Advertisement

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಕೊಹ್ಲಿ ನಂ.1

11:17 AM Dec 26, 2019 | Team Udayavani |

ದುಬಾೖ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮಂಗಳವಾರ ಪ್ರಕಟಿಸಲಾದ ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರ ರ್‍ಯಾಂಕಿನ ಬ್ಯಾಟ್ಸ್‌ ಮನ್‌ ಆಗಿ ವರ್ಷ ಮುಗಿಸಿದ್ದಾರೆ. ಅಜಿಂಕ್ಯ ರಹಾನೆ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.

Advertisement

ಒಟ್ಟಾರೆ 928 ಅಂಕ ಹೊಂದಿರುವ ಕೊಹ್ಲಿ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರಿಗಿಂತ 17 ಅಂಕ ಮುನ್ನಡೆಯಲ್ಲಿದ್ದಾರೆ. ನ್ಯೂಜಿಲ್ಯಾಂಡಿನ ನಾಯಕ ಕೇನ್‌ ವಿಲಿಯಮ್ಸನ್‌ (864) ವರ್ಷಾಂತ್ಯದಲ್ಲಿ ಮೂರನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

ಬಾಬರ್‌ ಅಜಂ 6ನೇ ಸ್ಥಾನ
ಚೇತೇಶ್ವರ ಪೂಜಾರ (791) ತನ್ನ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ ಏಳನೇ ಸ್ಥಾನಕ್ಕೆ ಕುಸಿದಿರುವ ರಹಾನೆ ಅವರು ಪಾಕಿಸ್ಥಾನದ ಬಾಬರ್‌ ಅಜಂ ಅವರಿಗೆ ಆರನೇ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಕರಾಚಿ ಟೆಸ್ಟ್‌ ನಲ್ಲಿ ಅಜೇಯ ಶತಕ ಮತ್ತು 60 ರನ್‌ ಹೊಡೆದಿರುವ ಅಜಂ ಮೂರು ಸ್ಥಾನ ಮೇಲಕ್ಕೇರಿ ಆರರಲ್ಲಿ ನಿಂತಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಆಗಿದೆ.

ಬಾಬರ್‌ ಅವರ ಅಮೋಘ ನಿರ್ವಹಣೆಯಿಂದಾಗಿ ಒಂದು ಸ್ಥಾನ ಕುಸಿದಿರುವ ರಹಾನೆ (759), ಡೇವಿಡ್‌ ವಾರ್ನರ್‌ (755) ಮತ್ತು ಜೋ ರೂಟ್‌ (752) ಅನುಕ್ರಮವಾಗಿ ಏಳರಿಂದ 9ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡಿನ ರಾಸ್‌ ಟೇಲರ್‌ (714) 10ನೇ ಸ್ಥಾನ ಪಡೆದಿದ್ದಾರೆ.

ಅಗರ್ವಾಲ್‌ ಮತ್ತು ಏಕದಿನ ತಂಡದ ಉಪನಾಯಕ ರೋಹಿತ್‌ ಶರ್ಮ ಅವರು ಅಗ್ರ 20ರೊಳಗಿನ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಬ್ಬರು ಅನುಕ್ರಮವಾಗಿ 12 ಮತ್ತು 15ನೇ ಸ್ಥಾನ ಪಡೆದಿದ್ದಾರೆ.

Advertisement

ಬುಮ್ರಾ ಆರನೇ ಸ್ಥಾನ
ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜಸ್‌ಪ್ರೀತ್‌ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿ ಆರಂಭವಾಗುವ ಮೊದಲೇ ತಂಡದಿಂದ ಹೊರಗುಳಿದಿದ್ದರು. ಆದರೂ ಬೌಲರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌ ಅಗ್ರಸ್ಥಾನದಲ್ಲಿದ್ದಾರೆ. 898 ಅಂಕ ಹೊಂದಿರುವ ಕಮಿನ್ಸ್‌ ದ್ವಿತೀಯ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ ಅವರಿಗಿಂತ 59 ಅಂಕ ಮುನ್ನಡೆಯಲ್ಲಿದ್ದಾರೆ. ರಬಾಡ (839), ನೀಲ್‌ ವಾಗ್ನರ್‌ (834), ಜಾಸನ್‌ ಹೋಲ್ಡರ್‌ (830) ಮತ್ತು ಮಿಚೆಲ್‌ ಸ್ಟಾರ್ಕ್‌ (806) ಅಗ್ರ ಐದರೊಳಗಿನ ಸ್ಥಾನದಲ್ಲಿರುವ ಬೌಲರ್‌ಗಳಾಗಿದ್ದಾರೆ.

ಟೆಸ್ಟ್‌ ಆಲ್‌ರೌಂಡರ್‌ಗಳ ಪೈಕಿ ಭಾರತದ ರವೀಂದ್ರ ಜಡೇಜ ದ್ವಿತೀಯ ಸ್ಥಾನದಲ್ಲಿ ಮುಂದುವರಿದರೆ ಜಾಸನ್‌ ಹೋಲ್ಡರ್‌ ಅಗ್ರಸ್ಥಾನದಲ್ಲಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌
ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ‌ವು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಉಳಿದುಕೊಂಡಿದೆ. ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯ (216) ಕ್ಕಿಂತ 144ಅಂಕ ಹೆಚ್ಚು. ಆಸ್ಟ್ರೇಲಿಯ (216), ಪಾಕಿಸ್ಥಾನ (80), ಶ್ರೀಲಂಕಾ (80), ನ್ಯೂಜಿಲ್ಯಾಂಡ್‌ (60) ಮತ್ತು ಇಂಗ್ಲೆಂಡ್‌ (56) ಅನಂತರದ ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next