Advertisement

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಕೊಹ್ಲಿ , ಕಮಿನ್ಸ್‌ ವರ್ಷಾಂತ್ಯದ ಟಾಪರ್

09:59 AM Dec 31, 2019 | Team Udayavani |

ದುಬಾೖ: ಭಾರತದ ವಿರಾಟ್‌ ಕೊಹ್ಲಿ ಮತ್ತು ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌ 2019ರ ವರ್ಷಾಂತ್ಯದ ನಂ.1 ಟೆಸ್ಟ್‌ ಬ್ಯಾಟ್ಸ್‌ಮನ್‌ ಹಾಗೂ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ವರ್ಷದುದ್ದಕ್ಕೂ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ಕಾಯ್ದುಕೊಂಡು ಬಂದ ವಿರಾಟ್‌ ಕೊಹ್ಲಿ ಖಾತೆಯಲ್ಲಿ 928 ಅಂಕಗಳಿವೆ. ದ್ವಿತೀಯ ಸ್ಥಾನದಲ್ಲಿರುವ ಸ್ಟೀವನ್‌ ಸ್ಮಿತ್‌ ಕೊಹ್ಲಿಂಗಿಂತ ಬಹಳ ಹಿಂದಿದ್ದು, 911 ಅಂಕ ಹೊಂದಿದ್ದಾರೆ. ತೃತೀಯ ಸ್ಥಾನದಲ್ಲಿರುವ ಕೇನ್‌ ವಿಲಿಯಮ್ಸನ್‌ ಗಳಿಸಿರುವ ಅಂಕ 822. ಇಲ್ಲಿನ ಅಂಕಗಳ ಅಂತರವನ್ನು ಗಮನಿಸಿದಾಗ ಕೊಹ್ಲಿ ಮತ್ತು ಸ್ಮಿತ್‌ ಅವರ ಬ್ಯಾಟಿಂಗ್‌ ಪಾರಮ್ಯ ಸಾಬೀತಾಗುತ್ತದೆ.
2016ರಿಂದ ಮೊದಲ್ಗೊಂಡು ಸತತ 4 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ಕ್ರಿಕೆಟಿಗನೆಂಬ ದಾಖಲೆಯನ್ನು ವಿರಾಟ್‌ ಕೊಹ್ಲಿ ಯಾರಿಗೂ ಬಿಟ್ಟುಕೊಟ್ಟಿಲ್ಲ ಎಂಬುದು ವಿಶೇಷ.

ಟಾಪ್‌-10 ಬ್ಯಾಟ್ಸ್‌ಮನ್‌ಗಳ ಯಾದಿಯಲ್ಲಿರುವ ಭಾರತದ ಉಳಿದಿಬ್ಬರು ಕ್ರಿಕೆಟಿಗರೆಂದರೆ ಚೇತೇಶ್ವರ್‌ ಪೂಜಾರ (5) ಮತ್ತು ಅಜಿಂಕ್ಯ ರಹಾನೆ (7). ಇಬ್ಬರ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆಂಚುರಿಯನ್‌ ಟೆಸ್ಟ್‌ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಕ್ವಿಂಟನ್‌ ಡಿ ಕಾಕ್‌ 8 ಸ್ಥಾನಗಳ ಪ್ರಗತಿಯೊಂದಿಗೆ 10ನೇ ಸ್ಥಾನ ಅಲಂಕರಿಸಿದ್ದಾರೆ. ಉಳಿದಂತೆ ಅಗ್ರ ಹತ್ತರ ಯಾದಿಯಲ್ಲಿ ಮಹತ್ವದ ಬದಲಾವಣೆಯೇನೂ ಸಂಭವಿಸಿಲ್ಲ.

ಕಮಿನ್ಸ್‌ 99 ವಿಕೆಟ್‌
ಬೌಲಿಂಗ್‌ ವಿಭಾಗದಲ್ಲಿ ಪ್ಯಾಟ್‌ ಕಮಿನ್ಸ್‌ 902 ಅಂಕಗಳೊಂದಿಗೆ ತಾನೇ ನಂಬರ್‌ ವನ್‌ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದೇ ವೇಳೆ ನ್ಯೂಜಿಲ್ಯಾಂಡಿನ ವೇಗಿ ನೀಲ್‌ ವ್ಯಾಗ್ನರ್‌ ಒಂದು ಸ್ಥಾನ ಮೇಲೇರಿ ನಂ.2 ಎನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ ಒಂದು ಸ್ಥಾನ ಕುಸಿತ ಕಾಣಬೇಕಾಯಿತು (3).

Advertisement

ಕಮಿನ್ಸ್‌ 2019ರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ಬೌಲರ್‌ ಕೂಡ ಹೌದು. ಅವರು 20.50ರ ಸರಾಸರಿಯಲ್ಲಿ 99 ವಿಕೆಟ್‌ ಸಂಪಾದಿಸಿದ್ದಾರೆ. ಗರಿಷ್ಠ ವಿಕೆಟ್‌ ಸಾಧಕರ ಯಾದಿಯಲ್ಲಿ ಅನಂತರದ ಸ್ಥಾನದಲ್ಲಿರುವವರೆಂದರೆ ಮಿಚೆಲ್‌ ಸ್ಟಾರ್ಕ್‌ (77) ಮತ್ತು ಮೊಹಮ್ಮದ್‌ ಶಮಿ (77).

ಟಾಪ್‌-10 ಬೌಲರ್‌ಗಳ ಯಾದಿಯಲ್ಲಿ ಭಾರತದ ಮೂವರಿದ್ದಾರೆ. ಇವರೆಂದರೆ ಜಸ್‌ಪ್ರೀತ್‌ ಬುಮ್ರಾ (6), ಆರ್‌. ಅಶ್ವಿ‌ನ್‌ (9) ಮತ್ತು ಮೊಹಮ್ಮದ್‌ ಶಮಿ (10). ಇವರಲ್ಲಿ ಬುಮ್ರಾ ತಮ್ಮ ಸ್ಥಾನ ಕಾಯ್ದುಕೊಂಡರೆ, ಅಶ್ವಿ‌ನ್‌ ಮತ್ತು ಶಮಿ ಒಂದು ಸ್ಥಾನ ಮೇಲೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next