Advertisement

2023-2027 ಕ್ರಿಕೆಟ್‌ ಋತು: 38 ಟೆಸ್ಟ್‌ , 39 ಏಕದಿನ ಪಂದ್ಯ ಆಡಲಿದೆ ಭಾರತ

10:49 PM Aug 17, 2022 | Team Udayavani |

ಹೊಸದಿಲ್ಲಿ: ಮುಂದಿನ 5 ವರ್ಷಗಳ ಪುರುಷರ ಕ್ರಿಕೆಟ್‌ ಪಂದ್ಯಗಳ ಅಂತಾರಾಷ್ಟ್ರೀಯ ವೇಳಾಪಟ್ಟಿ ಪ್ರಕಟಗೊಂಡಿದೆ. 2023ರ ಮೇ ಹಾಗೂ 2027ರ ಎಪ್ರಿಲ್‌ ನಡುವಿನ ಈ ಅವಧಿಯಲ್ಲಿ ಭಾರತ ಒಟ್ಟು 138 ದ್ವಿಪಕ್ಷೀಯ ಅಂತಾರಾಷ್ಟೀಯ ಪಂದ್ಯಗಳನ್ನು ಆಡಲಿದೆ. 38 ಟೆಸ್ಟ್‌, 39 ಏಕದಿನ ಹಾಗೂ 61 ಟಿ20 ಪಂದ್ಯಗಳು ಇದರಲ್ಲಿ ಸೇರಿವೆ. ಆದರೆ ಇದರಲ್ಲಿ ಪಾಕಿಸ್ಥಾನ ವಿರುದ್ಧದ ಯಾವುದೇ ಪಂದ್ಯ ಒಳಗೊಂಡಿಲ್ಲ.

Advertisement

ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ 12 ದೇಶಗಳು ಒಟ್ಟು 777 ಅಂತಾರಾಷ್ಟ್ರೀಯ ಪಂದ್ಯಗಳನ್ನು ಈ 5 ವರ್ಷಗಳಲ್ಲಿ ಆಡಲಿವೆ. 173 ಟೆಸ್ಟ್‌, 281 ಏಕದಿನ ಹಾಗೂ 323 ಟಿ20 ಪಂದ್ಯಗಳನ್ನು ಇದು ಒಳಗೊಂಡಿದೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಕೂಡ ಇದರಲ್ಲಿ ಸೇರಿದೆ. ಇದು ಕಳೆದ 5 ವರ್ಷಗಳ “ಕ್ರಿಕೆಟ್‌ ಸೈಕಲ್‌’ಗೆ ಹೋಲಿಸಿದರೆ ಜಾಸ್ತಿ. ಕಳೆದ ಋತುವಿನಲ್ಲಿ ಒಟ್ಟು 694 ಪಂದ್ಯಗಳಿದ್ದವು.

ಮುಂದಿನೈದು ವರ್ಷಗಳ ಅವಧಿಯಲ್ಲಿ ಭಾರತ ಆಡಲಿರುವ ಅತೀ ದೊಡ್ಡ ಟೆಸ್ಟ್‌ ಸರಣಿಯೆಂದರೆ 2024ರ ಜನವರಿ-ಮಾರ್ಚ್‌ ಅವಧಿಯಲ್ಲಿ ನಡೆಯುವ ಇಂಗ್ಲೆಂಡ್‌ ಎದುರಿನ 5 ಪಂದ್ಯಗಳ ಟೆಸ್ಟ್‌ ಸರಣಿ. ಹಾಗೆಯೇ ಆಸ್ಟ್ರೇಲಿಯ ಎದುರಿನ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಕೂಡ ಹೌದು. 2024-25ರ ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತ 5 ಟೆಸ್ಟ್‌ಗಳನ್ನು ಆಡಲಿದೆ. 1991ರ ಬಳಿಕ ನಡೆಯುವ ಭಾರತ-ಆಸ್ಟ್ರೇಲಿಯ ನಡುವಿನ ಸುದೀರ್ಘ‌ ಟೆಸ್ಟ್‌ ಸರಣಿ ಇದಾಗಿದೆ. ಹಾಗೆಯೇ 2023ರ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಸರಣಿಯಲ್ಲಿ 4 ಟೆಸ್ಟ್‌ ಪಂದ್ಯಗಳನ್ನು ಆಡಲಾಗುವುದು.

ಜುಲೈ-ಆಗಸ್ಟ್‌ ಅವಧಿಯಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ಗೆ ಪ್ರವಾಸಗೈದು 2 ಟೆಸ್ಟ್‌, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

2023ರ ಏಕದಿನ ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಭಾರತ 27 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಆರಂಭಿಕ ಪಂದ್ಯ ಗುರುವಾರ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆಯಲಿದೆ.

Advertisement

ಇಂಗ್ಲೆಂಡ್‌ ಅತ್ಯಧಿಕ ಟೆಸ್ಟ್‌
ಮುಂದಿನೈದು ವರ್ಷಗಳ ಕ್ರಿಕೆಟ್‌ ಕ್ಯಾಲೆಂಡರ್‌ನಲ್ಲಿ ಇಂಗ್ಲೆಂಡ್‌ ಅತ್ಯಧಿಕ 43 ಟೆಸ್ಟ್‌, ಆಸ್ಟ್ರೇಲಿಯ 40 ಟೆಸ್ಟ್‌ಗಳಲ್ಲಿ ಕಾಣಿಸಿಕೊಳ್ಳಲಿವೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ನ್ಯೂಜಿಲ್ಯಾಂಡ್‌ 32 ಟೆಸ್ಟ್‌, ದಕ್ಷಿಣ ಆಫ್ರಿಕಾ 39 ಟೆಸ್ಟ್‌, ಪಾಕಿಸ್ಥಾನ 27 ಟೆಸ್ಟ್‌, ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್‌ ತಲಾ 25 ಟೆಸ್ಟ್‌ಗಳನ್ನು ಆಡಲಿವೆ.

ಏಕಕಾಲದಲ್ಲಿ ಐಪಿಎಲ್‌-ಪಿಎಸ್‌ಎಲ್‌!
ಐಪಿಎಲ್‌ ಮತ್ತು ಪಾಕಿಸ್ಥಾನ್‌ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಏಕಕಾಲದಲ್ಲಿ ನಡೆದರೆ ಏನಾದೀತು? ಕ್ರಿಕೆಟ್‌ ಪ್ರೇಮಿಗಳಿಗೆ ಯಾವುದೇ ತೊಂದರೆ ಆಗದು. ಇವೆರಡು ಕೂಟಗಳ ವೀಕ್ಷಕ ವರ್ಗವೇ ಬೇರೆ. ಆದರೆ ಎರಡೂ ಕಡೆಗಳಲ್ಲಿ ಆಡ ಬಯಸುವ ಆಟಗಾರರಿಗೆ ಹೊಂದಾಣಿಕೆ ಸಾಧ್ಯವಾಗದು. ಅವರು ಯಾವುದಾದ ರೊಂದು ಕೂಟವನ್ನು ಆಯ್ದುಕೊಳ್ಳ ಬೇಕಾಗುತ್ತದೆ.

ಇಂಥದೊಂದು ಸ್ಥಿತಿ 2025ರಲ್ಲಿ ಮೊದಲ ಸಲ ಎದುರಾಗಲಿಕ್ಕಿದೆ. ಅಂದಿನ ಸೀಸನ್‌ ನಲ್ಲಿ ಐಪಿಎಲ್‌ ಮತ್ತು ಪಿಎಸ್‌ಎಲ್‌ ಏಕಕಾಲ ದಲ್ಲಿ ಏರ್ಪಡಲಿದೆ.

2025ರಲ್ಲಿ ಪಾಕಿ ಸ್ಥಾನ “ಐಸಿಸಿ ಚಾಂಪಿಯನ್ಸ್‌ ಟ್ರೋಫಿ’ಯ ಆತಿಥ್ಯವನ್ನೂ ವಹಿಸಬೇಕಾದ ಕಾರಣ ತನ್ನ 10ನೇ ಸೀಸನ್‌ನ ಪಿಎಸ್‌ಎಲ್‌ ಕೂಟವನ್ನು ಅನಿವಾರ್ಯವಾಗಿ ಮುಂದೂಡ ಬೇಕಾಗುತ್ತದೆ. ಸಾಮಾನ್ಯ ವಾಗಿ ಜನವರಿ- ಫೆಬ್ರವರಿಯಲ್ಲಿ ನಡೆಯಬೇಕಿರುವ ಪಿಎಸ್‌ಎಲ್‌ ಕೂಟವನ್ನು ಮಾರ್ಚ್‌- ಎಪ್ರಿಲ್‌ ಅವಧಿಯಲ್ಲಿ ನಡೆಸಬೇಕಾಗುತ್ತದೆ. 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ಫೆಬ್ರವರಿಯಲ್ಲಿ ನಡೆಯಲಿದೆ.

ಚಾಂಪಿಯನ್ಸ್‌ ಟ್ರೋಫಿ ಮೂಲಕ ಪಾಕಿ ಸ್ಥಾನ ದಲ್ಲಿ 30 ವರ್ಷಗಳ ಬಳಿಕ ಮೊದಲ ಐಸಿಸಿ ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿದೆ ಎಂಬುದಷ್ಟೇ ಸಮಾಧಾನಕರ ಸಂಗತಿ.

ಅಂದಹಾಗೆ ಇದೆಲ್ಲವೂ ಐಸಿಸಿಯ “ಪಂಚ ವಾರ್ಷಿಕ ವೇಳಾಪಟ್ಟಿ’ಯ ಪರಿಣಾಮ. ಒಂದು ಲೆಕ್ಕಾಚಾರದಲ್ಲಿ ಇದರಿಂದ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿಗೆ ಕೋಟಿಗಟ್ಟಲೆ ನಷ್ಟ ಸಂಭವಿಸಲಿದೆ. ಕಾರಣ, ಐಪಿಎಲ್‌ ಜನಪ್ರಿಯತೆ ಮತ್ತು ಅದು ಸುರಿಯುವ ದುಡ್ಡು! ಇದರ ಮುಂದೆ ಪಿಎಸ್‌ಎಲ್‌ ಏನೂ ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next