ದುಬೈ: ಐಸಿಸಿ ಟಿ20 ವಿಶ್ವಕಪ್ 2024 ಇತ್ತೀಚೆಗೆ ಅಂತ್ಯವಾಗಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಗೆದ್ದು ಚಾಂಪಿಯನ್ ಆಗಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ನಡೆದ ಟಿ20 ವಿಶ್ವಕಪ್ ನಿಂದ (T20 World Cup 2024) ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಭಾರೀ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.
ಐಸಿಸಿ ಟಿ20 ವಿಶ್ವಕಪ್ 2024 ಆಯೋಜನೆಯಿಂದ ಐಸಿಸಿಗೆ ಸುಮಾರು 20 ಮಿಲಿಯನ್ ಯುಎಸ್ ಡಾಲರ್ ಅಂದರೆ 167 ಕೋಟಿ ರೂ ನಷ್ಟವಾಗಿದೆ. ಯುಎಸ್ಎದಲ್ಲಿ ವಿಶ್ವಕಪ್ ಆಯೋಜನೆ ಮಾಡಿದ ಕಾರಣದಿಂದ ಐಸಿಸಿ ಕೈಸುಟ್ಟುಕೊಂಡಿದೆ. ಶುಕ್ರವಾರ ಕೊಲಂಬೋದಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಭೆಯಲ್ಲಿ ಈ ವಿಚಾರದ ಚರ್ಚೆಯಾಗಲಿದೆ.
ವಾರ್ಷಿಕ ಸಭೆಯಲ್ಲಿ ಚರ್ಚೆಯಾಗಲಿರುವ ಅಜೆಂಡಾದ 9 ಪಾಯಿಂಟ್ ಗಳಲ್ಲಿ ಈ ವಿಚಾರವಿಲ್ಲ. ಆದರೆ ಈ ವಿಚಾರದ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಸೇರಿದಂತೆ ಪಂದ್ಯಾವಳಿಯ ಪ್ರಮುಖ ಭಾಗವನ್ನು ಯುಎಸ್ಎ ನಲ್ಲಿ ಆಯೋಜಿಸಲಾಗಿತ್ತು.
ಅಮೆರಿಕ ಭಾಗದಲ್ಲಿ ಕ್ರಿಕೆಟ್ ಪ್ರಚಾರ ಮಾಡುವ ಸಲುವಾಗಿ ಇದೇ ಮೊದಲ ಬಾರಿಗೆ ಆ ಭಾಗದಲ್ಲಿ ಐಸಿಸಿ ಪ್ರಮುಖ ಕೂಟವನ್ನು ಆಯೋಜನೆ ಮಾಡಿತ್ತು. ಇದಕ್ಕಾಗಿ ನೂತನ ಸ್ಟೇಡಿಯಂ ಸೇರಿ ಹಲವು ರೀತಿಯಲ್ಲಿ ಕೋಟ್ಯಾಂತರ ರೂ ಖರ್ಚು ಮಾಡಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಜನರು ಸ್ಟೇಡಿಯಂಗೆ ಬಾರದ ಕಾರಣದಿಂದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಅಧ್ಯಕ್ಷ ಸ್ಥಾನಕ್ಕೇರುವ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. ಗ್ರೆಗ್ ಬಾರ್ಕ್ಲೇ ಅವರು ಸದ್ಯ ಐಸಿಸಿ ಅಧ್ಯಕ್ಷರಾಗಿದ್ದಾರೆ.