ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕೂಟ ಆರಂಭವಾಗಿದ್ದು, ಮೊದಲ ವಾರದ ಪಂದ್ಯಗಳು ನಡೆದಿದೆ. ಹಲವು ಆಟಗಾರರು ಕೂಟದ ಆರಂಭದಲ್ಲಿಯೇ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದರ ನಡುವೆ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಪ್ರಗತಿ ಸಾಧಿಸಿದರೆ, ಬೌಲಿಂಗ್ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದ ಮೊಹಮ್ಮದ್ ಸಿರಾಜ್ ತಮ್ಮ ಅಗ್ರ ಕ್ರಮಾಂಕ ಕಳೆದುಕೊಂಡಿದ್ದಾರೆ.
ಕ್ರಿಕೆಟ್ ವಿಶ್ವಕಪ್ ರಲ್ಲಿ ಆರಂಭಿಕ ಎಂಟು ಪಂದ್ಯಗಳಲ್ಲಿ ಹತ್ತು ಶತಕಗಳು ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದ ಅಗ್ರ ಪಟ್ಟಿಯನ್ನು ಅಲುಗಾಡಿಸಿದೆ. ವಿರಾಟ್ ಕೊಹ್ಲಿ, ಕ್ವಿಂಟನ್ ಡಿಕಾಕ್ ಮತ್ತು ಡೇವಿಡ್ ಮಿಲಾನ್ ಅವರು ಬ್ಯಾಟಿಂಗ್ ನಲ್ಲಿ ಟಾಪ್ ಟೆನ್ ಒಳಗೆ ಆಗಮಿಸಿದ್ದಾರೆ.
ಡಿಕಾಕ್ ಆರನೇ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಎಂಟನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಡೇವಿಡ್ ಮಲಾನ್ ಸ್ಥಾನ ಪಡೆದಿದ್ದಾರೆ. ಭಾರತದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರು ಭರ್ಜರಿ ನೆಗೆತ ಕಂಡಿದ್ದಾರೆ. 15 ರ‍್ಯಾಂಕ್ ಗಳ ಪ್ರಗತಿ ಕಂಡಿರುವ ರಾಹುಲ್ ಸದ್ಯ 19ನೇ ಸ್ಥಾನದಲ್ಲಿದ್ದಾರೆ. ದ.ಆಫ್ರಿಕಾದ ಏಡನ್ ಮಾರ್ಕ್ರಮ್ ಕೂಡಾ 11 ಸ್ಥಾನಗಳ ಪ್ರಗತಿ ಕಂಡು 21ನೇ ರ‍್ಯಾಂಕ್ ನಲ್ಲಿದ್ದಾರೆ.
ಇದನ್ನೂ ಓದಿ:America ಇರುವವರೆಗೆ ನಿಮ್ಮೊಂದಿಗೆ: ಇಸ್ರೇಲ್ ನಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ
ಮೊದಲ ಸ್ಥಾನದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತು ಎರಡನೇ ಸ್ಥಾನದಲ್ಲಿ ಭಾರತದ ಶುಭಮನ್ ಗಿಲ್ ಮುಂದುವರಿದಿದ್ದಾರೆ.
ಬೌಲಿಂಗ್ ಪಟ್ಟಿಯಲ್ಲಿಯೂ ಹಲವು ಬದಲಾವಣೆಗಳು ನಡೆದಿದೆ. ಮೊದಲ ಸ್ಥಾನದಲ್ಲಿದ್ದ ಸಿರಾಜ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಆಸೀಸ್ ವೇಗಿ ಜೋಶ್ ಹೇಜಲ್ ವುಡ್ ಅವರು ಮೊದಲ ಸ್ಥಾನಕ್ಕೇರಿದ್ದಾರೆ. ಎರಡು ಸ್ಥಾನ ಮೇಲಕ್ಕೇರಿರುವ ಟ್ರೆಂಟ್ ಬೌಲ್ಟ್ ಮೂರನೇ ರ‍್ಯಾಂಕ್ ನಲ್ಲಿದ್ದಾರೆ. ಮ್ಯಾಟ್ ಹೆನ್ರಿ ನಾಲ್ಕು ಸ್ಥಾನ ಮೇಲಕ್ಕೇರಿ ಐದನೇ ಸ್ಥಾನಕ್ಕೇರಿದ್ದಾರೆ.