Advertisement

ಮಂಧನಾ ಮೋಹಕ ಶತಕ ವನಿತೆಯರಿಗೆ ಸರಣಿ

06:20 AM Feb 08, 2018 | Team Udayavani |

ಕಿಂಬರ್ಲಿ: ಐಸಿಸಿ ವುಮೆನ್ಸ್‌ ಚಾಂಪಿಯನ್ಸ್‌ಶಿಪ್‌ ಸರಣಿಯ 2ನೇ ಪಂದ್ಯದಲ್ಲೂ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದ ಭಾರತ ಸರಣಿ ವಶಪಡಿಸಿಕೊಂಡಿದೆ. ಬುಧವಾರ ಕಿಂಬರ್ಲಿಯಲ್ಲಿ ನಡೆದ ಪಂದ್ಯವನ್ನು ಮಿಥಾಲಿ ಪಡೆ 178 ರನ್ನುಗಳ ಭಾರೀ ಅಂತರದಿಂದ ಗೆದ್ದಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಮೂರೇ ವಿಕೆಟಿಗೆ 302 ರನ್‌ ಪೇರಿಸಿದರೆ, ದಕ್ಷಿಣ ಆಫ್ರಿಕಾ 30.5 ಓವರ್‌ಗಳಲ್ಲಿ 124ಕ್ಕೆ ಆಲೌಟ್‌ ಆಯಿತು. ಪೂನಂ ಯಾದವ್‌ 4 ವಿಕೆಟ್‌, ರಾಜೇಶ್ವರಿ ಗಾಯಕ್ವಾಡ್‌ ಮತ್ತು ದೀಪ್ತಿ ಶರ್ಮ ತಲಾ 2 ವಿಕೆಟ್‌ ಕಿತ್ತರು.

ಮಂಧನಾ ಜೀವನಶ್ರೇಷ್ಠ ಆಟ
ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ 3ನೇ ಶತಕ ಹಾಗೂ ಜೀವನಶ್ರೇಷ್ಠ ಬ್ಯಾಟಿಂಗ್‌, ಹರ್ಮನ್‌ಪ್ರೀತ್‌ ಕೌರ್‌ ಮತ್ತು ವೇದಾ ಕೃಷ್ಣಮೂರ್ತಿ ಅವರ ಅರ್ಧ ಶತಕದಾಟ ಭಾರತದ ಸರದಿಯ ಆಕರ್ಷಣೆಯಾಗಿತ್ತು. ಬೌಲಿಂಗ್‌ ವೇಳೆ ಒಂದೇ ವಿಕೆಟ್‌ ಕಿತ್ತರೂ ಅನುಭವಿ ಜೂಲನ್‌ ಗೋಸ್ವಾಮಿ ಇತಿಹಾಸವನ್ನೇ ಬರೆದರು. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 200 ವಿಕೆಟ್‌ ಉರುಳಿಸಿದ ವಿಶ್ವದ ಮೊದಲ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾದರು.

ಮೊದಲ ಪಂದ್ಯದಲ್ಲಿ 84 ರನ್‌ ಬಾರಿಸಿ ಮಿಂಚಿದ್ದ ಮಂಧನಾ, ಬುಧವಾರದ ಮುಖಾಮುಖೀಯಲ್ಲಿ 135 ರನ್‌ ಬಾರಿಸಿ ಕಿಂಬರ್ಲಿಯ “ಡೈಮಂಡ್‌ ಓವಲ್‌’ನಲ್ಲಿ ಮೆರೆದಾಡಿದರು. ಇದು 34ನೇ ಏಕದಿನ ಪಂದ್ಯದಲ್ಲಿ ಮಂಧನಾ ಹೊಡೆದ 3ನೇ ಶತಕ. 129 ಎಸಡೆತಗಳಿಗೆ ಜವಾಬಿತ್ತ 21ರ ಹರೆಯದ ಈ ಎಡಗೈ ಆಟಗಾರ್ತಿ, 14 ಬೌಂಡರಿ ಹಾಗೂ ಒಂದು ಸಿಕ್ಸರ್‌ ಎತ್ತಿದರು. ಹರ್ಮನ್‌ಪ್ರೀತ್‌ ಅಜೇಯ 55 ರನ್‌, ವೇದಾ ಅಜೇಯ 51 ರನ್‌ ಮಾಡಿ ಭಾರತದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು.

ಕಳೆದ ವರ್ಷದ ಐಸಿಸಿ ವನಿತಾ ವಿಶ್ವಕಪ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟಾಂಟನ್‌ ಪಂದ್ಯದಲ್ಲಿ ಅಜೇಯ 106 ರನ್‌ ಮಾಡಿದ್ದು ಸ್ಮತಿ ಮಂಧನಾ ಅವರ ಈವರೆಗಿನ ಗರಿಷ್ಠ ವೈಯಕ್ತಿಕ ಗಳಿಕೆಯಾಗಿತ್ತು. ಅಯಬೊಂಗಾ ಖಾಕಾ ಎಸೆದ 43ನೇ ಓವರಿನಲ್ಲಿ ಭಾರತ 28 ರನ್‌ ಸೂರೆಗೈದಿತ್ತು. ಇದರಲ್ಲಿ ಮಂಧನಾ ಪಾಲೇ 22 ರನ್‌ (4 ಬೌಂಡರಿ, 1 ಸಿಕ್ಸರ್‌).
ಮಂಧನಾ ಮತ್ತು ಪೂನಂ ರಾವತ್‌ ಮೊದಲ ವಿಕೆಟಿಗೆ 12.3 ಓವರ್‌ಗಳಿಂದ 56 ರನ್‌ ಒಟ್ಟುಗೂಡಿಸಿದರು. ಬಳಿಕ ಮಂಧನಾ-ಮಿಥಾಲಿ (20) 2ನೇ ವಿಕೆಟಿಗೆ 51 ರನ್‌ ಪೇರಿಸಿದರು.

Advertisement

3ನೇ ವಿಕೆಟಿಗೆ ಜತೆಗೂಡಿದ ಮಂಧನಾ-ಹರ್ಮನ್‌ಪ್ರೀತ್‌ 134 ಪೇರಿಸಿ ಹರಿಣಗಳ ದಾಳಿಯನ್ನು ಲೆಕ್ಕಕ್ಕಿಲ್ಲದಂತೆ ಮಾಡಿದರು. ಬಳಿಕ ಹರ್ಮನ್‌ಪ್ರೀತ್‌-ವೇದಾ ಜೋಡಿಯಿಂದ ಮುರಿಯದ 4ನೇ ವಿಕೆಟಿಗೆ 61 ರನ್‌ ಒಟ್ಟುಗೂಡಿತು.ಹರ್ಮನ್‌ಪ್ರೀತ್‌ ಅವರ 55 ರನ್‌ 69 ಎಸೆತಗಳಿಂದ ಬಂತು (2 ಬೌಂಡರಿ, 1 ಸಿಕ್ಸರ್‌). ಇದು ಅವರ 11ನೇ ಅರ್ಧ ಶತಕ. ಕರ್ನಾಟಕದ ವೇದಾ ಕೃಷ್ಣಮೂರ್ತಿ 33 ಎಸೆತಗಳಿಂದ 51 ರನ್‌ ಹೊಡೆದು 7ನೇ ಅರ್ಧ ಶತಕ ಪೂರೈಸಿದರು. ಇದರಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು.

ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಫೆ. 10ರಂದು ಪೊಚೆಫ್ಸೂóಮ್‌ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ-3 ವಿಕೆಟಿಗೆ 302 (ಮಂಧನಾ 135, ಹರ್ಮನ್‌ಪ್ರೀತ್‌ ಅಜೇಯ 55, ವೇದಾ ಅಜೇಯ 51, ಲುಯಿಸ್‌ 31ಕ್ಕೆ 1, ಎಂಟೊಜೇಕ್‌ 63ಕ್ಕೆ 1, ಕ್ಲಾಸ್‌ 65ಕ್ಕೆ 1). ದಕ್ಷಿಣ ಆಫ್ರಿಕಾ-30.5 ಓವರ್‌ಗಳಲ್ಲಿ 124 (ಲೀ 73, ಕಾಪ್‌ 17, ಪೂನಂ 24ಕ್ಕೆ 4, ರಾಜೇಶ್ವರಿ 14ಕ್ಕೆ 2, ದೀಪ್ತಿ 34ಕ್ಕೆ 2, ಜೂಲನ್‌ 29ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next