ಸಿಡ್ನಿ: ನೆದರ್ಲ್ಯಾಂಡ್ ವಿರುದ್ಧದ ಪಂದ್ಯವನ್ನು ನಿರೀಕ್ಷೆಯಂತೆ ಸುಲಭವಾಗಿ ಜಯಿಸಿದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ನಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಭಾರತದ ಆಲ್ ರೌಂಡ್ ಆಟಕ್ಕೆ ತಲೆಬಾಗಿದ ಡಚ್ಚರು 56 ರನ್ ಅಂತರದ ಸೋಲನುಭವಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 20 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 179 ರನ್ ಗಳಿಸಿದರೆ, ನೆದರ್ಲ್ಯಾಂಡ್ ತಂಡವು 9 ವಿಕೆಟ್ ಕಳೆದುಕೊಂಡು 123 ರನ್ ಮಾತ್ರ ಗಳಿಸಿತು.
ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮತ್ತೆ ಉತ್ತಮ ಆರಂಭ ಪಡೆಯಲಿಲ್ಲ. ಕಳೆದ ಪಂದ್ಯದಲ್ಲಿ ಅಗ್ಗಕ್ಕೆ ವಿಕೆಟ್ ಒಪ್ಪಿಸಿದ್ದ ಕೆಎಲ್ ರಾಹುಲ್ ಇಂದೂ ವಿಫಲರಾದರು. ಆದರೆ ನಂತರ ಜೊತೆಯಾದ ನಾಯಕ ರೋಹಿತ್ ಮತ್ತು ವಿರಾಟ್ ಕೊಹ್ಲಿ ಎರಡು ವಿಕೆಟ್ ಗೆ 73 ರನ್ ಜೊತೆಯಾಟವಾಡಿದರು. 53 ರನ್ ಗಳಿಸಿದ ರೋಹಿತ್ ಔಟಾದರೆ, ವಿರಾಟ್ ಕೊಹ್ಲಿ ಅಜೇಯ 62 ರನ್ ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 51 ರನ್ ಗಳಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ ಮುರಿಯದ 95 ರನ್ ಜೊತೆಯಾಟವಾಡಿದರು.
ಇದನ್ನೂ ಓದಿ:ಪಿಒಕೆ, ಗಿಲ್ಗಿಟ್ ಪ್ರದೇಶ ಭಾರತಕ್ಕೆ ಸೇರಿದಾಗಲೇ ನಮ್ಮ ಸಂಕಲ್ಪ ಪೂರ್ಣ: ರಾಜನಾಥ್ ಸಿಂಗ್
ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ ಪರ ಯಾವುದೇ ಆಟಗಾರರು ದೊಡ್ಡ ಇನ್ನಿಂಗ್ ಆಡಲಿಲ್ಲ. ಪ್ರಿಂಗಲ್ 20 ರನ್, ಕಾಲಿನ್ ಅಕರ್ಮನ್ 17 ರನ್ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಅಕ್ಸರ್ ಪಟೇಲ್ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.