Advertisement

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ : ಸ್ಟೀವನ್‌ ಸ್ಮಿತ್‌ ನಂ.1, ಕೊಹ್ಲಿ ದ್ವಿತೀಯ

10:05 AM Mar 04, 2020 | sudhir |

ದುಬಾೖ: ನ್ಯೂಜಿಲ್ಯಾಂಡ್‌ ತಂಡದೆ ದುರಿನ ಟೆಸ್ಟ್‌ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದ್ದರೂ ಭಾರತವು ಮಂಗಳವಾರ ಪ್ರಕಟಗೊಂಡ ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ನಂಬರ್‌ ವನ್‌ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಭಾರತವು ಒಟ್ಟಾರೆ 116 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿ ಯಲಿದೆ. ಭಾರತಕ್ಕೆ ತೀವ್ರ ಪೈಪೋಟಿ ನೀಡಿದ ನ್ಯೂಜಿಲ್ಯಾಂಡ್‌ 110 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಆಸ್ಟ್ರೇಲಿಯ (108 ಅಂಕ) ಮೂರನೇ ಸ್ಥಾನದಲ್ಲಿದೆ. ಭಾರತವು 0-2 ಅಂತರದಿಂದ ನ್ಯೂಜಿಲ್ಯಾಂಡ್‌ ವಿರುದ್ಧದ ಟೆಸ್ಟ್‌ ಸರಣಿ ಕಳೆದುಕೊಂಡಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಟೆಸ್ಟ್‌ ಸರಣಿ ಸೋತಿರುವುದು ಇದೇ ಮೊದಲ ಸಲ.

ಕೊಹ್ಲಿ ದ್ವಿತೀಯ
ಟೆಸ್ಟ್‌ ಸರಣಿಯಲ್ಲಿ ನಿರಾಶಾದಾಯಕ ನಿರ್ವಹಣೆ ನೀಡಿದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನ ಉಳಿಸಿಕೊಂಡಿದ್ದಾರೆ. ಆಡಿದ ನಾಲ್ಕು ಇನ್ನಿಂಗ್ಸ್‌ ಗಳಲ್ಲಿ ಅವರು ಒಟ್ಟು 38 ರನ್‌ ಗಳಿಸಿದ್ದರು ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ನ್ಯೂಜಿಲ್ಯಾಂಡಿನ ಆರಂಭಿಕ ಟಾಮ್‌ ಬ್ಲಿಂಡೆಲ್‌, ಭಾರತದ ಪೃಥ್ವಿ ಶಾ ಮತ್ತು ಈ ಸರಣಿ ಮೂಲಕ ಟೆಸ್ಟ್‌ಗೆ ಪದಾರ್ಪಣೆಗೈದಿದ್ದ ಕೈಲ್‌ ಜಾಮೀಸನ್‌ ತಮ್ಮ ರ್‍ಯಾಂಕಿಂಗ್‌ನಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಬ್ಲಿಂಡೆಲ್‌ 117 ರನ್‌ ಗಳಿಸಿದ್ದಾರೆ. ಈ ಸಾಧನೆಯಿಂದ ಅವರು 27 ಸ್ಥಾನ ಮೇಲಕ್ಕೇರಿದ್ದು 46ನೇ ಸ್ಥಾನದಲ್ಲಿದ್ದಾರೆ. ಕ್ರೈಸ್ಟ್‌ಚರ್ಚ್‌ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ ನಲ್ಲಿ 54 ರನ್‌ ಗಳಿಸಿದ್ದ ಪೃಥ್ವಿ ಶಾ 17 ಸ್ಥಾನ ಮೇಲಕ್ಕೇರಿ 76ನೇ ಸ್ಥಾನದಲ್ಲಿದ್ದಾರೆ.

ಸೌಥಿಗೆ ನಾಲ್ಕನೇ ಸ್ಥಾನ
ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಟಿಮ್‌ ಸೌಥಿ (ನಾಲ್ಕನೇ ಸ್ಥಾನ) ಅಗ್ರ ಐದರೊಳಗಿನ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಜಸ್‌ಪ್ರೀತ್‌ ಬುಮ್ರಾ ಮತ್ತು ಟ್ರೆಂಟ್‌ ಬೌಲ್ಟ್ ಹತ್ತರೊಳಗಿನ ಸ್ಥಾನಗಳಿಗೆ ಮರಳಿದ್ದಾರೆ. ಅವರಿಬ್ಬರು ಅನುಕ್ರಮವಾಗಿ 7 ಮತ್ತು 9ನೇ ಸ್ಥಾನದಲ್ಲಿದ್ದಾರೆ. ಬಿಗು ದಾಳಿ ಸಂಘಟಿಸಿದ್ದ ಜಾಮೀಸನ್‌ 80ರಿಂದ 43ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಆಲ್‌ರೌಂಡರ್ ಪಟ್ಟಿಯ ಅಗ್ರ 10 ಸ್ಥಾನಗಳಲ್ಲಿ ಕೇವಲ ಒಂದು ಬದಲಾವಣೆಯಾಗಿದೆ. ಒಂದು ಸ್ಥಾನ ಕುಸಿತ ಕಂಡ ಸೌಥಿ 10ನೇ ಸ್ಥಾನದಲ್ಲಿದ್ದರೆ ತಂಡ ಸದಸ್ಯ ನೀಲ್‌ ವಾಗ್ನರ್‌ 10ರೊಳಗಿನ ಸ್ಥಾನದಿಂದ ಹೊರಬಿದ್ದಿದ್ದಾರೆ.

Advertisement

ಸ್ಟೀವನ್‌ ಸ್ಮಿತ್‌ ನಂ. ವನ್‌
ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ನಂಬರ್‌ ವನ್‌ ಸ್ಥಾನದಲ್ಲಿ ಮುಂದುವರಿದಿದ್ದಾರೆ. ದ್ವಿತೀಯ ಸ್ಥಾನಿ ಕೊಹ್ಲಿ ಅವರಿಗಿಂತ 25 ಅಂಕ ಮುನ್ನಡೆಯನ್ನು ಸ್ಮಿತ್‌ ಕಾಯ್ದುಕೊಂಡಿದ್ದಾರೆ. ಒಂದು ಸ್ಥಾನ ಮೇಲಕ್ಕೇರಿರುವ ಮಾರ್ನಸ್‌ ಲಬುಶೇನ್‌ ಮೂರನೇ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ನ್ಯೂಜಿಲ್ಯಾಂಡಿನ ನಾಯಕ ಕೇನ್‌ ವಿಲಿಯಮ್ಸನ್‌ ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next