ಟರೂಬ/ಪ್ರೊವಿಡೆನ್ಸ್: ಟಿ20 ವಿಶ್ವಕಪ್ ಪಂದ್ಯಾವಳಿ ಸೆಮಿಫೈನಲ್‌ನತ್ತ ಮುಖ ಮಾಡಿದೆ. ದಾಖಲೆ ಸಂಖ್ಯೆಯ 20 ತಂಡಗಳಲ್ಲಿ 4 ಮಾತ್ರ ರೇಸ್‌ನಲ್ಲಿ ಉಳಿದುಕೊಂಡಿವೆ. ಸೂಪರ್-8 ಮೊದಲ ವಿಭಾಗದಿಂದ ಭಾರತ (6 ಅಂಕ) ಮತ್ತು ಅಫ್ಘಾನಿಸ್ಥಾನ (4 ಅಂಕ); ಎರಡನೇ ವಿಭಾಗದಿಂದ ದಕ್ಷಿಣ ಆಫ್ರಿಕಾ (6 ಅಂಕ) ಮತ್ತು ಇಂಗ್ಲೆಂಡ್ (4 ಅಂಕ) ಸೆಮಿಫೈನಲ್ ಪ್ರವೇಶಿಸಿವೆ.
ಟರೂಬದಲ್ಲಿ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ದ. ಆಫ್ರಿಕಾ- ಅಫ್ಘಾನಿ ಸ್ಥಾನ ಮುಖಾಮುಖೀ ಆಗಲಿವೆ. ಗಯಾನಾದ ಪ್ರೊವಿಡೆನ್ಸ್‌ನಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡನ್ನು ಎದುರಿಸಲಿದೆ.
ವೇಳಾಪಟ್ಟಿಯಂತೆ ಇದು ಜೂ. 26 ಮತ್ತು 27ರಂದು ನಡೆಯುವ ಸ್ಪರ್ಧೆ. ಆದರೆ ಭಾರತೀಯ ಕಾಲಮಾನದಂತೆ ಎರಡೂ ಗುರುವಾರವೇ ಸಾಗಲಿದೆ. ಮೊದಲ ಸೆಮಿಫೈನಲ್ ಬೆಳಗ್ಗೆ 6 ಗಂಟೆಗೆ, ಎರಡನೇ ಸೆಮಿಫೈನಲ್ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಮೀಸಲು ದಿನ
ಮೊದಲ ಸೆಮಿಫೈನಲ್‌ಗೆ ಜೂ. 27 ಮೀಸಲು ದಿನವಾಗಿದೆ. ಆದರೆ ಭಾರತ- ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಕೇವಲ 48 ಗಂಟೆಯ ಅವಧಿಯಲ್ಲಿ ಫೈನಲ್ ಏರ್ಪಡುವುದೇ ಇದಕ್ಕೆ ಕಾರಣ. ಇದರ ಬದಲು 260 ನಿಮಿಷಗಳ ಹೆಚ್ಚುವರಿ ಅವಧಿಯನ್ನು ನೀಡಲಾಗಿದೆ. ಆದರೆ ದಕ್ಷಿಣ ಆಫ್ರಿಕಾ-ಆಫ್ಘಾನಿಸ್ಥಾನ ಪಂದ್ಯಕ್ಕೆ ಮೀಸಲು ದಿನ ಇರುವ ಕಾರಣ, ಪಂದ್ಯದ ದಿನ ಕೇವಲ 60 ನಿಮಿಷಗಳ ಹೆಚ್ಚುವರಿ ಅವಧಿಯನ್ನು ನೀಡಲಾಗಿದೆ. ಮೀಸಲು ದಿನದ ಆಟದ ಅವಧಿ 190 ನಿಮಿಷ.
ಸ್ಪಷ್ಟ ಫಲಿತಾಂಶಕ್ಕಾಗಿ ಕನಿಷ್ಠ 10 ಓವರ್‌ಗಳ ಆಟ ನಡೆಯಬೇಕಿದೆ. ಇಲ್ಲಿಯೂ ಆಟ ಅಸಾಧ್ಯವಾಗಿ ಪಂದ್ಯ ರದ್ದುಗೊಂಡರೆ ಸೂಪರ್-8ರಲ್ಲಿ ಅಗ್ರ ಸ್ಥಾನ ಹೊಂದಿದ ತಂಡಗಳು ಫೈನಲ್ ಪ್ರವೇಶಿಸಲಿವೆ. ಆಗ ದಕ್ಷಿಣ ಆಫ್ರಿಕಾ ಮತ್ತು ಭಾರತಕ್ಕೆ ಲಾಭವಾಗಲಿದೆ.