Advertisement

ಐಸಿಸಿ ರ್‍ಯಾಂಕಿಂಗ್‌ ವ್ಯವಸ್ಥೆ ಸಮಂಜಸವಲ್ಲ: ಗಂಭೀರ್‌

08:35 AM May 12, 2020 | Sriram |

ಹೊಸದಿಲ್ಲಿ: ವಿರಾಟ್‌ ಕೊಹ್ಲಿ ಪಡೆ 2016-17ರ ಸಾಲಿನಲ್ಲಿ ಒಟ್ಟು 12 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ಕೇವಲ ಒಂದು ಪಂದ್ಯವನ್ನಷ್ಟೇ ಸೋತು ಉಳಿದೆಲ್ಲವನ್ನು ಗೆದ್ದು ಬೀಗಿತ್ತು. ಹೀಗಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ನೂತನ ರ್‍ಯಾಂಕಿಂಗ್‌ನಲ್ಲಿ ಭಾರತ ತಂಡವನ್ನು ಹಠಾತ್‌ 3ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿರುವುದು ಸರಿಯಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಐಸಿಸಿ ವಿರುದ್ಧ ಕಿಡಿಕಾರಿದ್ದಾರೆ.

Advertisement

ಇದೇ ತಿಂಗಳ ಆರಂಭದಲ್ಲಿ ಐಸಿಸಿ ಪ್ರಕಟಿಸಿದ್ದ ನೂತನ ಟೆಸ್ಟ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಟೀಮ್‌ ಇಂಡಿಯಾ 2016ರ ಬಳಿಕ ಮೊದಲ ಬಾರಿ ತನ್ನ ನಂ.1 ಸ್ಥಾನವನ್ನು ಕಳೆದುಕೊಂಡಿತ್ತು. ಕಳೆದ 42 ತಿಂಗಳು ಕಾಲ ಅಗ್ರಸ್ಥಾನದಲ್ಲಿದ್ದ ಭಾರತ ಹಠಾತ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದವು. ಈ ಬಗ್ಗೆ ಸ್ಟಾರ್‌ ಸ್ಪೋರ್ಟ್ಸ್ ಆನ್‌ಲೈನ್‌ ಸಂದರ್ಶನದಲ್ಲಿ ಮಾತನಾಡಿದ ಗಂಭೀರ್‌, ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ಅಂಕ ವಿತರಣೆಯ ನಿಯಮಗಳ ಮೇಲೆ ತಮಗೆ ಯಾವುದೇ ನಂಬಿಕೆ ಇಲ್ಲ. ವಿದೇಶದಲ್ಲಿ ಟೆಸ್ಟ್‌ ಗೆದ್ದಾಗಲೂ ಒಂದೇ ರೀತಿಯ ಅಂಕಗಳನ್ನು ನೀಡುವುದು ಸರಿಯಲ್ಲ ಎಂದು ಗಂಭೀರ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತ 3ನೇ ರ್‍ಯಾಂಕಿಂಗ್‌ ಪಡೆದದ್ದು ನನಗೆ ಬೇಸರವಾಗಿಲ್ಲ. ಆದರೆ ಇದರಿಂದಾಗಿ ರ್‍ಯಾಂಕಿಂಗ್‌ ವ್ಯವಸ್ಥೆ ಮೇಲೆ ವಿಶ್ವಾಸವೇ ಕಳೆದುಹೋದಂತಾಗಿದೆ. ಅದರಲ್ಲೂ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಈ ನಿಯಮ ಇನ್ನೂ ಕೆಟ್ಟದಾಗಿದೆ. ತವರಿನಲ್ಲಿ ಟೆಸ್ಟ್‌ ಗೆದ್ದರೂ, ವಿದೇಶದಲ್ಲಿ ಜಯ ಸಾಧಿಸಿದರೂ ಒಂದೇ ರೀತಿಯ ಅಂಕ ನೀಡುವ ಪದ್ಧತಿ ಸಮಂಜಸವಲ್ಲ ಎಂದು ಅವರು ಹೇಳಿದರು.

ಭಾರತಕ್ಕೆ ಅಗ್ರ ಸ್ಥಾನ ನೀಡಬೇಕು
ನನ್ನ ಪ್ರಕಾರ ಭಾರತ ನಂ. 1 ಸ್ಥಾನದಲ್ಲಿ ಮುಂದುವರಿಯಬೇಕು. ಏಕೆಂದರೆ ಭಾರತ ತವರಿನಾಚೆ ಆಡಿದ ಬಹುತೇಕ ಎಲ್ಲ ಟೆಸ್ಟ್‌ ಸರಣಿಗಳನ್ನು ಜಯಿಸಿದೆ. ಹೀಗಾಗಿ ಭಾರತಕ್ಕೆ ನಂ.1 ಪಟ್ಟ ನೀಡಬೇಕು. ಆಸ್ಟ್ರೇಲಿಯ ಏಷ್ಯಾ ಭಾಗದಲ್ಲಿ ಆಡಿದ ಎಲ್ಲ ಸರಣಿಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದೆ. ಈ ಕಾರಣದಿಂದ ಆಸೀಸ್‌ಗೆ ಅಗ್ರಸ್ಥಾನ ನೀಡಿರುವುದು ಸರಿಯಲ್ಲ ಎಂದು ಗಂಭೀರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next