Advertisement

T20 World Cup; ರೋಹಿತ್‌ ಅಬ್ಬರ: ಆಸೀಸ್ ಗೆ ಸೋಲುಣಿಸಿ ಸೆಮಿ ಪ್ರವೇಶಿಸಿದ ಟೀಮ್ ಇಂಡಿಯಾ

12:30 AM Jun 25, 2024 | Team Udayavani |

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯ):ನಾಯಕ ರೋಹಿತ್‌ ಶರ್ಮ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಸಾಹಸದ ನೆರವಿನಿಂದ ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ ಸೂಪರ್‌-8 ರೋಚಕ ಪಂದ್ಯದಲ್ಲಿ ಭಾರತ ತಂಡ 24 ರನ್ ಗಳ ಅಮೋಘ ಜಯ ಸಾಧಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.

Advertisement

ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 5 ವಿಕೆಟಿಗೆ 205 ರನ್‌ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಆಸೀಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನು ಭಾರತ ತೀರಿಸಿಕೊಂಡಿತು. ಸದ್ಯ ಆಸೀಸ್ ಸೆಮಿ ಫೈನಲ್ ಪ್ರವೇಶ ಅನುಮಾನವಿದೆ. ಮಂಗಳವಾರ ಬೆಳಗಿನ ಕೊನೆಯ ಲೀಗ್‌ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡ ಬಾಂಗ್ಲಾದೇಶ ತಂಡದ ವಿರುದ್ಧ ಜಯ ಸಾಧಿಸಿದ್ದೇ ಆದರೆ ಆಸೀಸ್ ಅಭಿಯಾನ ಇಲ್ಲಿಗೆ  ಅಂತ್ಯಗೊಳಿಸಬೇಕಾಗಿದೆ.

ಇಂಗ್ಲೆಂಡ್ ಎದುರಾಳಿ
ಜೂನ್ 27 ರಂದು ಗಯಾನಾದಲ್ಲಿ ನಡೆಯುವ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಆರಂಭದಲ್ಲಿ ಡೇವಿಡ್ ವಾರ್ನರ್(6 ರನ್) ಅವರ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಅಬ್ಬರಿಸಿತು. ಟ್ರಾವಿಸ್ ಹೆಡ್ ಅಪಾಯಕಾರಿಯಾಗಿ ಕಂಡು ಬಂದರು.76 ರನ್ (43 ಎಸೆತ) ಗಳಿಸಿದ್ದ ವೇಳೆ ಬುಮ್ರಾ ಅವರು ಎಸೆದ ಚೆಂಡನ್ನು ರೋಹಿತ್ ಕೈಗಿತ್ತು ನಿರ್ಗಮಿಸಿದರು. ನಾಯಕ ಮಿಚೆಲ್ ಮಾರ್ಷ್ 37, ಗ್ಲೆನ್ ಮ್ಯಾಕ್ಸ್‌ವೆಲ್ 20 ರನ್ ಗೆ ಆಟ ಮುಗಿಸಿದರು. ಮಾರ್ಕಸ್ ಸ್ಟೊಯಿನಿಸ್ 2, ಮ್ಯಾಥ್ಯೂ ವೇಡ್ 1 ರನ್ ಗಳಿಸಿ ಔಟಾದರು. ಕಮಿನ್ಸ್ 11 ರನ್, ಸ್ಟಾರ್ಕ್ 4 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ಬೌಲರ್ ಗಳು ಗೆಲುವಿಗಾಗಿ ದೊಡ್ಡ ಹೋರಾಟ ಸಂಘಟಿಸಿದರು. ಅರ್ಷದೀಪ್ ಸಿಂಗ್ 3 ವಿಕೆಟ್ ಕಿತ್ತರು.ಬಿಗಿ ದಾಳಿ ನಡೆಸಿದ ಕುಲದೀಪ್ ಯಾದವ್ 2 ಪ್ರಮುಖ ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ , ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಿತ್ತರು.

Advertisement

ರೋಹಿತ್ ಬ್ಯಾಟಿಂಗ್ ವೈಭವ

ರೋಹಿತ್‌ 41 ಎಸೆತಗಳಲ್ಲಿ 92 ರನ್‌ ಸಿಡಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಅವರ ಜೀವನಶ್ರೇಷ್ಠ ಬ್ಯಾಟಿಂಗ್‌ ಆಗಿದೆ. ವಿರಾಟ್‌ ಕೊಹ್ಲಿ 5 ಎಸೆತಗ ಳಲ್ಲಿ ಖಾತೆ ತೆರೆಯದೆ ಔಟಾದ ಬಳಿಕ ಅಬ್ಬರಿಸತೊಡಗಿದ ನಾಯಕ ರೋಹಿತ್‌ ಶರ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಮುನ್ನುಗ್ಗ ತೊಡಗಿದರು. ಮಿಚೆಲ್‌ ಸ್ಟಾರ್ಕ್‌ ಎಸೆತಗಳನ್ನು ಮೈದಾನ ದಾಚೆಗೆ ಬಡಿದಟ್ಟಿದರು. ಸ್ಟಾರ್ಕ್‌ ಅವರ 3ನೇ ಓವರ್‌ನಲ್ಲಿ ಬರೋಬ್ಬರಿ 29 ರನ್‌ ಸಿಡಿಸಿದರು (4 ಸಿಕ್ಸರ್‌, 1 ಬೌಂಡರಿ). ಇದು ಟಿ20ಯಲ್ಲಿ ಸ್ಟಾರ್ಕ್‌ ಅವರ ದುಬಾರಿ ಓವರ್‌ ಆಗಿ ದಾಖಲಾಯಿತು.

200 ಸಿಕ್ಸರ್‌ ದಾಖಲೆ
19 ಎಸೆತಗಳಲ್ಲಿ ರೋಹಿತ್‌ ಅರ್ಧ ಶತಕ ಪೂರೈಸಿದರು. ಪವರ್‌ ಪ್ಲೇಯಲ್ಲಿ ಭರ್ತಿ 60 ರನ್‌ ಒಟ್ಟುಗೂಡಿತು. ಇದರಲ್ಲಿ ರೋಹಿತ್‌ ಗಳಿಕೆಯೇ 51 ರನ್‌. ಸ್ಟಾರ್ಕ್‌ ಬಳಿಕ ಸ್ಪಿನ್ನರ್‌ ಆ್ಯಡಂ ಝಂಪ ಮೇಲೆರಗಿ ಹೋದ ರೋಹಿತ್‌, ಒಂದೇ ಓವರ್‌ನಲ್ಲಿ 16 ರನ್‌ ಬಾರಿಸಿದರು.
ಈ ಆರ್ಭಟದ ವೇಳೆ ರೋಹಿತ್‌ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 200 ಸಿಕ್ಸರ್‌ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆಯನ್ನೂ ಸ್ಥಾಪಿಸಿದರು. ಜತೆಗೆ ಆಸ್ಟ್ರೇಲಿಯ ವಿರುದ್ಧ 132 ಸಿಕ್ಸರ್‌ ಬಾರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವೊಂದರ ವಿರುದ್ಧ ಅತ್ಯಧಿಕ ಸಿಕ್ಸರ್‌ ಹೊಡೆದ ಕ್ರಿಕೆಟಿಗನೆನಿಸಿದರು.

ರೋಹಿತ್‌ ತಮ್ಮ 92 ರನ್ನುಗಳ ಸೊಗಸಾದ ಬ್ಯಾಟಿಂಗ್‌ ವೇಳೆ 8 ಸಿಕ್ಸರ್‌ ಹೊಡೆದರು. ಇದು ಭಾರತೀಯ ದಾಖಲೆ. 2007ರ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಯುವರಾಜ್‌ ಸಿಂಗ್‌ 7 ಸಿಕ್ಸರ್‌ ಬಾರಿಸಿದ ದಾಖಲೆ ಪತನಗೊಂಡಿತು.

ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸುವ ಉತ್ತಮ ಅವಕಾಶ ವೊಂದನ್ನು ರೋಹಿತ್‌ ಶರ್ಮ ಕಳೆದುಕೊಂಡರು. ಆದರೆ ಇದು ವಿಶ್ವಕಪ್‌ನಲ್ಲಿ ರೋಹಿತ್‌ ಅವರ ಅತ್ಯಧಿಕ ವೈಯಕ್ತಿಕ ಗಳಿಕೆ ಆಗಿದೆ. 2010ರಲ್ಲಿ ಆಸ್ಟ್ರೇಲಿಯ ವಿರುದ್ಧವೇ ಬ್ರಿಜ್‌ಟೌನ್‌ನಲ್ಲಿ ಅಜೇಯ 79 ರನ್‌ ಹೊಡೆದದ್ದು ಈವರೆಗಿನ ಹೆಚ್ಚಿನ ಮೊತ್ತವಾಗಿತ್ತು. ಅವರ 92 ರನ್‌ 41 ಎಸೆತಗಳಲ್ಲಿ ಬಂತು. ಸಿಡಿಸಿದ್ದು 7 ಬೌಂಡರಿ, 8 ಸಿಕ್ಸರ್‌.

10 ಓವರ್‌ ಅಂತ್ಯಕ್ಕೆ ಭಾರತ 2ಕ್ಕೆ 114 ರನ್‌ ಬಾರಿಸಿ ದೊಡ್ಡ ಮೊತ್ತದ ಸೂಚನೆ ನೀಡಿತು. ಉರುಳಿದ ಮತ್ತೂಂದು ವಿಕೆಟ್‌ ರಿಷಭ್‌ ಪಂತ್‌ (15) ಅವರದಾಗಿತ್ತು. ಈ ನಡುವೆ ಸೂರ್ಯಕುಮಾರ್‌ ಕೂಡ ಸಿಡಿದು ನಿಂತು 16 ಎಸೆತಗಳಲ್ಲಿ 31 ರನ್‌ ಬಾರಿಸಿದರು (3 ಫೋರ್‌, 2 ಸಿಕ್ಸರ್‌). ದುಬೆ 28, ಪಾಂಡ್ಯ ಅಜೇಯ 27 ರನ್‌ ಕೊಡುಗೆ ಸಲ್ಲಿಸಿದರು.

ಭಾರತದ 100 ರನ್‌ ಕೇವಲ 8.4 ಓವರ್‌ಗಳಲ್ಲಿ ಬಂತು. ಇದು ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾದ ದಾಖಲೆಯಾಗಿದೆ. 2007ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 10.2 ಓವರ್‌ಗಳಲ್ಲಿ 100 ರನ್‌ ಹೊಡೆದದ್ದು ಈವರೆಗಿನ ದಾಖಲೆ ಆಗಿತ್ತು. ರೋಹಿತ್‌ ಔಟಾದ ಬಳಿಕ ಭಾರತದ ರನ್‌ಗತಿ ಕುಂಟಿತಗೊಂಡಿತು.

ಭಾರತ ಅದೇ ತಂಡ
ಈ ಮಹತ್ವದ ಮುಖಾಮುಖಿ ಗಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಆಡಿಸಿದ ಹನ್ನೊಂದರ ಬಳಗವನ್ನೇ ಉಳಿಸಿ ಕೊಂಡಿತು. ಆಸ್ಟ್ರೇಲಿಯ ತಂಡದಲ್ಲಿ ಒಂದು ಪರಿವರ್ತನೆ ಕಂಡುಬಂತು. ಸ್ಪಿನ್ನರ್‌ ಆ್ಯಶ್ಟನ್‌ ಅಗರ್‌ ಬದಲು ವೇಗಿ ಮಿಚೆಲ್‌ ಬಂದರು.

Advertisement

Udayavani is now on Telegram. Click here to join our channel and stay updated with the latest news.

Next