Advertisement

ಪಾಕನ್ನು ವಿಶ್ವಕಪ್‌ನಿಂದ ಹೊರಹಾಕಲ್ಲ

03:17 AM Mar 04, 2019 | Team Udayavani |

ದುಬೈ: ಭಯೋತ್ಪಾದನೆ ಪೋಷಿಸುವ ರಾಷ್ಟ್ರಗಳೊಂದಿಗೆ ಎಲ್ಲ ರೀತಿಯ ಕ್ರಿಕೆಟ್‌ ಸಂಬಂಧಗಳನ್ನು ಕಡಿದುಕೊಳ್ಳಬೇಕೆಂಬ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಆಗ್ರಹವನ್ನು, ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ತಿರಸ್ಕರಿಸಿದೆ.

Advertisement

ಅಲ್ಲಿಗೆ ಪಾಕಿಸ್ತಾನವನ್ನು ಪ್ರಸ್ತುತ ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ ವಿಶ್ವಕಪ್‌ನಿಂದ ಉಚ್ಚಾಟಿಸಬೇಕೆಂಬ ಒತ್ತಾಯವೂ ಮೂಲೆಗೆ ಸರಿದಿದೆ. ಇದು ಹೀಗೆಯೇ ಆಗುತ್ತದೆಂಬ ಬಗ್ಗೆ ನಮಗೆ ಮುಂಚೆಯೇ ಅರಿವಿತ್ತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ದುಬೈನಲ್ಲಿ ಮುಗಿದ ಐಸಿಸಿಯ ತ್ತೈಮಾಸಿಕ ಸಭೆಯಲ್ಲಿ ಐಸಿಸಿ ಮೇಲಿನಂತೆ ಪ್ರತಿಕ್ರಿಯಿಸಿದೆ ಎನ್ನಲಾಗಿದೆ. ಗಮನಾರ್ಹ ಸಂಗತಿಯೆಂದರೆ ಈ ವಿಚಾರವನ್ನು ಫೆ.27ರಿಂದ ಮಾ.2ರವರೆಗೆ ನಡೆದ ಐಸಿಸಿ ಸಭೆಯ ಕೊನೆಯದಿನ ಸ್ವತಃ ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌ ಪ್ರಸ್ತಾಪಿಸಿದ್ದಾರೆ. ಬಿಸಿಸಿಐ ಪರ ಹಾಜರಿದ್ದ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಯಾಗಲೀ ಅಥವಾ ಪ್ರತಿನಿಧಿಯಾಗಲೀ, ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ಹೊರ ಹಾಕಬೇಕೆಂಬ ಒತ್ತಾಯವನ್ನು ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಎತ್ತಲಿಲ್ಲ. ಹೀಗೆಂದು ಮೂಲಗಳು ಹೇಳಿವೆ.ಭಯೋತ್ಪಾದಕ ಪೀಡಿತ ರಾಷ್ಟ್ರಗಳೊಂದಿಗೆ ಕ್ರಿಕೆಟ್‌ ಸಂಬಂಧ ಕಡಿದುಕೊಳ್ಳುವುದು ಐಸಿಸಿ ವ್ಯಾಪ್ತಿಯಲ್ಲಿ
ಬರುವುದಿಲ್ಲ. ಅಂತಹ ನಿಯಮಗಳು ಐಸಿಸಿಯಲ್ಲಿಲ್ಲ. ಕ್ರಿಕೆಟ್‌ ಒಂದೇ ಐಸಿಸಿ ಆದ್ಯತೆ. ಈ ಬಗ್ಗೆ ಸಂಬಂಧಪಟ್ಟ ಸರ್ಕಾರಗಳೇ ಕ್ರಮ ಕೈಗೊಳ್ಳಬೇಕು ಎಂದು ಶಶಾಂಕ್‌ ಮನೋಹರ್‌ ಹೇಳಿದ್ದಾರೆ.

ಪಾಕಿಸ್ತಾನ ಸೂಪರ್‌ ಲೀಗ್‌ ಕ್ರಿಕೆಟ್‌ನಲ್ಲಿ ಹಲವು ರಾಷ್ಟ್ರಗಳ ಕ್ರಿಕೆಟಿಗರು ಆಡುತ್ತಾರೆ. ಆ ಯಾವ ದೇಶಗಳೂ ಪಾಕ್‌ನೊಂದಿಗೆ ಕ್ರಿಕೆಟ್‌ ಸಂಬಂಧ ಕಡಿದುಕೊಳ್ಳಲು ಒಪ್ಪುವುದಿಲ್ಲ, ಆದ್ದರಿಂದ ಈ ಬೇಡಿಕೆ ಐಸಿಸಿಯಲ್ಲಿ ಮಹತ್ವ ಕಳೆದುಕೊಳ್ಳುತ್ತದೆಂದು ನಮಗೆ ಮೊದಲೇ ಗೊತ್ತಿತ್ತು ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಪಾಕ್‌ನೊಂದಿಗೆ ವಿಶ್ವಕಪ್‌ ಬೇಡ: ಫೆ.14ರಂದು ಜಮ್ಮುಕಾಶ್ಮೀರದ ಶ್ರೀನಗರ ಹೆದ್ದಾರಿಯಲ್ಲಿ ಬರುವ ಪುಲ್ವಾಮದಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರಗಾಮಿ ಆದಿಲ್‌ ದಾರ್‌, ಆತ್ಮಾಹುತಿ ಬಾಂಬ್‌ ಸ್ಫೋಟಿಸಿದ್ದರು. ಪರಿಣಾಮ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ್ದರು. ಇದಾದ ಕೂಡಲೇ ಇಡೀ ಭಾರತದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಪಾಕಿಸ್ತಾನದ ವಿರುದ್ಧ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಬಾರಿ ಇಂಗ್ಲೆಂಡ್‌ನ‌ಲ್ಲಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಬಾರದು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಮತ್ತಿತರ ಕ್ರಿಕೆಟಿಗರು ಆಗ್ರಹಿಸಿದ್ದರು. ಇದರ ಬಗ್ಗೆ ಪರ ವಿರೋಧ ವಾದ ಕೇಳಿ ಬಂದಿತ್ತು.

Advertisement

ಈ ವೇಳೆ ಬಿಸಿಸಿಐ ಆಡಳಿತಾಧಿಕಾರಿಗಳ ಮುಖ್ಯಸ್ಥ ವಿನೋದ್‌ ರಾಯ್‌ ಹೊಸತೊಂದು ವಾದವನ್ನು ಮುಂದಿಟ್ಟರು. ಪಾಕಿಸ್ತಾನದ ವಿರುದ್ಧ ಲೀಗ್‌ನಲ್ಲಿ ಆಡದಿರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಎಲ್ಲಿಯವರೆಗೆ ಅದು ಭಯೋತ್ಪಾದನೆಗೆ ಬೆಂಬಲ ನೀಡುತ್ತದೋ, ಅಲ್ಲಿಯವರೆಗೆ ಅದನ್ನು ಕ್ರಿಕೆಟ್‌ನಿಂದಲೇ ಹೊರಹಾಕಬೇಕು. ಆದ್ದರಿಂದ ಪಾಕಿಸ್ತಾನವನ್ನು ವಿಶ್ವಕಪ್‌ನಿಂದಲೇ ಹೊರಹಾಕಬೇಕು. ಐಸಿಸಿ ಅದರೊಂದಿಗೆ ಕ್ರಿಕೆಟ್‌ ಸಂಬಂಧ ಕಡಿದುಕೊಳ್ಳಬೇಕೆಂದು ಪತ್ರಮುಖೇನ ಆಗ್ರಹಿಸಿದರು (ವಿಚಿತ್ರವೆಂದರೆ ವಿನೋದ್‌ ಬರೆದ ಪತ್ರದಲ್ಲಿ ಎಲ್ಲೂ ಪಾಕಿಸ್ತಾನದ ಹೆಸರಿರಲಿಲ್ಲ. ಬದಲಿಗೆ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ರಾಷ್ಟ್ರಗಳು ಎಂದಿತ್ತು). ಈ ಪತ್ರಕ್ಕೆ ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌ ಪ್ರತಿಕ್ರಿಯಿಸಿದ್ದು.

ವರ್ಣಭೇದ: ದಕ್ಷಿಣ ಆಫ್ರಿಕಾಕ್ಕೂ ಬಹಿಷ್ಕಾರ ಹಾಕಲಾಗಿತ್ತು 
ಪಾಕಿಸ್ತಾನದ ವಿರುದ್ಧ ಭಾರತ ಲೀಗ್‌ನಲ್ಲಿ ಆಡದಿದ್ದರೂ, ಸಮಸ್ಯೆ ಬಗೆಹರಿಯುವುದಿಲ್ಲ. ಒಂದು ವೇಳೆ ಆ ತಂಡ ಸೆಮಿಫೈನಲ್‌, ಫೈನಲ್‌ನಲ್ಲಿ ಎದುರಾದರೆ ಏನು ಮಾಡಬೇಕು? ಆದ್ದರಿಂದ ಅದನ್ನು ವಿಶ್ವಕಪ್‌ನಿಂದಲೇ ಬಹಿಷ್ಕರಿಸಬೇಕು ಎನ್ನುವುದು ವಿನೋದ್‌ ವಾದ. ವರ್ಣಭೇದ ಮಾಡಿದ್ದರಿಂದ ದ.ಆಫ್ರಿಕಾವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳ ಪಡಿಸಿದ್ದನ್ನು ಹಿನ್ನೆಲೆಯಾಗಿಟ್ಟುಕೊಂಡು, ವಿನೋದ್‌ ಮೇಲಿನಂತೆ ವಾದಿಸಿದ್ದರು. ದ.ಆಫ್ರಿಕಾ  ಸರ್ಕಾರ 1970ರ ಹೊತ್ತಿನಲ್ಲಿ ಬರೀ ಬಿಳಿಯ ಜನರಿರುವ ಆಸ್ಟ್ರೇಲಿಯ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ವಿರುದ್ಧ ಮಾತ್ರ ತನ್ನ ಆಡಬೇಕು. ತನ್ನ ತಂಡದಲ್ಲೂ ಬಿಳಿಯ ಆಟಗಾರರೇ ಇರಬೇಕು ಎಂಬ ನಿಯಮ ತಂದಿತ್ತು. ಇದನ್ನು ಐಸಿಸಿ ಸದಸ್ಯ ರಾಷ್ಟ್ರಗಳು ಪೂರ್ಣ ಪ್ರಮಾಣದಲ್ಲಿ ವಿರೋಧಿಸಿ, ಅದನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರ ಹಾಕಿದವು. 1991ರಲ್ಲಿ ದ.ಆಫ್ರಿಕಾ ಸರ್ಕಾರದ ನಿಯಮ ಬದಲಾಗಿದ್ದರಿಂದ, ಮತ್ತೆ ಆ ತಂಡಕ್ಕೆ ಕ್ರಿಕೆಟ್‌ ಆಡುವ ಅವಕಾಶ ನೀಡಲಾಯಿತು. ಅದು ಮೊದಲ ಟೆಸ್ಟನ್ನು ಕೋಲ್ಕತದಲ್ಲಿ ಭಾರತ ವಿರುದ್ಧ ಆಡಿತು. ಸದ್ಯ ಪಾಕಿಸ್ತಾನದಲ್ಲೂ ಅದೇ ಪರಿಸ್ಥಿತಿ ಇದೆ. ಆ ದೇಶದಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿದೆ. ಅಲ್ಲಿ ಸುರಕ್ಷಿತ ವಾತಾವರಣವಿಲ್ಲ, ಅಲ್ಲಿಗೆ ತೆರಳಬಾರದೆಂದು ಸ್ವತಃ ಐಸಿಸಿಯೇ ಆದೇಶಿಸಿದೆ. ಭಾರತ ಆ ದೇಶದೊಂದಿಗೆ ತಟಸ್ಥ ತಾಣದಲ್ಲೂ ದ್ವಿಪಕ್ಷೀಯ ಕ್ರಿಕೆಟ್‌ ಆಡುವುದನ್ನು ನಿಲ್ಲಿಸಿದೆ. ಇದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ಆರ್ಥಿಕ ದಿವಾಳಿತನದ ಅಂಚಿಗೆ ತಂದು ನಿಲ್ಲಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next