Advertisement

ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ : ಕೊಹ್ಲಿ ಸ್ಥಾನಕ್ಕೆ ರೂಟ್‌ ಲಗ್ಗೆ

12:12 AM Feb 11, 2021 | Team Udayavani |

ದುಬಾೖ: ಚೆನ್ನೈ ಟೆಸ್ಟ್‌ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ದ್ವಿಶತಕ ಬಾರಿಸಿದ ಇಂಗ್ಲೆಂಡ್‌ ನಾಯಕ ಜೋ ರೂಟ್‌ ನೂತನ ಐಸಿಸಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಐದರಿಂದ 3ನೇ ಸ್ಥಾನಕ್ಕೆ ನೆಗೆದಿದ್ದಾರೆ. ಇನ್ನೊಂದೆಡೆ ಟೀಮ್‌ ಇಂಡಿಯಾದ ಕಪ್ತಾನ ವಿರಾಟ್‌ ಕೊಹ್ಲಿ ಮೂರರಿಂದ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದರೊಂದಿಗೆ ಇವರಿಬ್ಬರ ಸ್ಥಾನ ಅದಲು ಬದಲಾದಂತಾಯಿತು.

Advertisement

ಪ್ರಸಕ್ತ ಏಶ್ಯ ಪ್ರವಾಸದ 3 ಟೆಸ್ಟ್‌ ಗಳಲ್ಲಿ 684 ರನ್‌ ಪೇರಿಸುವ ಮೂಲಕ ಜೋ ರೂಟ್‌ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದು, ಒಟ್ಟು 883 ರೇಟಿಂಗ್‌ ಅಂಕ ಹೊಂದಿದ್ದಾರೆ. ಇದು 2017ರ ಸೆಪ್ಟಂಬರ್‌ ಬಳಿಕ ರೂಟ್‌ ಗಳಿಸಿದ ಸರ್ವಾಧಿಕ ರೇಟಿಂಗ್‌ ಅಂಕವಾಗಿದೆ.

ಕೇನ್‌ ವಿಲಿಯಮ್ಸನ್‌ 919 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಸ್ಟೀವನ್‌ ಸ್ಮಿತ್‌ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ (891). ಈ ಸರಣಿಯಲ್ಲಿ ಇದೇ ಲಯ ದಲ್ಲಿ ಸಾಗಿದರೆ ರೂಟ್‌ ಮೊದಲ ಸ್ಥಾನಕ್ಕೆ ಹತ್ತಿರವಾಗುವ ಎಲ್ಲ ಸಾಧ್ಯತೆ ಇದೆ. 4ನೇ ಸ್ಥಾನದಲ್ಲಿರುವವರು ಆಸ್ಟ್ರೇಲಿಯದ ಮಾರ್ನಸ್‌ ಲಬುಶೇನ್‌ (878).

ಚೊಚ್ಚಲ ಪಂದ್ಯದಲ್ಲೇ ಡಬಲ್‌ ಸೆಂಚುರಿ ಬಾರಿಸಿ ಮೆರೆದ ವಿಂಡೀಸಿನ ಕೈಲ್‌ ಮೇಯರ್ 40ನೇ ಸ್ಥಾನಿಯಾಗಿ ರ್‍ಯಾಂಕಿಂಗ್‌ ಯಾದಿ ಪ್ರವೇಶಿಸಿದ್ದಾರೆ.

ಆ್ಯಂಡರ್ಸನ್‌ ಜಿಗಿತ
ಚೆನ್ನೈಯಲ್ಲಿ ಘಾತಕ ಬೌಲಿಂಗ್‌ ಪ್ರದರ್ಶನ ನೀಡಿದ ಜೇಮ್ಸ್‌ ಆ್ಯಂಡರ್ಸನ್‌ ಆರರಿಂದ 3ನೇ ಸ್ಥಾನಕ್ಕೆ ಜಿಗಿದರು (826). ಪ್ಯಾಟ್‌ ಕಮಿನ್ಸ್‌ (908) ಮತ್ತು ಸ್ಟುವರ್ಟ್‌ ಬ್ರಾಡ್‌ (830) ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ. ದಕ್ಷಿಣ ಆಫ್ರಿಕಾಕ್ಕೆ ವೈಟ್‌ವಾಶ್‌ ಮಾಡಿದ ಪಾಕಿಸ್ಥಾನಿ ತಂಡದ ಬಹುತೇಕ ಆಟಗಾರರೂ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next