯ್ದುಕೊಂಡಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ದೀಪ್ತಿ ಶರ್ಮ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.